ಭದ್ರಾ ಮೇಲ್ದಂಡೆ ನೀರಾವರಿ ನಿಜಲಿಂಗಪ್ಪ ಕನಸು

| Published : Dec 11 2023, 01:15 AM IST

ಭದ್ರಾ ಮೇಲ್ದಂಡೆ ನೀರಾವರಿ ನಿಜಲಿಂಗಪ್ಪ ಕನಸು
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾ ಮೇಲ್ದಂಡೆ ನೀರಾವರಿ ನಿಜಲಿಂಗಪ್ಪ ಕನಸುಎಸ್ಸೆನ್ ಸ್ಮಾರಕ ಪುಣ್ಯಭೂಮಿಯಲ್ಲಿ ನಡೆದ 121ನೇ ಜನ್ಮ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌

ಎಸ್ಸೆನ್ ಸ್ಮಾರಕ ಪುಣ್ಯಭೂಮಿಯಲ್ಲಿ ನಡೆದ 121ನೇ ಜನ್ಮ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭದ್ರಾ ಮೇಲ್ದಂಡೆ ಯೋಜನೆ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಕನಸಾಗಿತ್ತು. ನನಸಾಗಿಸವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಹೇಳಿದರು.

ನಗರದ ಹೊರವಲಯ ಸೀಬಾರ ಬಳಿ ಇರುವ ಎಸ್‌ಎನ್‌ ಸ್ಮಾರಕ ಪುಣ್ಯಭೂಮಿಯಲ್ಲಿ ಭಾನುವಾರ ಆಯೋಜಿಸಿದ್ದ ನಿಜಲಿಂಗಪ್ಪ ಅವರ 121ನೇ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲ ಸರ್ಕಾರದ ಬಳಿ ಭದ್ರಾ ಮೇಲ್ದಂಡೆ ಜಾರಿ ಬಗ್ಗೆ ನಿಜಲಿಂಗಪ್ಪ ಪ್ರಸ್ತಾಪಿಸಿದ್ದರು. ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ ಯೋಜನೆ ಘೋಷಣೆ ಮಾಡಿದ್ದರೆಂದರು.

ಸ್ವಚ್ಛ ರಾಜಕಾರಣಕ್ಕೆ ಹೆಸರಾಗಿದ್ದ ನಿಜಲಿಂಗಪ್ಪ ಅವರ ಕಾಲಕ್ಕೂ ಈಗಿನ ಕಾಲಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನಿಜಲಿಂಗಪ್ಪ ಅವರು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದರು. ಎರಡು ಅವಧಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಅವರ ರೀತಿ ಪರಿಶುದ್ಧ ರಾಜಕಾರಣ ಮಾಡುವುದು ಕಷ್ಟ ಸಾಧ್ಯ. ಮುಂದಿನ ಪೀಳಿಗೆ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುವ ಅಗತ್ಯವಿದೆ ಎಂದು ಸುಧಾಕರ್ ಹೇಳಿದರು.

ನಿಜಲಿಂಗಪ್ಪ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ಮಾತನಾಡಿದ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ನಿಜಲಿಂಗಪ್ಪ ಅವರಂತಹ ಸ್ವಚ್ಛ ರಾಜಕಾರಣಿ ಕಾಣಸಿಗರು. ಅವರ ರಾಜಕಾರಣದ ನೈತಿಕ ಗುಣಮಟ್ಟಗಳು ಇಂದಿನ ಭಾರತಕ್ಕೆ ಅಗತ್ಯವಾಗಿದೆ ಎಂದರು.

ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿ ಕರ್ನಾಟಕವ ಮುನ್ನಡೆಸಿದರೂ ಅವರೆಂದಿಗೂ ಸ್ವಾರ್ಥಿಯಾಗಲಿಲ್ಲ. ನನ್ನ ಜಿಲ್ಲೆ, ನನ್ನ ಮನೆ ಎಂದು ಯೋಚಿಸಲೇ ಇಲ್ಲ. ಸಮಷ್ಟಿ ಗುಣ ಅವರಲ್ಲಿತ್ತು. ಮುಖ್ಯಮಂತ್ರಿಯಾಗಿ ಅಧಿಕಾರದಿಂದ ಕೆಳಗಿಳಿದ ಮೇಲೂ ಸ್ವಂತಕ್ಕೊಂದು ಕಾರು ಹೊಂದಲಿಲ್ಲ. ಚಿತ್ರದುರ್ಗಕ್ಕೆ ಏನೂ ಮಾಡಲಿಲ್ಲವೆಂಬ ಸಾಮಾನ್ಯ ಅರೋಪಗಳು ಅವರ ಬಗ್ಗೆ ಕೇಳಿ ಬರುತ್ತವೆ. ಸ್ವಂತಕ್ಕೂ ಏನೂ ಮಾಡಿಕೊಳ್ಳದ ರಾಜಕಾರಣಿ ಅವರಾಗಿದ್ದರು. ರಾಜ್ಯದ ಹಿತ ಬಯಸಿದರೆಂದರು.

ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ರಾಷ್ಟ್ರ ರಾಜಕಾರಣದಲ್ಲಿ ನಿಜಲಿಂಗಪ್ಪ ಅವರಿಗೆ ಸಿಕ್ಕಷ್ಟು ಪ್ರಾಮುಖ್ಯತೆ ಮತ್ತು ಗೌರವ ಕರ್ನಾಟಕದ ಬೇರೆ ರಾಜಕಾರಣಿಗಳಿಗೆ ಸಿಕ್ಕಿಲ್ಲ. ನಿಜಲಿಂಗಪ್ಪ ಅವರಲ್ಲಿ ಎಂದಿಗೂ ಅಧಿಕಾರದ ದಾಹ ಇರಲಿಲ್ಲ. ಅಧಿಕಾರಕ್ಕಿಂತ ಆದರ್ಶನ ಮುಖ್ಯವೆಂದು ನಂಬಿ ಕೊನೆ ಉಸಿರು ಇರುವ ತನಕ ಹಾಗೆಯೇ ಬದುಕಿದರೆಂದರು.

ನಿಜಲಿಂಗಪ್ಪ ಅವರ ಕಾಲದಲ್ಲಿ ಭ್ರಷ್ಚಾಚಾರವಿರಲಿಲ್ಲ. ಹಣ, ದರ್ಪದ ರಾಜಕಾರಣ ಸುಳಿದಾಡಲಿಲ್ಲ. ನಿಜಲಿಂಗಪ್ಪ ಅವರ ಬಗ್ಗೆ ವಿವಿಗಳಲ್ಲಿ ಪಠ್ಯ ಇಡಬೇಕು. ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕು. ಭ್ರಷ್ಟಾಚಾರ, ಕುಟುಂಬ ಪರಿವಾರ ರಹಿತ ರಾಜಕಾರಣ, ಯಾವಾಗ ಆಗುತ್ತೋ ಆಗ ಮಾತ್ರ ನಿಜಲಿಂಗಲಿಪ್ಪ ಅವರಿಗೆ ನಿಜವಾದ ಗೌರವ ಸಲ್ಲುತ್ತದೆ ಎಂದರು.

ನನ್ನ ತಾತ ನಿಜಲಿಂಗಪ್ಪ ಅವರ ಬಲಗೈ ಭಂಟನಂತೆ ಹಲವು ದಶಕಗಳಕಾಲ ಜೊತೆಗಿದ್ದರು. ಹಾಗಾಗಿ ಹತ್ತಿರದಿಂದ ಅವರ ಬಲ್ಲೆ. ಶುದ್ಧ ರಾಜಕಾರಣಕ್ಕೆ ಅವರು ನನಗೆ ಪ್ರೇರಣೆಯಾಗಿದ್ದಾರೆಂದು ನವೀನ್ ಹೇಳಿದರು.

ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ನ ಎಚ್. ಹನುಮಂತಪ್ಪ ಮಾತನಾಡಿ, ಎಸ್ಸೆನ್ ಸ್ಮಾರಕದ ಆವರಣದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ‍್ಮಾಣಕ್ಕೆ ಅನುದಾನ ನೀಡುವಂತೆ ಟ್ರಸ್ಟ್ ವತಿಯಿಂದ ಮನವಿ ಮಾಡಲಾಗಿದೆ.

ರಾಜಕಾರಣದಲ್ಲಿ ಜನಪ್ರತಿನಿಧಿಗಳಿಗೆ ಶಿಕ್ಷಣ ಕೊಡುವುದು ನಮ್ಮ ಉದ್ದೇಶವಾಗಿದೆ. ಗ್ರಾಮ ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ತರಬೇತಿ ಆಗಬೇಕು. ಇದಕ್ಕಾಗಿ ಸಿದ್ದರಾಮಯ್ಯ ಎರಡು‌ ಕೋಟಿ ರುಪಾಯಿ ಕೊಟ್ಟಿದ್ದಾರೆ. ಒಂದು‌ ಕೋಟಿ ರುಪಾಯಿಯಲ್ಲಿ‌ ಜಮೀನು ಖರೀದಿಸಿದ್ದೇವೆ ಎಂದರು.

ಟ್ರಸ್ಟ್‌ನ ಎಸ್. ಷಣ್ಮುಖಪ್ಪ, ಎಂ.ಕೆ. ತಾಜ್‌ಫೀರ್, ವೀರೇಶ್ ಹಾಗೂ ಗುತ್ತಿನಾಡು ಶಿವಲಿಂಗಪ್ಪ ಇದ್ದರು.

- - -

ಚಿತ್ರದುರ್ಗ ಹೊರ ವಲಯ ಸೀಬಾರದ ಬಳಿ ಇರುವ ಎಸ್ಸೆನ್ ಸ್ಮಾರಕದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ನಿಜಲಿಂಗಪ್ಪ ಅವರ 121ನೇ ಜನ್ಮ ದಿನಾಚರಣೆಯಲ್ಲಿ ಸಚಿವ ಡಿ. ಸುಧಾಕರ್ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

- -

10 ಸಿಟಿಡಿ6