11 ಸ್ಥಾನಗಳಿಗೆ ಜೂ.13ಕ್ಕೆ ಮತದಾನ ನಡೆಯಲಿದ್ದು ಕಾಂಗ್ರೆಸ್‌ಗೆ 7, ಬಿಜೆಪಿಗೆ 3, ಜೆಡಿಎಸ್ 1 ಸೀಟುಗಳಲ್ಲಿ ಜಯ ಸಾಧಿಸುವ ಸಾಧ್ಯತೆಯಿದೆ. ಸೋಮವಾರ ಉಮೇದುವಾರಿಕೆ ವಾಪಸ್ ಅಂತ್ಯವಾಗಿದ್ದು, ರಘುಪತಿ ಭಟ್ ಬಂಡಾಯ ಸ್ಪರ್ಧೆ ಮಾಡಿದ್ದಾರೆ.
ಬೆಂಗಳೂರು : ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದ 11 ಮಂದಿಯ ಅವಧಿಯು ಮುಂದಿನ ತಿಂಗಳು 17ರಂದು ಮುಕ್ತಾಯಗೊಳ್ಳಲಿದ್ದು, ತೆರವಾಗುವ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗವು ಚುನಾವಣೆ ಘೋಷಣೆ ಮಾಡಿದೆ.
ಮುಂದಿನ ಜೂ.13ರಂದು ಮತದಾನ ನಡೆಯಲಿದೆ. 11 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಪ್ರಕಟಿಸಿರುವ ಆಯೋಗವು ಇದೇ ತಿಂಗಳು 27ರಂದು ಅಧಿಸೂಚನೆ ಹೊರಡಿಸಲಿದೆ. ಜೂ.3ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜೂ.4ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂ.6ರಂದು ನಾಮಪತ್ರಗಳನ್ನು ಹಿಂಪಡೆಯಲು ಕಡೆಯ ದಿನವಾಗಿದ್ದು, ಜೂ.13ರಂದು ಮತದಾನ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಜರುಗಲಿದ್ದು, ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.
ಸಚಿವ ಎನ್.ಎಸ್.ಬೋಸರಾಜು ಸೇರಿದಂತೆ ಅರವಿಂದ ಕುಮಾರ ಅರಳಿ, ಕೆ.ಗೋವಿಂದರಾಜು, ತೇಜಸ್ವಿನಿ ಗೌಡ, ಪಿ.ಎಂ.ಮುನಿರಾಜುಗೌಡ, ಕೆ.ಪಿ.ನಂಜುಂಡಿ, ಬಿ.ಎಂ.ಫಾರೂಕ್, ರಘುನಾಥ್ ಮಲ್ಕಾಪುರೆ, ಎನ್.ರವಿಕುಮಾರ್, ಎಸ್. ರುದ್ರೇಗೌಡ ಮತ್ತು ಕೆ.ಹರೀಶ್ ಕುಮಾರ್ ಅವಧಿಯು ಜೂ.17ಕ್ಕೆ ಮುಕ್ತಾಯವಾಗಲಿದೆ. ಅವರಿಂದ ತೆರವಾಗುವ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಸದ್ಯದ ಲೆಕ್ಕಾಚಾರದ ಪ್ರಕಾರ ಒಂದು ಸ್ಥಾನದ ಗೆಲುವಿಗೆ 19 ಶಾಸಕರ ಮತಗಳ ಅಗತ್ಯ ಇದೆ. ಅಂತೆಯೇ ವಿಧಾನಸಭಾ ಸಂಖ್ಯಾಬಲದ ಆಧಾರದ ಮೇಲೆ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಏಳು, ಪ್ರತಿಪಕ್ಷಗಳಾದ ಬಿಜೆಪಿಗೆ ಮೂರು ಮತ್ತು ಜೆಡಿಎಸ್‌ಗೆ ಒಂದು ಸ್ಥಾನ ಲಭಿಸುವ ಸಾಧ್ಯತೆಯಿದೆ.
ಈ ಚುನಾವಣೆ ಯಾರ ಸ್ಥಾನಕ್ಕೆ? ಬೋಸರಾಜು, ಅರವಿಂದ ಕುಮಾರ ಅರಳಿ, ಕೆ.ಗೋವಿಂದರಾಜು, ತೇಜಸ್ವಿನಿ ಗೌಡ, ಪಿ.ಎಂ.ಮುನಿರಾಜುಗೌಡ, ಕೆ.ಪಿ.ನಂಜುಂಡಿ, ಬಿ.ಎಂ.ಫಾರೂಕ್, ರಘುನಾಥ್ ಮಲ್ಕಾಪುರೆ, ಎನ್.ರವಿಕುಮಾರ್, ಎಸ್. ರುದ್ರೇಗೌಡ ಮತ್ತು ಕೆ.ಹರೀಶ್ ಕುಮಾರ್ ಅವರ ಅವಧಿ ಜೂ.17ಕ್ಕೆ ಮುಗಿಯಲಿದೆ. ಆ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ವಿಧಾನಸಭೆ ಸದಸ್ಯರು ಮತ ಚಲಾವಣೆ ಮಾಡುತ್ತಾರೆ.ಮೇಲ್ಮನೆ 6 ಕ್ಷೇತ್ರಗಳಿಗೆ 78 ಅಭ್ಯರ್ಥಿ ಕಣದಲ್ಲಿವಿಧಾಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಸಮಯ ಮುಕ್ತಾಯವಾಗಿದ್ದು, ಆರು ಕ್ಷೇತ್ರಗಳಲ್ಲಿ ಒಟ್ಟು 78 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಸೋಮವಾರದಂದು 12 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಶಾಸಕ ರಘುಪತಿ ಭಟ್ ಕಣದಲ್ಲಿ ಉಳಿದಿದ್ದಾರೆ.