ಸಾರಾಂಶ
ಬೆಂಗಳೂರು : ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಿರುವ ಏಳು ಮಂದಿಯ ಆಯ್ಕೆ ವಿಚಾರ ಈಗ ಕ್ಲೈಮಾಕ್ಸ್ ಹಂತ ಮುಟ್ಟಿದೆ.
ಚೆಂಡು ಈಗ ಹೈಕಮಾಂಡ್ ಅಂಗಳದಲ್ಲಿದೆ.ಏಕೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಲ ವರ್ಗಕ್ಕೆ ಮಾತ್ರ ಒಮ್ಮತದ ಅಭ್ಯರ್ಥಿ ಸೂಚಿಸಿದ್ದು, ಉಳಿದ ವರ್ಗಗಳ ವಿಚಾರದಲ್ಲಿ ಇಬ್ಬರೂ ಪ್ರತ್ಯೇಕ ಪಟ್ಟಿಯನ್ನು ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪರಿಣಾಮ- ಅಂತಿಮ ಆಯ್ಕೆ ಹೊಣೆಯೀಗ ಹೈಕಮಾಂಡ್ ಹೆಗಲೇರಿದೆ.ಮೂಲಗಳ ಪ್ರಕಾರ, ಹಿಂದುಳಿದ ವರ್ಗಗಳಿಂದ ಯತೀಂದ್ರ ಸಿದ್ದರಾಮಯ್ಯ ಮತ್ತು ಪರಿಶಿಷ್ಟರಿಂದ ಕಾರ್ಯಾಧ್ಯಕ್ಷ ವಸಂತಕುಮಾರ ಅವರ ಹೆಸರು ಮಾತ್ರ ಸಹಮತದಿಂದ ಸೂಚಿತವಾಗಿವೆ. ಹೀಗಾಗಿ ಇವರಿಬ್ಬರಿಗೆ ಟಿಕೆಟ್ ಖಚಿತ.
ಉಳಿದಂತೆ ಇನ್ಯಾವ ವರ್ಗಗಳ ಬಗ್ಗೆಯೂ ಒಮ್ಮತ ಮೂಡಿಲ್ಲ. ಇದರಿಂದಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಪ್ರತ್ಯೇಕ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಿದ್ದಾರೆ ಎನ್ನಲಾಗಿದೆ.ಮೂಲಗಳ ಪ್ರಕಾರ, ಒಕ್ಕಲಿಗ ಕೋಟಾದ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ. ಗೋವಿಂದರಾಜು ಅವರ ಹೆಸರು ಸೂಚಿಸಿದ್ದಾರೆ. ಇದೇ ವೇಳೆ ಉಪ ಮುಖ್ಯಮಂತ್ರಿ ಶಿವಕುಮಾರ್ ಅವರು ವಿನಯ ಕಾರ್ತಿಕ್ ಪರ ನಿಂತಿದ್ದಾರೆ.
ಈ ನಡುವೆ ಚಿಕ್ಕಮಗಳೂರಿನ ಯುವ ನಾಯಕ ಡಿ.ಎಂ. ಸಂದೀಪ್ ಹೆಸರು ಕೂಡ ಮುಂಚೂಣಿಗೆ ಬಂದಿದೆ. ಏಕೆಂದರೆ, ಖುದ್ದು ರಾಹುಲ್ ಗಾಂಧಿ ಅವರು ಸಂದೀಪ್ ಪರ ಇದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಇಬ್ಬರ ಜಗಳ ಮೂರನೇಯವರಿಗೆ ಲಾಭವಾದರೂ ಅಚ್ಚರಿಯಿಲ್ಲ ಎಂಬಂತೆ ಗೋವಿಂದರಾಜು ಹಾಗೂ ವಿನಯ ಕಾರ್ತಿಕ್ ನಡುವಿನ ಪೈಪೋಟಿಯಲ್ಲಿ ಸಂದೀಪ್ ಟಿಕೆಟ್ ಗಿಟ್ಟಿಸಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಇನ್ನೂ ಮುಸ್ಲಿಂ ಕೋಟಾ ಅಡಿಯಲ್ಲಿ ಸಚಿವ ಜಮೀರ್ ಅಹ್ಮದ್ ಅವರ ಕೋರಿಕೆಯ ಮೇರೆಗೆ ಮುಖ್ಯಮಂತ್ರಿಯವರು ಇಸ್ಮಾಯಿಲ್ ತಮಟಗಾರ ಹೆಸರನ್ನು ಸೂಚಿಸಿದ್ದರೆ, ಈ ನಡುವೆ ಮಹಮ್ಮದ್ ಸೌದಾಗರ್ ಅವರ ಹೆಸರು ಪ್ರಬಲವಾಗಿ ಕೇಳಿಬಂದಿದೆ. ಈ ಇಬ್ಬರ ಪೈಕಿ ಒಬ್ಬರಿಗೆ ಅವಕಾಶ ದೊರೆಯುವ ಸಾಧ್ಯತಿಯಿದೆ.
ಕುತೂಹಲಕಾರಿ ಸಂಗತಿಯೆಂದರೆ ಕ್ರಿಶ್ಚಿಯನ್ ಸಮುದಾಯದಿಂದ ಸಿಎಂ ಹಾಗೂ ಡಿಸಿಎಂ ಅವರು ಐವಾನ್ ಡಿಸೋಜಾ ಹೆಸರು ಸೂಚಿಸಿದ್ದಾರೆ. ಆದರೆ, ಹೈಕಮಾಂಡ್ ಈ ಹೆಸರಿನ ಬಗ್ಗೆ ಸಮಾಧಾನ ಹೊಂದಿಲ್ಲ ಎನ್ನಲಾಗುತ್ತಿದೆ. ರಾಜ್ಯ ನಾಯಕರ ಮಾತಿಗೆ ಬೆಲೆ ಸಿಕ್ಕರೆ ಐವಾನ್ ಅವರಿಗೆ ಅವಕಾಶ ಸಿಗಬಹುದು ಇಲ್ಲದಿದ್ದರೆ ಪ್ರವೀಣ್ ಪೀಟರ್ ಅವರಿಗೆ ಅದೃಷ್ಟ ಖುಲಾಯಿಸಬಹುದು ಎನ್ನಲಾಗುತ್ತಿದೆ.
ಮಹಿಳೆಯರಲ್ಲಿ ಪದ್ಮಾವತಿ, ಕಮಲಾಕ್ಷಿ ರಾಮಣ್ಣ, ಪುಷ್ಪಾ ಅಮರನಾಥ್ ಅವರ ಹೆಸರು ಕೇಳಿ ಬರುತ್ತಿದೆ.
ಹೀಗಾಗಿ ಹೈಕಮಾಂಡ್ ಈ ಬಗ್ಗೆ ಒಮ್ಮತ ಮೂಡಿಸಿ ಅಭ್ಯರ್ಥಿ ಹೆಸರು ಅಖೈರುಗೊಳಿಸಬೇಕಿದೆ.ಬೋಸರಾಜು ಪರ ತೀವ್ರ ಲಾಬಿಕುತೂಹಲಕಾರಿ ಸಂಗತಿಯೆಂದರೆ, ಸಚಿವ ಎನ್.ಎಸ್. ಬೋಸರಾಜು ಅವರ ಆಯ್ಕೆ ಇನ್ನೂ ಖಚಿತಗೊಂಡಿಲ್ಲ. ರಾಯಚೂರಿನ ವಸಂತಕುಮಾರ್ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ಅದೇ ಜಿಲ್ಲೆಯ ಬೋಸರಾಜು ಅವರಿಗೆ ಮತ್ತೆ ಅವಕಾಶ ನೀಡುವ ಬಗ್ಗೆ ರಾಜ್ಯ ನಾಯಕತ್ವ ಅಷ್ಟೇನೂ ಆಸಕ್ತಿ ತೋರಿಲ್ಲ. ಹೀಗಾಗಿ ಅವರ ಆಯ್ಕೆ ಕಠಿಣವಾಗಿ ಪರಿಣಮಿಸಿದೆ.
ಆದರೆ, ಬೋಸರಾಜು ಅವರ ಅವರ ಪುತ್ರ ರವಿ ಬೋಸರಾಜು ಹಾಗೂ ಯುವ ಸಚಿವರು ಹೈಕಮಾಂಡ್ ಮಟ್ಟದಲ್ಲಿ ತೀವ್ರ ಲಾಬಿ ನಡೆಸಿದ್ದಾರೆ. ಈ ಲಾಬಿ ಫಲ ನೀಡಿದರೆ ಬೋಸರಾಜು ಪಟ್ಟಿ ಸೇರಬಹುದು. ಇಲ್ಲದೇ ಹೋದರೆ ಅವರಿಗೆ ಕೊಕ್ ದೊರೆತರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.