ಸಾರಾಂಶ
ಶಾಲೆಯಲ್ಲಿ ಬಿಸಿಯೂಟಕ್ಕೆ ತಯಾರಿಸಿದ ಭಾರಿ ಪ್ರಮಾಣ ಅನ್ನ ಚರಂಡಿಯಲ್ಲಿ ಕಂಡಬಂದಿದ್ದು, ಮಕ್ಕಳು ಊಟ ಮಾಡದಿದ್ದಾಗ ಉಳಿದ ಅನ್ನವನ್ನು ಚರಂಡಿಗೆ ಎಸೆಯಯುತ್ತಿದ್ದಾರೆಂಬ ಶಂಕೆ ಮೂಡಿದೆ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ ಇಲ್ಲಿನ ಸರ್ಕಾರಿ ಮಾದರಿ ಶಾಲೆಯ ಬಳಿಯಲ್ಲಿನ ಚರಂಡಿಯಲ್ಲಿ ಶಾಲಾ ಅಕ್ಷರ ದಾಸೋಹದ ಅನ್ನ ಗಣನೀಯ ಪ್ರಮಾಣದಲ್ಲಿ ಕಾಣಿಸಿದ್ದು, ಮಕ್ಕಳಿಗೆ ಅನ್ನದ ಮಹತ್ವದ ಬಗ್ಗೆ ಶಿಕ್ಷಣ ನೀಡಬೇಕಾದ ಶಿಕ್ಷಕರೇ ಈ ರೀತಿ ನಡೆದುಕೊಂಡಿರುವುದು ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.
ಸರ್ಕಾರಿ ಶಾಲೆಯಲ್ಲಿ ಮಕ್ಕಳ ಮಧ್ಯಾಹ್ನದ ಹಸಿವು ತಣಿಸಲು ಬಿಸಿಯೂಟ ಯೋಜನೆ ಜಾರಿಯಲ್ಲಿದೆ. ಬೆಳಗ್ಗೆ ಶಾಲೆಯಲ್ಲಿ ಹಾಜರಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅನ್ನ ಸಿದ್ಧ ಪಡಿಸುವುದು ಶಾಲಾ ನಿಯಮ. ಬಹುತೇಕ ಶಾಲೆಗಳಲ್ಲಿ ಅದು ಸಹಜವಾಗಿ ನಡೆಯುತ್ತಿರುತ್ತದೆ. ಆದರೆ ಇಲ್ಲಿನ ಶಾಲೆಯಲ್ಲಿ ಬಿಸಿಯೂಟಕ್ಕೆ ತಯಾರಿಸಿದ ಭಾರಿ ಪ್ರಮಾಣ ಅನ್ನ ಚರಂಡಿಯಲ್ಲಿ ಕಂಡಬಂದಿದ್ದು, ಮಕ್ಕಳು ಊಟ ಮಾಡದಿದ್ದಾಗ ಉಳಿದ ಅನ್ನವನ್ನು ಚರಂಡಿಗೆ ಎಸೆಯಯುತ್ತಿದ್ದಾರೆಂಬ ಶಂಕೆ ಮೂಡಿದೆ.ಈ ಮಧ್ಯೆ ಕೆಲ ಮಕ್ಕಳು ಶಾಲೆಯಲ್ಲಿ ನೀಡುವ ಬಿಸಿಯೂಟ ಸ್ವೀಕರಿಸದೆ ಮನೆಯಿಂದ ಬುತ್ತಿಯನ್ನು ತರುತ್ತಿದ್ದಾರೆಂಬ ಮಾಹಿತಿ ಲಭಿಸಿದ್ದು, ಹೀಗೆ ಮಕ್ಕಳು ಸ್ವೀಕರಿಸದೆ ಉಳಿಯುವ ಅನ್ನವನ್ನು ನೇರವಾಗಿ ಚರಂಡಿಗೆ ಎಸೆಯಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ತ್ಯಾಜ್ಯ ಸಂಗ್ರಹಣ ವ್ಯವಸ್ಥೆ ಜಾರಿಯಲ್ಲಿದೆ. ಶಾಲೆಯಲ್ಲಿ ಸಂಗ್ರಹವಾಗುವ ಹಸಿಕಸ, ಮಕ್ಕಳ ತಟ್ಟೆಯಲ್ಲಿ ಉಳಿಕೆಯಾದ ಅನ್ನವನ್ನು ಒಂದು ಡಬ್ಬದಲ್ಲಿ ಸಂಗ್ರಹಿಸಿ ತ್ಯಾಜ್ಯ ಸಂಗ್ರಹ ವಾಹನಕ್ಕೆ ನೀಡಿದಂತೆ ಕಾಣುತ್ತಿಲ್ಲ. ಸಾರ್ವಜನಿಕ ಚರಂಡಿಗೆ ಅನ್ನ ಎಸೆಯಬೇಡಿ, ತ್ಯಾಜ್ಯ ನೀರು ಸಂಗ್ರಹಣೆಗೆ ಇಂಗು ಗುಂಡಿ ನಿರ್ಮಿಸುವಂತೆ ಕಳೆದ ಒಂದೂವರೆ ವರ್ಷದಿಂದ ಸತತ ಮನವಿ ಮಾಡುತ್ತಿದ್ದರೂ ಶಾಲಾಡಳಿತದಿಂದ ಸ್ಪಂದನವಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇಂಗು ಗುಂಡಿ ನಿರ್ಮಿಸಲು ಅವಕಾಶವಿದ್ದು, ಅಗತ್ಯ ಕ್ರಮಕ್ಕೆ ಮುಂದಾಗಿ ಎಂದು ಸಲಹೆ ಕೊಟ್ಟರೂ ಸ್ಪಂದನೆ ಇಲ್ಲ. ಮಕ್ಕಳಿಗೆ , ಸಾರ್ವಜನಿಕರಿಗೆ ಮಾದರಿಯಾಗಬೇಕಾದ ಶಾಲಾ ಶಿಕ್ಷಕರು ಹಾಗೂ ಶಾಲಾಡಳಿತದ ಮಂದಿಯ ತಪ್ಪಿನಿಂದಾಗಿ ಚರಂಡಿಗೆ ಅನ್ನು ಎಸೆಯುತ್ತಿದ್ದಾರೆ ಎಂದರು. ಘಟನೆಯ ಪ್ರತಿಕ್ರಿಯಿಸಿದ ಶಾಲಾ ಮುಖ್ಯ ಶಿಕ್ಷಕ ಹನುಮಂತಯ್ಯ, ಅನಾರೋಗ್ಯಕ್ಕೀಡಾದ ಕೆಲ ಮಕ್ಕಳು ಮಾತ್ರ ಮನೆಯಿಂದಲೇ ಮಧ್ಯಾಹ್ನದ ಊಟವನ್ನು ತರುತ್ತಿರುವುದು ಬಿಟ್ಟರೆ, ಉಳಿದೆಲ್ಲಾ ಮಕ್ಕಳೂ, ಶಿಕ್ಷಕರು ಶಾಲೆಯ ಬಿಸಿಯೂಟವನ್ನೇ ಸೇವಿಸುತ್ತಿದ್ದಾರೆ. ಮಕ್ಕಳು ಬಟ್ಟಲು ತೊಳೆಯುವಾಗ ಅದರಲ್ಲಿದ್ದ ಒಂದೆರಡು ಅನ್ನದ ಕಾಳು ನೀರಿನೊಂದಿಗೆ ಚರಂಡಿಗೆ ಹೋಗಿರಬಹುದೇ ವಿನಾ ನಾವು ಅನ್ನವನ್ನು ಚರಂಡಿಗೆ ಎಸೆಯಲಿಲ್ಲ. ದೊಡ್ಡ ಪ್ರಮಾಣದಲ್ಲಿ ಅನ್ನ ಕಾಣಿಸಿಕೊಂಡಿರುವ ವಿದ್ಯಾಮಾನದ ಹಿಂದೆ ಶಾಲೆಗೆ ಕೆಟ್ಟ ಹೆಸರು ತರಿಸುವ ಹುನ್ನಾರವಿದ್ದಂತೆ ಕಾಣಿಸುತ್ತಿದೆ ಎಂದು ತಿಳಿಸಿದ್ದಾರೆ.