ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರೈತರ ಜೀವನಾಡಿಯಾಗಿರುವ ಕೆರೆಗಳ ಸಂರಕ್ಷಣೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮೈಸೂರು ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತಾಯ ಹೇಳಿದರು.ತಾಲೂಕಿನ ಬೆಸಗರಹಳ್ಳಿ ವಲಯದ ಕುಂಟನಹಳ್ಳಿಯಲ್ಲಿ ಕೆಂಚನಕಟ್ಟೆ ಕೆರೆ ಹಸ್ತಾಂತರ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಯುವಕರು ಸೇವಾ ಮನೋಭಾವ ಬೆಳೆಸಿಕೊಂಡು ಮುನ್ನಡೆಯಬೇಕು ಎಂದರು.
ರಾಜ್ಯದಲ್ಲಿ 800 ಕೆರೆಗಳನ್ನು ಅಭಿವೃದ್ಧಿಗೊಳಿಸುವ ಜೊತೆಗೆ ನೀರು ಶೇಖರಣೆ ಮಾಡಿ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಲಾಗಿದೆ. ಅದೇ ರೀತಿ ಕುಂಟನಹಳ್ಳಿ ಕೆಂಚನಕಟ್ಟೆ ಕೆರೆಯನ್ನು ನೂರಾರು ವರ್ಷಗಳಿಂದ ಹೂಳು ತುಂಬಿದ್ದು, ಈಗ ಹೂಳು ಎತ್ತಿ ಅಭಿವೃದ್ಧಿಪಡಿಸಲಾಗಿದೆ ಎಂದರು.ಕೆರೆ ಅಬಿವೃದ್ಧಿಗೆ ಸ್ಥಳೀಯ ಗ್ರಾಮಸ್ಥರು, ಯುವಕರ ಸಹಕಾರ ಅತ್ಯಮೂಲ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೆರೆಗಳನ್ನು ಅಭಿವೃದ್ಧಿ ಪಡಿಸಲು, ರೈತರಿಗೆ ಅನುಕೂಲ ಮಾಡಲು ಯೋಚಿಸಲಾಗಿದೆ. ಇದಕ್ಕೆ ಗ್ರಾಮದ ಯುವಕರು ಬೆಂಬಲವಾಗಿ ನಿಲ್ಲಬೇಕು. ಜೊತೆಗೆ ಸಮಾಜಮುಖಿ ಸೇವೆಯನ್ನು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಭೂಮಿ ಮೇಲಿನ ಪ್ರತಿಯೊಂದು ಜೀವಿಗೆ ನೀರು ಅತ್ಯಮೂಲ್ಯ. ರೈತರಿಗೂ ಕೃಷಿ ಚಟುವಟಿಕೆಗಳಿಗೆ ನೀರು ಅಗತ್ಯ. ಗ್ರಾಮಗಳಲ್ಲಿರುವ ಕೆರೆಗಳನ್ನು ಅಭಿವೃದ್ಧಿ ಪಡಿಸಿ ಹೆಚ್ಚು ನೀರು ಸಂಗ್ರಹಿಸಿದರೆ ಅಂತರ್ಜಲ ಹೆಚ್ಚಳವಾಗಿ ಕುಡಿಯುವ ನೀರು ಸೇರಿದಂತೆ ಕೃಷಿ ಚಟುವಟಿಕೆಗಳಿಗೂ ನೀರಿನ ಸಮಸ್ಯೆಯೂ ಕಡಿಮೆಯಾಗಲಿದೆ ಎಂದರು.ಮುಂದಿನ ಪೀಳಿಗೆಗೆ ಕೆರೆಯನ್ನು ಉಡುಗೊರೆ ನೀಡಲು 694ನೇ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಗ್ರಾಮದಲ್ಲಿ ಕಾಣದಂತಿದ್ದ ಕೆರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗುರುತಿಸುವಂತೆ ಮಾಡಲಾಗಿದೆ. ಇದನ್ನು ಉಳಿಸಿಕೊಳ್ಳುವುದು ಗ್ರಾಮಸ್ಥರ ಜವಾಬ್ದಾರಿ ಎಂದರು.
ಯೋಜನೆ ಜಿಲ್ಲಾ ನಿರ್ದೇಶಕರಾದ ಎಂ.ಚೇತನ ಮಾತನಾಡಿ, ಮನುಷ್ಯನ ಜೀವ ಜಲಗಳಾದ ಕೆರೆ, ಕಟ್ಟೆ, ನದಿಗಳನ್ನು ಸಂರಕ್ಷಿಸುವುದು ಇಂದಿನ ದಿನಗಳಲ್ಲಿ ಅಗತ್ಯ. ಯಾವ ಗ್ರಾಮಗಳಲ್ಲಿ ಗ್ರಾಮಭಿವೃದ್ಧಿ ಯೋಜನೆ ಸದಸ್ಯರ ಸಹಕಾರ ಇರುತದೆಯೋ ಅಲ್ಲಿ ಮಂಜುನಾಥನ ಆಶೀರ್ವಾದ ಇದ್ದೇ ಇರುತ್ತದೆ. ಇದರಿಂದ ಕೃಷಿ ಹಾಗೂ ಜನ ಜಾನುವಾರುಗಳಿಗೆ ಅನುಕೂಲವಾಗುತ್ತದೆ ಎಂದರು. ತಾಲೂಕು ಯೋಜನಾಧಿಕಾರಿ ಬಿ.ಆರ್.ಯೋಗೇಶ್ ಕನ್ಯಾಡಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯು ತಾಲೂಕಿನ 9 ಕೆರೆಗಳನ್ನು ಹೂಳೆತ್ತುವ ಕೆಲಸ ಮಾಡಿದ್ದು, ಈಗಾಗಲೇ ಕೆರೆಗಳಲ್ಲಿ ನೀರು ತುಂಬಿ ಅಂತರ್ಜಲ ಮಟ್ಟ ಹೆಚ್ಚಾಗಿ ಕೃಷಿಯಲ್ಲಿ ರೈತರು ತೊಡಗಿಕೊಳ್ಳುವುದಕ್ಕೆ ಸಹಕಾರಿಯಾಗಿದೆ ಎಂದರು.ಗ್ರಾಪಂನ ರಘು ಮಾತನಾಡಿ, ಧರ್ಮಸ್ಥಳ ಸಂಸ್ಥೆ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ನಮ್ಮೂರಿನ ಹಿರಿಕೆರೆಗೆ ಮರು ಜೀವ ಕಲ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೆರೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕೆರೆ ಸಮಿತಿ ಅಧ್ಯಕ್ಷ ಮಧು, ಮಂಗೇಶ್ ಗೌಡ, ಶಶಿಕುಮಾರ್, ಗಿರೀಶ್, ಕೆರೆ ಅಭಿಯಂತರ ಪುಷ್ಪರಾಜು ಹಾಗೂ ಕೃಷಿ ಮೇಲ್ವಿಚಾರಕ ಪವನ್ ಹಾಗೂ ವಲಯ ಮೇಲ್ವಿಚಾರಕ ಜಯರಾಮ್, ಮರಿಲಿಂಗಯ್ಯ, ನಾಗರಾಜು, ಕೃಷ್ಣ, ಜಯರಾಮು ಹಾಗೂ ಸೇವಾ ಪ್ರತಿನಿಧಿಗಳು ಗ್ರಾಮಸ್ಥರು ಇದ್ದರು.