ಅಮೃತ್ ಯೋಜನೆಯಡಿ ರೈಲ್ವೆ ನಿಲ್ದಾಣಗಳು ಮೇಲ್ದರ್ಜೆಗೆ: ಖಾತೆ ಸಚಿವ ಎ.ನಾರಾಯಣಸ್ವಾಮಿ

| Published : Jan 09 2024, 02:00 AM IST

ಅಮೃತ್ ಯೋಜನೆಯಡಿ ರೈಲ್ವೆ ನಿಲ್ದಾಣಗಳು ಮೇಲ್ದರ್ಜೆಗೆ: ಖಾತೆ ಸಚಿವ ಎ.ನಾರಾಯಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ನೀಲನಕ್ಷೆ ಹಾಗೂ ಕಾಮಗಾರಿ ಸ್ಥಳ ವೀಕ್ಷಿಸಿ, ಪರಿಶೀಲಿಸಿದ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಚಿತ್ರದುರ್ಗ ಜಿಲ್ಲೆ ರೇಲ್ವೆ ಉನ್ನತಿಗೆ ಕ್ರಮಕೈಗೊಳ್ಳಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ, ಚಳ್ಳಕೆರೆ ಹಾಗೂ ಚಿಕ್ಕಜಾಜೂರು ರೈಲ್ವೆ ನಿಲ್ದಾಣಗಳನ್ನು ಅಮೃತ್ ಯೋಜನೆಯಡಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಸೋಮವಾರ ಚಿತ್ರದುರ್ಗ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ನೀಲನಕ್ಷೆ ಹಾಗೂ ಕಾಮಗಾರಿ ಸ್ಥಳ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಅಂದಾಜು 16 ಕೋಟಿ ರು. ವೆಚ್ಚಕ್ಕೆ ಟೆಂಡರ್ ಕರೆಯಲಾಗಿದೆ. ಚಿತ್ರದುರ್ಗ ರೈಲು ನಿಲ್ದಾಣದಲ್ಲಿ ದಾವಣಗೆರೆ-ತುಮಕೂರು ನೇರ ರೈಲ್ವೆ ಯೋಜನೆ ಕಾಮಗಾರಿ ಹೊರತುಪಡಿಸಿ, ಅಮೃತ್ ಯೋಜನೆಯಡಿ ಮೂಲಭೂತ ಸೌಕರ್ಯ ಹಾಗೂ ಆಡಳಿತಾತ್ಮಕ ಕಚೇರಿ ನಿರ್ಮಿಸಲಾಗುತ್ತಿದೆ ಎಂದರು.

ಪ್ರಧಾನಿ ಮೋದಿಯವರ ಕನಸಿನಂತೆ ಅಂತಾರಾಷ್ಟ್ರೀಯ ಮಟ್ಟದ ರೈಲ್ವೆ ನಿಲ್ದಾಣ ನಿರ್ಮಿಸಲಾಗುವುದು. ₹2.36 ಕೋಟಿ ವೆಚ್ಚದಲ್ಲಿ ಚಳ್ಳಕೆರೆ ರೈಲ್ವೆ ಫ್ಲಾಟ್ ಫಾರಂ ಅಭಿವೃದ್ಧಿ ಪಡಿಸಲಾಗುತ್ತಿದೆ. ಮೈಸೂರಿನಲ್ಲಿ ನಡೆದ ರೈಲ್ವೆ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ, ಜಿಲ್ಲೆಯ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಸುಮಾರು ₹18 ಕೋಟಿ ಬಿಡುಗಡೆಯಾಗಿದೆ. ಕಾಮಗಾರಿಗಳನ್ನು ಆರಂಭಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ಈ ಹಿನ್ನೆಲೆ ಜನಪ್ರತಿನಿಧಿಗಳೊಂದಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಶೀಘ್ರವೇ ಅಮೃತ್ ಯೋಜನೆಗೆ ಪ್ರಧಾನ ಮಂತ್ರಿಗಳು ಚಾಲನೆ ನೀಡುವರು ಎಂದು ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

ನೇರ ರೈಲು ಯೋಜನೆಗೆ ಟೆಂಡರ್:

ಈ ಭಾಗದ ಜನರ ಬಹುದಿನದ ಬೇಡಿಕೆಯಾದ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರ ₹1,900 ಕೋಟಿ ಮಂಜೂರು ಮಾಡಿದೆ. ದಾವಣಗೆರೆ-ಚಿತ್ರದುರ್ಗ-ಹಿರಿಯೂರು ಭಾಗದಲ್ಲಿ ಈಗಾಗಲೇ ರೈಲ್ವೆ ಯೋಜನೆಗೆ ಅಗತ್ಯವಾದ ಶೇ.82 ರಷ್ಟು ಭೂಮಿ ಸ್ವಾಧೀನ ಪಡಿಸಿಕೊಂಡು ಇಲಾಖೆಗೆ ಹಸ್ತಾಂತರಿಸಲಾಗಿದೆ. ಯೋಜನೆಯ ಟೆಂಡರ್ ಪ್ರಕ್ರಿಯೆ ಆರಂಭಿಸಲು ಶೇ.90 ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿರಬೇಕು. ಈ ಹಿನ್ನೆಲೆ ಮುಂದಿನ ವಾರದಲ್ಲಿ ಶೇ.8 ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಇಲಾಖೆಗೆ ನೀಡಲಾಗುವುದು. ಮುಂದಿನ ತಿಂಗಳ ವೇಳೆಗೆ ಯೋಜನೆ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳುವುದಾಗಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಭರವಸೆ ವ್ಯಕ್ತಪಡಿಸಿದರು.

ದಾವಣಗೆರೆ-ಭರಮಸಾಗರ ನಡುವಿನ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಈ ಭಾಗದ ಯೋಜನೆಗೆ ಚಾಲನೆ ನೀಡಲಾಗಿದೆ. ಭರಮಸಾಗರ-ಚಿತ್ರದುರ್ಗ ನಡುವಿನ ಭೂ ಸ್ವಾಧೀನ ಪಕ್ರಿಯೆಯೂ ಮುಗಿಯುವ ಹಂತಕ್ಕೆ ಬಂದಿದ್ದು, ಭರಮಸಾಗರ-ಚಿತ್ರದುರ್ಗ ನಡುವಿನ ರೈಲ್ವೆ ಯೋಜನೆ ಸಹ ಆದಷ್ಟು ಶೀಘ್ರ ಆರಂಭಿಸುವುದಾಗಿ ಕೇಂದ್ರ ಸಚಿವರು ತಿಳಿಸಿದರು.

ಚಿತ್ರದುರ್ಗ ರೈಲ್ವೆ ನಿಲ್ದಾಣವನ್ನು ನೇರ ರೈಲ್ವೆ ಯೋಜನೆಯಡಿ ನೂತನವಾಗಿ ನಿರ್ಮಿಸಲಾಗುವುದು. ಈ ಹಿನ್ನೆಲೆ ಕಾಮಗಾರಿಗೆ ಚ್ಯುತಿ ಹಾಗೂ ಅಡಚಣೆ ಉಂಟಾಗದಂತೆ ಅಮೃತ್ ಯೋಜನೆಯಡಿ ಆಡಳಿತ ಕಚೇರಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯ ಯೋಜನಾ ವ್ಯವಸ್ಥಾಪಕ ಆನಂದ ಭಾರತಿ ಸಚಿವರಿಗೆ ತಿಳಿಸಿದರು.

ಸದ್ಯ ಚಿತ್ರದುರ್ಗ ರೈಲ್ವೆ ನಿಲ್ದಾಣದ ಒಂದನೇ ಪ್ಲಾಟ್ ಫಾರಂನಲ್ಲಿ ಮಾತ್ರ ಪ್ರಯಾಣಿಕ ರೈಲುಗಳು ಕಾರ್ಯಚರಣೆ ನಡೆಸುತ್ತಿವೆ. 2ನೇ ಫ್ಲಾಟ್ ಫಾರಂ ಇಲ್ಲದ ಕಾರಣ ಓವರ್ ಬ್ರಿಡ್ಜ್ ನಿರ್ಮಿಸಿಲ್ಲ. 3ನೇ ರೇಲ್ವೇ ಹಳಿಯಲ್ಲಿ ಗೂಡ್ಸ್‌ರೈಲುಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿವೆ. ನೇರ ರೈಲ್ವೆ ಮಾರ್ಗ ಯೋಜನೆಯಲ್ಲಿ ಸಂಪೂರ್ಣವಾಗಿ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಲಿದ್ದು, ಆ ಸಂದರ್ಭದಲ್ಲಿ ಎರಡು ಫ್ಲಾಟ್ ಫಾರಂಗಳನ್ನು ನಿರ್ಮಿಸಿ, ಪ್ರಯಾಣಿಕರ ಅನುಕೂಲಕ್ಕೆ ಓವರ್ ಬ್ರಿಡ್ಜ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ರೈಲ್ವೆ ಇಲಾಖೆ ಉಪ ವ್ಯವಸ್ಥಾಪಕ ರಾಮಸುಬ್ಬಯ್ಯ, ಡಿವಿಜಿನಲ್ ಕಮರ್ಷಿಯಲ್ ಮ್ಯಾನೇಜರ್ ಲೋಹಿತಾಶ್ವ, ಬ್ರಿಡ್ಜ್ ಡೆಪ್ಯೂಟಿ ಇಂಜಿನಿಯರ್ ಉನ್ನೀಕೃಷ್ಣನ್, ಸಹಾಯಕ ವಿಭಾಗೀಯ ಅಭಿಯಂತರ ನಿತ್ಯಾನಂದ ಸ್ವಾಮಿ, ಟ್ರಾಪಿಕ್ ಇನ್ಸ್‍ಪೆಕ್ಟರ್ ಬಿ.ಹನುಮಂತು, ಸ್ಟೇಷನ್ ಸೂಪರಿಡೆಂಟ್ ಇ.ಮಂಜುನಾಥ್ ಇದ್ದರು.