ಸಾರಾಂಶ
ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಸಹಯೋಗದಲ್ಲಿ ಕಾರ್ಕಳದಲ್ಲಿ ಇತ್ತೀಚೆಗೆ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮದಲ್ಲಿ ‘ಬೃಹದಾರಣ್ಯಕ ಉಪನಿಷತ್ತು’ ಕುರಿತು ಉಪನ್ಯಾಸ ನಡೆಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ನಾಮರೂಪಗಳ ಆಚೆಗಿರುವ ಪರಮಾತ್ಮನ ಶಕ್ತಿಯ ಪರಿಚಯವನ್ನು ಮಾಡಿಸಿ ಅಂತಹ ಪರಮಾತ್ಮನೆಡೆಗೆ ಸಾಗಲು ನೆರವಾಗುವ ಇಂದ್ರಿಯಗಳ ನಿಗ್ರಹ, ಪರಿಶ್ರಮದ ಸಾಧನೆಯ ವಿವರಗಳನ್ನು ಶಿಷ್ಯರಿಗೆ ಬೋಧಿಸಿದ ಜ್ಞಾನವೇ ಬೃಹದಾರಣ್ಯಕ ಉಪನಿಷತ್ತು ಎಂದು ಸಂಸ್ಕೃತ ವಿದ್ವಾಂಸ ಹಾಗೂ ನಿವೃತ್ತ ಪ್ರಾಧ್ಯಾಪಕ ವಿದ್ಯಾವಾರಿಧಿ ಡಾ.ವಾಗೀಶ್ವರೀ ಶಿವರಾಮ್ ಹೇಳಿದರು.ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಸಹಯೋಗದಲ್ಲಿ ಕಾರ್ಕಳದಲ್ಲಿ ಇತ್ತೀಚೆಗೆ ನಡೆದ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮದಲ್ಲಿ ಅವರು ‘ಬೃಹದಾರಣ್ಯಕ ಉಪನಿಷತ್ತು’ ಕುರಿತು ಉಪನ್ಯಾಸ ನೀಡಿದರು.ನಮ್ಮ ವಿವೇಕದ ಪ್ರಜ್ಞೆಯನ್ನು ಜಾಗೃತಗೊಳಿಸಿ ಪಂಚೇಂದ್ರಿಯಗಳಿಗೆ ನಿಲುಕುವ ಭೌತಿಕ ಜ್ಞಾನವನ್ನು ಮೀರಿದ ಇಂದ್ರಿಯಾತೀತ ಜ್ಞಾನವನ್ನು ನೀಡುವ ಉಪನಿಷತ್ತುಗಳು, ಜ್ಞಾನದ ಬೆಳಕಿನೆಡೆಗೆ ನಮ್ಮನ್ನು ಕರೆದೊಯ್ಯುತ್ತವೆ. ನಮ್ಮನ್ನು ದುರ್ಬಲಗೊಳಿಸುವ ಅಹಂಕಾರ, ಮಮಕಾರ, ನಕಾರಾತ್ಮಕ ಚಿಂತನೆಗಳನ್ನು ಹೋಗಲಾಡಿಸಿ ಲೋಕಹಿತದ ಕಾರ್ಯದಲ್ಲಿಯೇ ಆನಂದವನ್ನು ಕಂಡುಕೊಳ್ಳುವ ಬಗ್ಗೆ ಉಪನಿಷತ್ತು ನಮಗೆ ಮಾರ್ಗದರ್ಶನ ನೀಡುತ್ತದೆ ಎಂದರು.ಡಾ.ನಾ.ಮೊಗಸಾಲೆ ಸಭಾಧ್ಯಕ್ಷತೆ ವಹಿಸಿದ್ದರು. ನಿತ್ಯಾನಂದ ಪೈ ಮತ್ತು ಮಿತ್ರಪಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೀತಾ ಮಲ್ಯ ಪ್ರಾರ್ಥಿಸಿದರು. ಪೂರ್ಣಿಮಾ ಶೆಣೈ ಅತಿಥಿಗಳನ್ನು ಪರಿಚಯಿಸಿದರು. ಮಾಲತಿ ವಸಂತರಾಜ್ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿದರು. ಜಗದೀಶ್ ಗೋಖಲೆ ವಂದಿಸಿದರು.