ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಪ್ರಗತಿಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಸಹಕಾರಿ ಚಳವಳಿ ಬೆಳೆಸಿದರೆ ರೈತರ ಪ್ರಗತಿ ಮತ್ತು ಹಳ್ಳಿಗಳು ಸಮೃದ್ಧಿ ಜೀವನ ನಡೆಸಲು ಸಾಧ್ಯವಿದೆ ಎಂದು ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಚ್.ಎಂ.ಬಸವಣ್ಣ ತಿಳಿಸಿದರು.ಜಿಲ್ಲಾ ಲ್ಯಾಂಪ್ ಸೊಸೈಟಿ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲೆಯ ಎಲ್ಲಾ ಇತರೇ ಸಹಕಾರ ಸಂಘಗಳ ಸಹಯೋಗದಲ್ಲಿ ನಡೆದ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹದ ನಾಲ್ಕನೇ ದಿನದ ಕಾರ್ಯಕ್ರಮ ಉದ್ವಾಟಿಸಿ ಮಾತನಾಡಿದರು. ಗಾಂಧೀಜಿ ಸಹ ಸಹಕಾರ ಕ್ಷೇತ್ರ ಮೂಲಕ ಗ್ರಾಮಗಳ ಅಭಿವದ್ಧಿಯಾಗಬೇಕೆಂದು ಬಯಸಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಹಕಾರ ಚಳವಳಿಯ ಬಗ್ಗೆ ಅರಿವು ಹೊಂದಿ ಹೆಚ್ಚಿನ ಯೋಜನಗಳನ್ನು ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಹಕಾರ ಸಚಿವ ಅಮಿತ್ ಶಾ ಸಹಕಾರ ಇಲಾಖೆಯ ಪ್ರತ್ಯೇಕ ಸಚಿವಾಲಯ ರಚನೆ ಮಾಡಿ, ಸಹಕಾರ ಕ್ಷೇತ್ರದ ಬಲವರ್ಧನೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಈ ಹಿಂದೆ ಶಿಕ್ಷಣ ಪಡೆದವರ ಸಂಖ್ಯೆ ಕಡಿಮೆ ಇತ್ತು. ಈಗ ಪರಿಸ್ಥಿತಿ ಬದಲಾಗಿದೆ. ಸಹಕಾರಿ ಶಿಕ್ಷಣ ಪಡೆದು ಸಹಕಾರ ತತ್ವ ಮತ್ತು ಸಿದ್ದಾಂತಗಳನ್ನು ಮೈಗೂಡಿಸಿಕೊಂಡರೆ ಹೆಚ್ಚಿನ ಲಾಭವಾಗುತ್ತದೆ ಎಂದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಕ್ಷೇತ್ರವು ರಾಜಕೀಯೇತರವಾಗಿರಬೇಕು. ಈ ನಿಟ್ಟಿನಲ್ಲಿ ಪ್ರತಿ ಗ್ರಾಮಗಳಲ್ಲಿ ರಚನೆಯಾಗುವ ಸಹಕಾರ ಸಂಘಗಳು ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಚುನಾವಣೆ ಬಂದಾಗ ಮಾತ್ರ ರಾಜಕೀಯ ನಂತರ ಸಹಕಾರ ಕ್ಷೇತ್ರದ ಅಭಿವೃದ್ಧಿ ಮತ್ತು ಸದಸ್ಯರಿಗೆ ಸವಲತ್ತು ಕಲ್ಪಿಸುವುದು ನಮ್ಮೇಲ್ಲರ ಮೂಲ ಮಂತ್ರವಾಗಬೇಕು. ಈ ನಿಟ್ಟಿನಲ್ಲಿ ಸಹಕಾರ ಸಂಘ ಜಿಲ್ಲೆ ಹಾಗು ರಾಜ್ಯದಲ್ಲಿ ಪ್ರಬಲವಾಗಿ ಬೆಳೆದಿದೆ ಎಂದರು. ಸಹಕಾರ ಕ್ಷೇತ್ರ ಸ್ವಾತಂತ್ರ್ಯ ಪೂರ್ವದಿಂದಲು ರಾಜ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಸಿದ್ದನಾಗೌಡ ಪಾಟೀಲ್ ಅವರು ಸಹಕಾರ ಕ್ಷೇತ್ರದ ಪಿತಾಮಹ ರಾಗಿದ್ದಾರೆ. 7 ದಿನಗಳ ಕಾಲ ಹಬ್ಬದ ಮಾದರಿಯಲ್ಲಿ ಸಹಕಾರ ಸಪ್ತಾಹವನ್ನು ಆಚರಣೆ ಮಾಡಲಾಗುತ್ತಿದೆ. ಬಾಗಲಕೋಟೆಯಲ್ಲಿ ನಡೆದ ರಾಜ್ಯ ಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ೭೧ ಮಂದಿ ಹಿರಿಯ ಸಹಕಾರಿಗಳನ್ನು ಗುರುತಿಸಿ ಸಹಕಾರ ರತ್ನ ಪ್ರಶಸ್ತಿ ನೀಡಲಾಗಿದೆ. ನಮ್ಮ ಜಿಲ್ಲೆಯಿಂದ ಆಲತ್ತೂರು ಜಯರಾಂ ಅವರು ಆಯ್ಕೆಯಗಿದ್ದು, ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇಂತಹ ಸಾಧನೆ ಮಾಡಿರುವವರ ಸಹಕಾರಿಗಳು ಯುವಕರಿಗೆ ಪ್ರೇರಣೆಯಾಗಬೇಕು. ಸಹಕಾರ ಕ್ಷೇತ್ರವನ್ನು ಬಲವಾಗಿ ಸಂಘಟಿಸಬೇಕು ಎಂದರು. ವಿವಿಧ ಸಹಕಾರಿ ಸಂಘಗಳಿಂದ ಆಗಮಿಸಿದ ಅಧ್ಯಕ್ಷರು ನಿರ್ದೇಶಕರು ನೆನಪಿನ ಕಾಣಿಕೆಯನ್ನು ನೀಡಿ ಸಹಕಾರ ಇಲಾಖೆಯಿಂದ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಮೈಸೂರಿನ ಸಹಕಾರ ತರಬೇತಿ ಇಲಾಖೆಯ ಉಪನ್ಯಾಸಕ ಎಸ್.ಮಹದೇವಪ್ಪ ಮಾತನಾಡಿದರು.
ವೇದಿಕೆಯಲ್ಲಿ ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ, ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ರಾಯಪ್ಪನ್, ನಿರ್ದೇಶಕರಾದ ಜಿ. ಮಡಿವಾಳಪ್ಪ, ಎಚ್.ಎಂ. ಬಸವಣ್ಣ, ಎಂ.ಎಂ.ನಾಗರಾಜು, ಎಚ್.ಎಂ.ಮಹದೇವಪ್ರಭು, ಸುಂದರರಾಜ್, ಅಮಚವಾಡಿ ನಾಗಸುಂದರ್, ದಾಕ್ಷಾಯಿಣಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಹದೇವಪ್ಪ, ಹಾಪ್‌ಕಾಮ್ಸ್ ಅಧ್ಯಕ್ಷ ಲೋಕೇಶ್,ತೆಂಗು ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಮಹೇಶ್ ಪ್ರಭು, ಚಾಮುಲ್ ಮಾಜಿ ನಿರ್ದೇಶಕ ಕಿಲಗೆರೆ ಚಂದ್ರಶೇಖರ್, ಸಹಕಾರ ಸಂಘಗಳ ಉಪ ನಿಬಂಧಕರಾದ ಜ್ಯೋತಿ ಅರಸು, ಸಹಾಯಕ ನಿಬಂಧಕರಾದ ಪಿ. ಶೋಭಾ, ಸುಭಾಷಿನಿ, ಅಧೀಕ್ಷಕ ನಾಗೇಶ್, ಯೂನಿಯನ್ ಸಿಇಓ ಮನುಜ, ಮ್ಯಾನೇಜರ್ ಮಲ್ಲಿಕಾರ್ಜುನ್, ಮಲ್ಲೇಶ್, ಕೆಂಡಗಣ್ಣ ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.