ಕುದೂರು: ಕುದೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿತ್ತು. ಇಂದು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಸರ್ಕಾರ ಆರ್ಥಿಕ ಅನುಮೋದನೆ ನೀಡಿದೆ ಎಂದು ಮಾಗಡಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ಗೌಡ ತಿಳಿಸಿದರು

ಕುದೂರು: ಕುದೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿತ್ತು. ಇಂದು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಸರ್ಕಾರ ಆರ್ಥಿಕ ಅನುಮೋದನೆ ನೀಡಿದೆ ಎಂದು ಮಾಗಡಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಬೆಳಗ್ಗೆ ಬಂದು ಸಂಜೆ ವಾಪಸ್ ತೆರಳುತ್ತಿದ್ದರು. ಇನ್ನು ಮುಂದೆ ದಿನದ 24 ಗಂಟೆಯೂ ವೈದ್ಯಕೀಯ ಸೇವೆ ಲಭ್ಯವಿರುತ್ತದೆ. ಮೂವರು ವೈದ್ಯರು. 8 ದಾದಿಯರು, 5 ಡಿ ದರ್ಜೆ ನೌಕರರಿರುತ್ತಾರೆ ಎಂದರು.

ಕುದೂರು ನಾಡಕಚೇರಿಯಿಂದ ತುಮಕೂರು ರಸ್ತೆಯ ಚೌಡೇಶ್ವರಿ ದೇವಾಲಯದವರೆಗೆ ದ್ವಿಪಥ ರಸ್ತೆಯನ್ನು 17 ಕೋಟಿ ರು. ವೆಚ್ಚದಲ್ಲಿ ಮಾಡಲಾಗುತ್ತದೆ. ಸದ್ಯದಲ್ಲಿಯೇ ಕೆಎಸ್ಆರ್‌ಟಿಸಿ ಬಸ್ ಡಿಪೋ ಮತ್ತು ಬಸ್ ನಿಲ್ದಾಣ ಕಾಮಗಾರಿಗೆ ಶೀಘ್ರದಲ್ಲೆ ಗುದ್ದಲಿಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.

ಸಂಸದ ಡಾ. ಮಂಜುನಾಥ್ ಗೆದ್ದು ಎರಡೂವರೆ ವರ್ಷವಾಗಿದೆ. ಕುದೂರು ಗ್ರಾಮಕ್ಕೆ ಅವರ ಕೊಡುಗೆ ಏನು? ಯಾವುದಾದರೂ ರಸ್ತೆ, ಶಾಲೆಗಾದರೂ ಸಹಾಯ ಮಾಡಿದ್ದಾರಾ? ಗ್ರಾಮಕ್ಕೆ ಭೇಟಿ ನೀಡಿ ಜನರ ಕಷ್ಟ ಸುಖ ಕೇಳಿದ್ದಾರಾ? ಇಂತಹ ಪ್ರಶ್ನೆಗಳನ್ನು ಕುದೂರಿನ ಪ್ರಜ್ಞಾವಂತ ಜನರು ಸಂಸದರನ್ನು ಕರೆದು ಕೇಳಬೇಕು ಎಂದು ಆಗ್ರಹಿಸಿದರು.

ಮುನಿರಾಜ್ ಮಾತನಾಡಿ, ಕುದೂರು ಸರ್ಕಾರಿ ಆಸ್ಪತ್ರೆಗೆ ಯಾರೇ ವೈದ್ಯರು ಬಂದರೆ ಅವರನ್ನು ಜನರು ಗಲಾಟೆ ಮಾಡಿ ಹೆಚ್ಚು ದಿನ ಇರಲಾರದಂತೆ ಮಾಡುತ್ತಾರೆ ಎಂಬ ಕೆಟ್ಟ ಹೆಸರು ಇದೆ. ಅದು ಇನ್ನು ಮೇಲೆ ಇಲ್ಲದಂತೆ ಮಾಡುವ ಜವಾಬ್ದಾರಿ ಗ್ರಾಮಸ್ಥರ ಮೇಲಿದೆ ಎಂದು ಹೇಳಿದರು.

ಯುವ ಮುಖಂಡ ಗೋವಿಂದರಾಜ್ ಮಾತನಾಡಿ, ಕುದೂರಿಗೆ ಆಂಬ್ಯುಲೆನ್ಸ್ ಕೊರತೆ ಇದ್ದಾಗ ಎರಡು ಆಂಬ್ಯಲನ್ಸ್ ಕೊಡುಗೆಯಾಗಿ ಸಚಿವರಾದ ಎಚ್.ಸಿ.ಬಾಲಕೃಷ್ಣರವರು ನೀಡಿದ್ದಾರೆ. ಹೆದ್ದಾರಿಯಲ್ಲಿರುವ ಸೋಲೂರು ಆಸ್ಪತ್ರೆಯಂತೆ ಕುದೂರು ಆಸ್ಪತ್ರೆಗೆ ಸಕಲ ಸೌಲಭ್ಯಗಳನ್ನು ನೀಡುವ ಕೆಲಸವಾಗುತ್ತಿದೆ ಎಂದು ತಿಳಿಸಿದರು.

ಲೋಕೇಶ್ ಮಾತನಾಡಿ, ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಪುಟ್ಟಣ್ಣ ಸೋಲು ಅನುಭವಿಸಿದ್ದಾರೆ ಎಂದು ಜೆಡಿಎಸ್ ಪಕ್ಷದವರು ಹರ್ಷ ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ. ನಿಖಿಲ್ಕುಮಾರಸ್ವಾಮಿಯವರು ಮೂರು ಬಾರಿ ಸೋತಿರುವುದನ್ನು ಮರೆಯಬಾರದು. ಹಳೇಪೇಟೆ ರಸ್ತೆಯಲ್ಲಿ ಮುವತ್ತುಕುಂಟೆ ಜಾಗವನ್ನು ಸ್ಮಶಾನಕ್ಕೆಂದು ಮಂಜೂರಾಗಿದೆ. ಅಲ್ಲಿ ವಿದ್ಯುತ್ ಚಿತಾಗಾರವನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದರು.

ಬಾಲಕೃಷ್ಣರ ಹೆಸರೇಳಿ ಹಣ ವಸೂಲಿ ಮಾಡುವರನ್ನು ನಂಬಬೇಡಿ ಕೆಲಸ ಕೊಡಿಸುತ್ತೇನೆ. ನಿವೇಶನ ಕೊಡಿಸುತ್ತೇನೆ ಎಂದೆಲ್ಲಾ ಹೆಸರೇಳಿ ಜನರಿಂದ ಹಣ ವಸೂಲಿ ಮಾಡುತ್ತಿರುವ ವಿಷಯ ಕಿವಿಗೆ ಬಿದ್ದಿದೆ. ಆ ರೀತಿ ವಸೂಲಿ ಮಾಡುವವರು ಯಾರಾದರೂ ಇದ್ದರೆ ನಮಗೆ ಪೋನ್ ಮಾಡಿ ತಿಳಿಸಿ ಎಂದು ಲೋಕೇಶ್ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯ ಜಯರಾಂ, ಹನುಮಂತರಾಯಪ್ಪ, ಗೋವಿಂದರಾಜ್, ಮುನಿರಾಜ್ ಹಾಜರಿದ್ದರು.

31ಕೆಆರ್ ಎಂಎನ್ 5.ಜೆಪಿಜಿ

ಕುದೂರು ಗ್ರಾಮದಲ್ಲಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.