ಕಲಬೆರಕೆ ದಂಧೆಯಿಂದ ಮಲೆನಾಡಿನ ಅಡಕೆ ಮಾನ ಹರಾಜು

| Published : Sep 18 2024, 01:46 AM IST

ಕಲಬೆರಕೆ ದಂಧೆಯಿಂದ ಮಲೆನಾಡಿನ ಅಡಕೆ ಮಾನ ಹರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಸಹ್ಯಾದ್ರಿ ವಿವಿಧೋದ್ದೇಶ ಅಡಕೆ ಬೆಳೆಗಾರರ ಮಾರಾಟ ಸಹಕಾರ ಸಂಘ ಮತ್ತು ಶರಾವತಿ ಪತ್ತಿನ ಸಹಕಾರ ಸಂಘಗಳ 2023-24 ನೇ ಸಾಲಿನ ಸರ್ವ ಸದಸ್ಯರ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಸಾಂಪ್ರದಾಯಿಕ ಸಂಸ್ಕರಣೆ ಕೊರತೆ ಮತ್ತು ಅವಕಾಶವಾದಿಗಳ ಕಲಬೆರಕೆ ದಂಧೆಯಿಂದಾಗಿ ಮಲೆನಾಡಿನ ದೇಶಾವರಿ ಅಡಕೆಯ ಮಾನ ಹರಾಜಾಗುತ್ತಿದ್ದು, ಈ ಬಗ್ಗೆ ಅಡಕೆ ಬೆಳೆಗಾರರು ಎಚ್ಚೆತ್ತಕೊಳ್ಳದಿದ್ದಲ್ಲಿ ರೈತರು ಸಂಕಷ್ಟಕ್ಕೀಡಾಗುವ ದಿನಗಳು ದೂರವಿಲ್ಲ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹೇಳಿದರು.

ಸಹ್ಯಾದ್ರಿ ವಿವಿಧೋದ್ದೇಶ ಅಡಕೆ ಬೆಳೆಗಾರರ ಮಾರಾಟ ಸಹಕಾರ ಸಂಘ ಮತ್ತು ಶರಾವತಿ ಪತ್ತಿನ ಸಹಕಾರ ಸಂಘಗಳ 2023-24 ನೇ ಸಾಲಿನ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ, ಈ ಭಾಗದ ರೈತರು ಸೇರಿದಂತೆ ಸಮಸ್ತ ಜನರ ಬದುಕು ಅಡಕೆ ಬೆಳೆಯ ಮೇಲೆ ನಿಂತಿದೆ ಎಂಬುದನ್ನು ಮರೆಯಬಾರದು. ಅಡಕೆ ಒಂದನ್ನೇ ಅವಲಂಬಿಸದೇ ಪರ್ಯಾಯ ಬೆಳೆಗಳ ಬಗ್ಗೆಯೂ ಆದ್ಯತೆ ನೀಡಬೇಕಾದ ಅಗತ್ಯವಿದೆ ಎಂದು ಎಚ್ಚರಿಸಿದರು.

ಅಡಕೆಗೆ ಉತ್ತಮ ಧಾರಣೆ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಕಾಡುಮೇಡುಗಳಲ್ಲೂ ಅಡಕೆ ಬೆಳೆಯಲಾಗುತ್ತಿದೆ. ಅವಕಾಶವಾದಿ ಮಧ್ಯವರ್ತಿಗಳು ಕೇರಳದ ಅಡಕೆಗೆ ರೆಡ್ ಆಕ್ಸೈಡ್ ಬಳಸಿ ಗುಣಮಟ್ಟದ ಅಡಕೆಯೊಂದಿಗೆ ಬೆರಸುತ್ತಿದ್ದಾರೆ. ಕಳಪೆ ಗುಣಮಟ್ಟದ ಅಡಕೆಯ ಕಾರಣ ಮಾರುಕಟ್ಟೆಯಲ್ಲಿ ಜಿಲ್ಲೆಯಿಂದ ಹೋಗಿರುವ ಸಾವಿರಾರು ಮೂಟೆ ಅಡಕೆ ವಾಪಾಸಾಗಿರುವುದು ಅಪಾಯದ ಮುನ್ಸೂಚನೆಯಾಗಿದೆ. ಹಣಕ್ಕಾಗಿ ನಮ್ಮಲ್ಲೂ ಕೆಲವರು ಚಾಲಿ ಅಡಕೆಗೆ ಬಣ್ಣ ಬಳಿದು ಗುಣಮಟ್ಟದ ಅಡಕೆಯೊಂದಿಗೆ ಬೆರೆ ಸುತ್ತಿದ್ದು, ಈ ಕೃತ್ಯಕ್ಕೆ ಮುಂದಾಗುವುದು ಆಪಾಯವನ್ನು ಆಹ್ವಾನಿಸಿದಂತೆ ಎಂಬುದನ್ನು ಮರೆಯಬಾರದು ಎಂದರು.

ಸಹಕಾರಿ ಸಂಸ್ಥೆಗಳೇ ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿದ್ದು, ರಾಷ್ಟ್ರೀಯ ಬ್ಯಾಂಕುಗಳಿಗಿಂತಲೂ ಆರ್ಥಿಕವಾಗಿ ಅತ್ಯಂತ ಸುಭದ್ರ ಸ್ಥಿತಿಯಲ್ಲಿವೆ. ಅದಾನಿ ಅಂಬಾನಿಯಂತಹ ಉದ್ಯಮಿಗಳಿಗೆ ಲಕ್ಞಾಂತರ ಕೋಟಿ ಸಾಲ ನೀಡಿರುವ ರಾಷ್ಟ್ರೀಯ ಬ್ಯಾಂಕುಗಳ ವ್ಯವಹಾರ ನಿರೀಕ್ಷೆಯಷ್ಟು ಸುಭಧ್ರವಾಗಿಲ್ಲ. ಕಮರ್ಶಿಯಲ್ ಬ್ಯಾಂಕುಗಳಿಗಿಂತ ಸಹಕಾರಿ ಬ್ಯಾಂಕುಗಳೇ ಹೆಚ್ಚು ಸುಭಧ್ರವಾಗಿದ್ದು ಸಹಕಾರಿ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳುವಿಕೆ ಅಗತ್ಯ ಎಂದರು.

ಕೇವಲ ಐದು ಲಕ್ಷ ಮೂಲ ಬಂಡವಾಳದಿಂದ ತಾಲೂಕು ಕೇಂದ್ರದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಸಾವಿರ ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿರುವ ನೇತೃತ್ವದ ಸಹ್ಯಾದ್ರಿ ಸಂಸ್ಥೆಯ ಸಾಧನೆ ಪ್ರಶಂಸನೀಯವಾಗಿದೆ. ವಾರ್ಷಿಕ ಹತ್ತು ಕೋಟಿ ಲಾಭ ಗಳಿಸಿರುವ ಸಂಸ್ಥೆಯಲ್ಲಿ ನೂರಾರು ಜನರಿಗೆ ಉದ್ಯೋಗವೂ ದೊರೆತಿರುವುದು ಗಮನಾರ್ಹವಾಗಿದೆ ಎಂದು ಹೇಳಿದರು.

ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎಚ್.ಎನ್.ವಿಜಯದೇವ್ ಅಧ್ಯಕ್ಷತೆ ವಹಿಸಿದ್ದರು. ಶರಾವತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ವಿ.ಅಜಿತ್, ರೇವತಿ ಅನಂತಮೂರ್ತಿ, ಸಿ.ಕೆ.ಪ್ರಸನ್ನ, ದುಗ್ಗಪ್ಪಗೌಡ, ನಾಗಭೂಷಣ್, ಶಚ್ಚೀಂದ್ರ ಹೆಗ್ಡೆ, ವಿನಂತಿ ಶಿವಾನಂದ್, ವನಜಾಕ್ಷಿ ಮುಂತಾದವರು ವೇದಿಕೆಯಲ್ಲಿದ್ದರು.