ಪಯಸ್ವಿನಿ ಗೆಳೆಯರ ಬಳಗ ಮತ್ತು ಡಾ.ಯು.ಪಿ.ಶಿವಾನಂದ ಅಭಿಮಾನಿಗಳ ಬಳಗದ ವತಿಯಿಂದ ಸುದ್ದಿ ಬಿಡುಗಡೆ ಪತ್ರಿಕೆಯ ಸ್ಥಾಪಕರು ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪನಾ ನಿರ್ದೇಶಕರಾದ ಡಾ.ಯು.ಪಿ.ಶಿವಾನಂದರಿಗೆ ಅಭಿನಂದನೆ ಮತ್ತು ಸನ್ಮಾನ ಕಾರ್ಯಕ್ರಮ ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದ ಆವರಣದ ನಯನ ಕಲಾಮಂದಿರದಲ್ಲಿ ನಡೆಯಿತು.

ಸುಳ್ಯ: ಪಯಸ್ವಿನಿ ಗೆಳೆಯರ ಬಳಗ ಮತ್ತು ಡಾ.ಯು.ಪಿ.ಶಿವಾನಂದ ಅಭಿಮಾನಿಗಳ ಬಳಗದ ವತಿಯಿಂದ ಸುದ್ದಿ ಬಿಡುಗಡೆ ಪತ್ರಿಕೆಯ ಸ್ಥಾಪಕರು ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪನಾ ನಿರ್ದೇಶಕರಾದ ಡಾ.ಯು.ಪಿ.ಶಿವಾನಂದರಿಗೆ ಅಭಿನಂದನೆ ಮತ್ತು ಸನ್ಮಾನ ಕಾರ್ಯಕ್ರಮ ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದ ಆವರಣದ ನಯನ ಕಲಾಮಂದಿರದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಕಲ್ಮಡ್ಕ ಅವರು ಅಭಿನಂದನಾ ಭಾಷಣ ಮಾಡಿದರು. ಮಾಧ್ಯಮ ರಂಗದಲ್ಲೇ ವಿಶಿಷ್ಟವಾದ ಸುದ್ದಿ ಹಲವು ಕಾರಣಗಳಿಗಾಗಿ ಮಾದರಿಯಾದುದು. ಇದರ ಸ್ಥಾಪಕ ಡಾ.ಯು.ಪಿ.ಶಿವಾನಂದರು ತನ್ನ ಜ್ಞಾನ ಪಕ್ವತೆಯಿಂದ ಸಮಾಜಕ್ಕೆ ಗೌರವ ತಂದುಕೊಟ್ಟಿದ್ದಾರೆ. ಅವರೋರ್ವ ಪಕ್ಷಾತೀತ ಸಂಪಾದಕ ಎಂದು ಹೇಳಿದರು.

ಹಿರಿಯ ಪತ್ರಕರ್ತ ಈಶ್ವರ ದೈತೋಟ ಸಮಾರಂಭವನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೆಪಿಟಿಸಿಎಲ್ ನಿವೃತ್ತ ಹಿರಿಯ ಅಧಿಕಾರಿ ಎಂ. ಬಿ. ಜಯರಾಮ್ ವಹಿಸಿದ್ದರು. ಡಾ. ಶಿವಾನಂದರ ಚಿಂತನೆ ಮತ್ತು ದೂರದೃಷ್ಟಿತ್ವದಿಂದ ಮಾಧ್ಯಮ ರಂಗದ ಜತೆಗೆ ಸಮಾಜವೂ ಬೆಳೆದಿದೆ ಎಂದವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಶಿಕ್ಷಣ ತಜ್ಞ ಪ್ರೊ. ಕೆ. ಇ. ರಾಧಾಕೃಷ್ಣ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಪರ ಆಯುಕ್ತರಾದ ಡಿ. ವಿ. ಶಿವರಾಮ, ನಿವೃತ್ತ ಜಿಲ್ಲಾ ನ್ಯಾಯಾಧೀಶ, ಬೆಂಗಳೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಶಿವರಾಮ ಕೇವಳ ಭಾಗವಹಿಸಿದ್ದರು.

ವಿಶೇಷ ಆಹ್ವಾನಿತರಾಗಿ ನಿವೃತ್ತ ಐ.ಎಫ್.ಸಿ. ಅಧಿಕಾರಿ ಡಾ.ಕೆ.ಸುಂದರ ನಾಯ್ಕ್, ಸಹಕಾರ ನಗರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾದ ಗುರುಪ್ರಸಾದ್ ರೈ ಮೊರಂಗಲ್ಲು, ರಾಜ್ಯ ಬಿಜೆಪಿ ಕೇಂದ್ರ ಕಚೇರಿಯ ಮುಖ್ಯಸ್ಥರಾದ ಲೋಕೇಶ್ ಅಂಬೆಕಲ್ಲು, ಹೈಕೋರ್ಟಿನ ಹಿರಿಯ ವಕೀಲರಾದ ಬಾಲಕೃಷ್ಣ ಶಾಸ್ತ್ರಿ ಗಟ್ಟಿಗಾರು, ಧರ್ಮಪಾಲ ಗೌಡ ಎಣ್ಣೆಮಜಲು, ನಿವೃತ್ತ ಹಿರಿಯ ಅಧಿಕಾರಿ ಇಬ್ರಾಹಿಂ ಗೂನಡ್ಕ, ಉದ್ಯಮಿ, ಕಲಾಪೋಷಕರಾದ ಆರ್. ಕೆ. ಭಟ್ ಬೆಳ್ಳಾರೆ, ಲೇಖಕ, ಚಿಂತಕ ಕೆ.ಪಿ. ಸುರೇಶ್ ಕಂಜರ್ಪಣೆ, ಪತ್ರಕರ್ತೆ ಹೇಮಾ ವೆಂಕಟ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದ ಪ್ರಧಾನ ಸಂಚಾಲಕರಾದ ನ್ಯಾಯವಾದಿ ಎಂ.ಸ್ವಯಂಪ್ರಕಾಶ್ ಸ್ವಾಗತಿಸಿ ಪ್ರಸ್ತಾವನೆಗೈದರು. ಸಹ ಸಂಚಾಲಕರಾದ ಪತ್ರಕರ್ತ ಲಕ್ಷ್ಮೀಶ ಕಾಟುಕುಕ್ಕೆ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ವಿದುಷಿ ಜಯಲಕ್ಷ್ಮಿ ಎಸ್. ಭಟ್ ಮತ್ತು ತಂಡದವರಿಂದ ಭಕ್ತಿ ಸಂಗೀತ ಮತ್ತು ಯಕ್ಷಗಾನ ತಾಳಮದ್ದಳೆ ನಡೆಯಿತು.