ಶುದ್ಧ ನೀರು ಘಟಕದಲ್ಲಿನ್ನು ಯುಪಿಐ ಸೌಲ್ಯಭ್ಯ

| N/A | Published : May 11 2025, 01:31 AM IST / Updated: May 11 2025, 06:40 AM IST

ಸಾರಾಂಶ

ರಾಜಧಾನಿ ಬೆಂಗಳೂರಿನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು (ಆರ್‌ಒ) ಮೇಲ್ದರ್ಜೆಗೇರಿಸುವುದಕ್ಕೆ ಚಿಂತನೆ ನಡೆಸಿರುವ ಬೆಂಗಳೂರು ಜಲಮಂಡಳಿಯು, ದಿನದ 24 ಗಂಟೆ ಸೇವೆ ನೀಡುವುದರೊಂದಿಗೆ ನಾಣ್ಯ ಸಮಸ್ಯೆ ಪರಿಹಾರಕ್ಕೆ ಯುಪಿಐ ಪೇಮೆಂಟ್‌ ಸಿಸ್ಟಂ ಅಳವಡಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು :  ರಾಜಧಾನಿ ಬೆಂಗಳೂರಿನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು (ಆರ್‌ಒ) ಮೇಲ್ದರ್ಜೆಗೇರಿಸುವುದಕ್ಕೆ ಚಿಂತನೆ ನಡೆಸಿರುವ ಬೆಂಗಳೂರು ಜಲಮಂಡಳಿಯು, ದಿನದ 24 ಗಂಟೆ ಸೇವೆ ನೀಡುವುದರೊಂದಿಗೆ ನಾಣ್ಯ ಸಮಸ್ಯೆ ಪರಿಹಾರಕ್ಕೆ ಯುಪಿಐ ಪೇಮೆಂಟ್‌ ಸಿಸ್ಟಂ ಅಳವಡಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಶಾಸಕರು, ಸಂಸದರು, ಸಚಿವರು ಸೇರಿದಂತೆ ವಿವಿಧ ಅನುದಾನದಲ್ಲಿ ಬೆಂಗಳೂರಿನಲ್ಲಿ ಒಟ್ಟು 1,214 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಈ ಘಟಕಗಳನ್ನು ಬಿಬಿಎಂಪಿಯಿಂದ ನಿರ್ವಹಣೆ ಮಾಡಲಾಗುತ್ತಿತ್ತು. ವಿವಿಧ ಅನುದಾನದಲ್ಲಿ ನಿರ್ಮಾಣಗೊಂಡಿದ್ದರಿಂದ ಈ ಘಟಕಗಳ ನಿರ್ವಹಣೆ ಬಿಬಿಎಂಪಿಗೆ ಸಮಸ್ಯೆ ಉಂಟಾಗುತ್ತಿತ್ತು. ಹೀಗಾಗಿ, ರಾಜ್ಯ ಸರ್ಕಾರದ ಸೂಚನೆಯಂತೆ ಕಳೆದ ಏಪ್ರಿಲ್‌ನಿಂದ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಬೆಂಗಳೂರು ಜಲಮಂಡಳಿಗೆ ಹಸ್ತಾಂತರ ಮಾಡಲಾಗುತ್ತಿದೆ.

1,214 ಶುದ್ಧ ನೀರಿನ ಘಟಕಗಳ ಪೈಕಿ 1,153 ಘಟಕಗಳನ್ನು ಜಲಮಂಡಳಿಗೆ ಹಸ್ತಾಂತರಗೊಂಡಿದ್ದು, ಬಾಕಿ ಇರುವ ಘಟಕಗಳನ್ನು ಬಿಬಿಎಂಪಿಯ ಅಧಿಕಾರಿಗಳು ಹಸ್ತಾಂತರ ಮಾಡಬೇಕಾಗಿದೆ. ಹಸ್ತಾಂತರಗೊಂಡಿರುವ ಘಟಕಗಳ ಪೈಕಿ 200ಕ್ಕೂ ಅಧಿಕ ಘಟಕಗಳು ವಿದ್ಯುತ್‌ ಬಿಲ್‌ ಪಾವತಿ ಬಾಕಿ, ನೀರಿನ ಕೊರತೆ, ದುರಸ್ತಿ ಸೇರಿದಂತೆ ಮೊದಲಾದ ಸಮಸ್ಯೆಯಿಂದ ಬಂದ್‌ ಆಗಿದ್ದು, ಆ ಪೈಕಿ ಬಿಬಿಎಂಪಿ ಕೇಂದ್ರ ಭಾಗದ ಪೂರ್ವ, ಪಶ್ಚಿಮ, ದಕ್ಷಿಣ ವಲಯದಲ್ಲಿಯೇ ನೂರಕ್ಕೂ ಹೆಚ್ಚು ಘಟಕಗಳು ಸ್ಥಗಿತವಾಗಿವೆ. ಉಳಿದಂತೆ ಬೊಮ್ಮನಹಳ್ಳಿ, ಆರ್‌ಆರ್‌ನಗರ, ಮಹದೇವಪುರ, ಯಲಹಂಕ, ದಾಸರಹಳ್ಳಿ ವಲಯಗಳಲ್ಲಿ 53 ಘಟಕಗಳು ಸ್ಥಗಿತಗೊಂಡಿವೆ ಎಂದು ತಿಳಿದು ಬಂದಿದೆ.

ಮೇಲ್ದರ್ಜೆಗೇರಿಸಲು ಸಿದ್ಧತೆ ಮೊದಲ ಹಂತವಾಗಿ ಕೆಟ್ಟು ಹೋಗಿರುವ ಘಟಕಗಳನ್ನು ಆದ್ಯತೆಯ ಮೇರೆಗೆ ಪುನರ್‌ ಆರಂಭಿಸುವುದಕ್ಕೆ ಜಲಮಂಡಳಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆ ನಂತರ ಎಲ್ಲಾ ಶುದ್ಧ ನೀರಿನ ಘಟಕಗಳನ್ನು ಉನ್ನತೀಕರಿಸುವುದಕ್ಕೆ ಕ್ರಮ ವಹಿಸಲಾಗುವುದು. ಹಲವು ವರ್ಷಗಳ ಹಿಂದೆ ಘಟಕ ಸ್ಥಾಪನೆ ಮಾಡಲಾಗಿದೆ. ಸಾಕಷ್ಟು ರಿಪೇರಿ, ಶುದ್ಧಿಕರಿಸುವ ಸಾಮಗ್ರಿಗಳನ್ನು ಬದಲಾವಣೆ ಮಾಡುವ ಅಗತ್ಯವಿದೆ. ಈ ಕುರಿತು ಉಪ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ಕ್ರಮ ವಹಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ ಪ್ರಸಾತ್‌ ಮನೋಹರ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ನಾಣ್ಯದ ಸಮಸ್ಯೆ ತಪ್ಪಿಸಲು ಯುಪಿಐ

ನಗರದ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ 5 ರು. ನಾಣ್ಯ ಹಾಕಿ 20 ಲೀಟರ್‌ ನೀರು ಪಡೆಯುವ ವ್ಯವಸ್ಥೆ ಇದೆ. ಇದರಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಐದು ರು. ನಾಣ್ಯ ದೊರೆಯದೇ ಜನರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಯುಪಿಐ ಮೊಬೈಲ್‌ ಆ್ಯಪ್‌ ಮೂಲಕ ಹಣ ಪಾವತಿ ಮಾಡಿದ ತಕ್ಷಣ ನೀರು ಪಡೆಯುವ ಸರಳ ವ್ಯವಸ್ಥೆ ಜಾರಿಗೊಳಿಸುವುದಕ್ಕೆ ಜಲಮಂಡಳಿ ಚಿಂತನೆ ನಡೆಸಿದೆ.

24 ಗಂಟೆಯೂ ಕಾರ್ಯಚರಣೆ

ಮನೆಗಳಲ್ಲಿ ನೀರನ್ನು ಶುದ್ಧೀಕರಿಸಲು ಸಾಧ್ಯವಾಗದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕೇವಲ 5 ರು. ಗೆ 20 ಲೀಟರ್‌ ಶುದ್ಧ ಕುಡಿಯುವ ನೀರು ಒದಗಿಸುವ ಮೂಲಕ ಜೀವನಾಡಿಯಾಗಿರುವ ಶುದ್ಧ ನೀರಿನ ಘಟಕಗಳು ಬೆಳಗ್ಗೆ 6 ರಿಂದ ರಾತ್ರಿ 9 ಗಂಟೆ ವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ರಾತ್ರಿ ಬಂದ್ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ವ್ಯವಸ್ಥೆ ಜಾರಿಗೊಳಿಸಲಾಗುವುದು. ಇದರಿಂದ ಉದ್ಯೋಗಸ್ಥರು ಸೇರಿದಂತೆ ಹಲವರಿಗೆ ಅನುಕೂಲವಾಗಲಿದೆ ಎಂಬುದು ಜಲಮಂಡಳಿಯ ಚಿಂತನೆಯಾಗಿದೆ.