ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ಓಲೇಮಠದ ಲಿಂಗೈಕ್ಯರಾದ ಡಾ.ಅಭಿನವ ಚೆನ್ನಬಸವ ಶ್ರೀಗಳ ಗದ್ದುಗೆಗೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಭೇಟಿ ನೀಡಿ, ಪುಷ್ಪ ನಮನ ಸಲ್ಲಿಸಿದರು.ಓಲೇಮಠದ ನೂತನ ನಿಯೋಜನೆ ಉತ್ತಾರಾಧಿಕಾರ ಆನಂದ ಗುರೂಜೀ ಅವರನ್ನು ಭೇಟಿಮಾಡಿ ಸಚಿವರು ಚರ್ಚಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಡಾ.ಅಭಿನವ ಚೆನ್ನಬಸವ ಶ್ರೀಗಳು ಸಾಮಾಜಿಕವಾಗಿ, ಧಾರ್ಮಿಕವಾಗಿ ಹಲವಾರು ಬದಲಾವಣೆ ಬಯಸಿದವರು. ಅವರ ಸಾಮಾಜಿಕ ಕಳಕಳಿ, ಸಮಾಜದಲ್ಲಿ ಬದಲಾವಣೆ ತರುವ ಅವರ ಬಯಕೆಗಳು ಅವರ ಆದರ್ಶಮಯವಾದ ಜೀವನ ಇಂದಿಗೂ ಪ್ರಸ್ತುತವಾಗಿದೆ ಎಂದರು.ಸರ್ವಧರ್ಮಗಳ ಸಮಾಜದ ಒಳಿತಿಗಾಗಿ ಸಾಕಷ್ಟು ಬರಹಗಳ ಮೂಲಕ ಬದಲಾವಣೆ ಮಾಡುವ ಉದ್ದೇಶ ಮತ್ತು ಚಿಂತನೆ ಹೊಂದಿದ್ದರು. ಯಾವತ್ತಿಗೂ ಐಷಾರಾಮಿ ಜೀವನಕ್ಕೆ ಆಸೆ ಪಟ್ಟವರಲ್ಲ. ತಮ್ಮ ಬದುಕಿನ ಉದ್ದಕ್ಕೂ ಬರವಣಿಗೆಗಳ ಮೂಲಕ ಅಧ್ಯಾತ್ಮ, ಪುರಾಣ, ಪ್ರವಚನಗಳಿಂದ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದರು. ಅಂತವರನ್ನು ಕಳೆದುಕೊಂಡಿದ್ದು ಸಮಾಜಕ್ಕೆ ದುಂಬಲಾರದಷ್ಟು ನಷ್ಟವಾಗಿದೆ. ಅವರ ಆತ್ಮಕ್ಕೆ ಭಂಗವತ ಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ವ್ಯಕ್ತ ಪಡಿಸಿದರು.
ಪಡಿತರ ಕಾರ್ಡ್ ಬಗ್ಗೆ ಪ್ರತಿಕ್ರಿಯೆ:ತೆರಿಗೆ ಪಾವತಿದಾರರು, ಶ್ರೀಮಂತರು ಪಡೆದುಕೊಂಡಿರುವ ಪಡಿತರ ಕಾರ್ಡ್ ಪತ್ತೆಹಚ್ಚಿ ಅವುಗಳನ್ನು ರದ್ದುಗೊಳಿಸಲು ಉದ್ದೇಶಿಸಲಾಗಿದೆ. ಬಡವರಿಗೆ ಮತ್ತು ಅರ್ಹರಿಗೆ ಪಡಿತರ ಕಾರ್ಡ್ ಒದಗಿಸುವ ಉದ್ದೇಶವಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಬಡವರಿಗೆ ಸಲ್ಲಬೇಕಾದ ಪಡಿತರ ಧಾನ್ಯಗಳು ಶ್ರೀಮಂತರ ಪಾಲಾಗುತ್ತಿವೆ. ಅದನ್ನು ತಪ್ಪಿಸಲು ಸರ್ಕಾರ ಈ ಕ್ರಮ ಜರುಗಿಸಿದೆ ಎಂದು ಸರ್ಕಾರದ ನಡೆ ಸಮರ್ಥಿಸಿಕೊಂಡರು. ಮುಧೋಳದಲ್ಲಿ ನಡೆಯುತ್ತಿರುವ ನಿರಂತರ ರೈತರ ಪ್ರತಿಭಟನೆಯು ಗಂಡ, ಹೆಂಡರ ಜಗಳವಿದ್ದಂತೆ. ರೈತರ ಬೇಡಿಕೆಗಳು ಈಡೇರಿಸುವ ಕೆಲಸ ಸರ್ಕಾರ ಮಾಡುತ್ತದೆ. ಜಮಖಂಡಿಯಲ್ಲಿ ಮಹಿಳಾ ಸಂಘಟನೆಯವರ ಮೇಲೆ ಮೈಕ್ರೋ ಫೈನಾನ್ಸ್ ಹಾಗೂ ವಿವಿಧ ಬ್ಯಾಂಕ್ ಸಿಬ್ಬಂದಿ ದಬ್ಬಾಳಿಕೆ, ದೌರ್ಜನ್ಯ ಮಾಡಿದರೆ, ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ಮಹಿಳೆಯರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಈ ವೇಳೆ ಮಲ್ಲಿಕಾರ್ಜುನ ಮಠ, ತೌಫಿಕ್ ಪಾರ್ಥನಳ್ಳಿ, ಅಬುಬಕರ ಕುಡಚಿ, ಶಿವಾನಂದ ಕೊಣ್ಣೂರ ಸೇರಿ ಹಲವರು ಇದ್ದರು.