ಅಥಣಿಯಲ್ಲಿ 9 ಪ್ರಾಥಮಿಕ ಶಾಲೆಗಳ ಉನ್ನತೀಕರಣ

| Published : Sep 14 2025, 01:06 AM IST

ಸಾರಾಂಶ

ರಾಜ್ಯದಲ್ಲಿ ಶೇ. 60ರಷ್ಟು ಮಕ್ಕಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡುತ್ತಿವೆ. ಶೇ. 40ರಷ್ಟು ಮಕ್ಕಳು ಮಾತ್ರ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಅಥಣಿ

ಪಟ್ಟಣಕ್ಕೆ ಒಂದು ಸರ್ಕಾರಿ ಪ್ರೌಢಶಾಲೆ ಇಲ್ಲ ಎಂಬ ಕೊರಗು ಇತ್ತು. ಇದರಿಂದ ಅನೇಕ ಬಡ ಕುಟುಂಬಗಳ ಮಕ್ಕಳು ಉಚಿತ ಶಿಕ್ಷಣದಿಂದ ವಂಚಿತರಾಗಿದ್ದರು. ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಅಥಣಿ ಪಟ್ಟಣಕ್ಕೆ 2 ಮತ್ತು ಗ್ರಾಮೀಣ ಪ್ರದೇಶದಲ್ಲಿ 7 ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ ಪ್ರೌಢಶಾಲೆಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ವಿಕ್ರಂಪೂರ ಬಡಾವಣೆಯಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರೌಢಶಾಲೆ ತರಗತಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಅಥಣಿ ಪಟ್ಟಣದ ಗವಿಸಿದ್ದೇಶ್ವರ ಮಡ್ಡಿಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಹಾಗೂ ಈ ದಿನ ಆರಂಭಗೊಂಡಿರುವ ವಿಕ್ರಂಪೂರ ಸಹಿಪ್ರಾ ಶಾಲೆಯಲ್ಲಿ ಪ್ರಸಕ್ತ ವರ್ಷದಿಂದ 9ನೇ ತರಗತಿ ಆರಂಭಗೊಂಡಿದೆ. ಮುಂಬರುವ ವರ್ಷಗಳಲ್ಲಿ 10ನೇ ತರಗತಿ ಆರಂಭವಾಗುವುದು. ಅಥಣಿ ಪಟ್ಟಣದ ಬಡ ಹಾಗೂ ಮಧ್ಯಮ ಕುಟುಂಬಗಳ ಮಕ್ಕಳ ಉಚಿತ ಶಿಕ್ಷಣದ ಕನಸು ಇಂದು ನನಸಾದಂತಾಗಿದೆ ಎಂದರು.

ರಾಜ್ಯದಲ್ಲಿ ಶೇ. 60ರಷ್ಟು ಮಕ್ಕಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡುತ್ತಿವೆ. ಶೇ. 40ರಷ್ಟು ಮಕ್ಕಳು ಮಾತ್ರ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರಿ ಶಾಲೆಗಳ ಶಿಕ್ಷಕರು ಕೂಡಾ ಸ್ಪರ್ಧಾತ್ಮಕವಾಗಿ ಗುಣಮಟ್ಟದ ಶಿಕ್ಷಣ ನೀಡಬೇಕು. ಉತ್ತಮ ಶಿಕ್ಷಕನಿಂದ ಉತ್ತಮ ದೇಶ ರಕ್ಷಕ ಬೆಳೆಯಲು ಸಾಧ್ಯ ಎಂದರು. ರಾಜ್ಯ ಸರ್ಕಾರ ರಾಜ್ಯದಲ್ಲಿ ದ್ವಿಭಾಷೆ ನೀತಿ ಶಿಕ್ಷಣ ಆರಂಭಿಸಿದ ನಂತರ 11 ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳ ಮಂಜೂರಾತಿ ಪಡೆದುಕೊಳ್ಳಲಾಗಿದೆ. ಹಲವಾರು ಮಹಾವಿದ್ಯಾಲಯಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಶೈಕ್ಷಣಿಕ ಕ್ರಾಂತಿ ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದು ತಿಳಿಸಿದರು.

ಪುರಸಭೆಯ ಅಧ್ಯಕ್ಷ ಶಿವಲೀಲಾ ಬುಟಾಳಿ, ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ ಅವರು, ಜನಪರ ಕಾಳಜಿ, ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿರುವುದು ನಮ್ಮೆಲ್ಲರಿಗೆ ಖುಷಿ ತಂದಿದೆ ಎಂದು ಶಾಸಕ ಲಕ್ಷ್ಮಣ ಸವದಿಯನ್ನು ಅಭಿನಂದಿಸಿದರು. ಇದೇ ವೇಳೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಎಸ್.ಮುಗಳಕೋಡರನ್ನು ಶಾಸಕರು ಸನ್ಮಾನಿಸಿದರು.

ಈ ವೇಳೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ಸದಸ್ಯರಾದ ರಿಯಾಜ್ ಸನದಿ, ರಾಜಶೇಖರ ಗುಡೊಡಗಿ, ಮಲ್ಲೇಶ ಹುದ್ದಾರ, ವಿಲನರಾಜ ಯಳಮಲ್ಲೆ, ಬಸವರಾಜ ನಾಯಿಕ, ರಾಮನಗೌಡ, ತಾಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ, ಕ್ಷೇತ್ರ ಸಮನ್ವಯ ಅಧಿಕಾರಿ ಗೌಡಪ್ಪ ಖೋತ, ಬಸವರಾಜ ಪಾಟೀಲ, ಎನ್.ಎಂ.ನಾಮದಾರ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ ತೊಡಕರ, ಮುಖಂಡರಾದ ಶಿವಶಂಕರ ಹಂಜಿ, ಅರುಣ ಯಲಗುದ್ರಿ, ಅಮರ ದುರ್ಗಣ್ಣವರ, ಸಿ. ಎಸ್.ನೇಮಗೌಡ, ನರಸು ಬಡಕಂಬಿ, ಮಾಂತೇಶ ಠಕ್ಕನ್ನವರ, ವಿ ಎಸ್ ವಾಘಮೋಡೆ, ಡಿ.ಎ.ಬರಡಗಿ, ಎಫ್.ಎಂ.ಕೊರ್ಬು, ಸೇರಿ ಇದ್ದರು. ಮುಖ್ಯಶಿಕ್ಷಕ ಚೌಗಲಾ ಸ್ವಾಗತಿಸಿ, ಎಸ್‌ಡಿಎಂಸಿ ಅಧ್ಯಕ್ಷ ರಾಕೇಶ ಮೈಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಜಿ.ಎನ್.ಕುಂಬಾರ ನಿರೂಪಿಸಿದರು. ಎಸ್.ಎಸ್.ಮುಗಳಖೋಡ ವಂದಿಸಿದರು.