ಸಾರಾಂಶ
ಧಾರವಾಡ:
ಪಂಚಮಸಾಲಿ, ಮಲೆಗೌಡ, ಗೌಡ ಲಿಂಗಾಯತ, ದೀಕ್ಷೆ ಲಿಂಗಾಯತರಿಗೆ ರಾಜ್ಯ ಸರ್ಕಾರದಲ್ಲಿ 2ಎ ಮೀಸಲಾತಿ ಹಾಗೂ ಎಲ್ಲ ಲಿಂಗಾಯತ ಉಪ ಸಮಾಜಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಿಸಿ 7ನೇ ಹಂತದ ಚಳವಳಿ ಶುರುವಾಗಿದೆ.ನಗರದ ಉಳವಿ ಚೆನ್ನಬಸವೇಶ್ವರ ದೇವಸ್ಥಾನದಿಂದ ಜಯನಗರ ಬಾರಾಕೊಟ್ರಿ ಬಳಿಯ ಮಾಜಿ ಸಚಿವ, ಶಾಸಕ ವಿನಯ ಕುಲಕರ್ಣಿ ಅವರ ಮನೆ ವರೆಗೂ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬುಧವಾರ ಸಮಾಜದ ಮುಖಂಡರು ಮೆರವಣಿಗೆ ನಡೆಸಿದರು. ಶಾಸಕರ ಅನುಪಸ್ಥಿತಿಯಲ್ಲಿ ಅವರ ಪುತ್ರಿಗೆ ಸ್ವಾಮೀಜಿ ಪತ್ರ ನೀಡಿದರು.
ಬಿಜೆಪಿ ಸರ್ಕಾರ ಇದ್ದಾಗಲೂ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಹೋರಾಟ ನಡೆಸಿದ್ದೆವು. ಈಗಿನ ಸರ್ಕಾರ ಕೂಡ ಮೀಸಲಾತಿ ನೀಡುವ ಭರವಸೆ ಕೊಟ್ಟಿತ್ತು. ಆದರೆ, ಒಂದೂವರೆ ವರ್ಷವಾದರೂ ಭರವಸೆ ಈಡೇರಿಸಿಲ್ಲ. ಆದ್ದರಿಂದ ತಮಗೆ ಕೊಟ್ಟಿರುವ ಶಾಸನಬದ್ಧ ಅಧಿಕಾರ ಸದ್ಬಳಕೆ ಮಾಡಿಕೊಂಡು ನಮ್ಮ ಹಕ್ಕನ್ನು ಪ್ರತಿಪಾದಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ವಿನಯ ಕುಲಕರ್ಣಿ ಅವರಿಗೆ ನೀಡಿದ ಪತ್ರದಲ್ಲಿ ಬರೆಯಲಾಗಿದೆ. ಪತ್ರ ಚಳವಳಿಯಲ್ಲಿ ಸಮಾಜದ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಸರ್ಕಾರದ ಕಣ್ಣು ತೆರೆಯಿಸಲಿ:
ಪತ್ರ ಚಳವಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಮಳೆಗಾಲದ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಮಾಜದ ಎಲ್ಲ ಶಾಸಕರು ಸದನದಲ್ಲಿ ಧ್ವನಿ ಎತ್ತಿ ಸರ್ಕಾರದ ಕಣ್ಣು ತೆರೆಸಬೇಕು. ಇದಕ್ಕಾಗಿ ಪತ್ರ ಚಳವಳಿ ಆರಂಭಿಸುತ್ತಿದ್ದೇವೆ. ಸಮಾಜದ ಮುಖಂಡರು, ಶಾಸಕರಾದ ವಿನಯ್ ಕುಲಕರ್ಣಿ ಅವರ ನಿವಾಸಕ್ಕೆ ಭೇಟಿ ನೀಡಿ ಪತ್ರ ನೀಡುವ ಮುಖಾಂತರ ಸದನದಲ್ಲಿ ಮಾತನಾಡುವಂತೆ ಒತ್ತಾಯ ಮಾಡಿದ್ದೇವೆ. ನಮ್ಮ ಪಂಚಮಸಾಲಿ ಹೋರಾಟದಿಂದ ಸಮಾಜದ 20 ಶಾಸಕರು ಆಯ್ಕೆಯಾಗಿದ್ದಾರೆ. ಹಿಂದೆ ಅಧಿವೇಶನದಲ್ಲಿ ಯಾವ ಶಾಸಕರು ಮಾತನಾಡಿಲ್ಲ. ಶಾಸಕರ ಮತ ಕ್ಷೇತ್ರದಲ್ಲಿ ಮೀಸಲಾತಿ ವಂಚಿತರಿಗಾಗಿ ಧ್ವನಿ ಎತ್ತಲಾಗಿದೆ. ಸದ್ಯ ಎಲ್ಲ ಪಂಚಮಸಾಲಿ ಶಾಸಕರ ಮನೆಗೆ ಒಂದೊಂದು ದಿನ ಭೇಟಿ ಮಾಡಿ ಪತ್ರ ಚಳವಳಿ ಮಾಡಲಿದ್ದೇವೆ ಎಂದರು.ಶಾಸಕರು ಭರವಸೆ ಕೊಡುವವರೆಗೆ ಅವರ ಮನೆ ಬಾಗಿಲಿಗೆ ಹೋಗಿ ಪತ್ರ ಕೊಡಲಿದ್ದೇವೆ. ವಿನಯ ಕುಲಕರ್ಣಿ 2ಎ ಹೋರಾಟಕ್ಕೆ ಮುಂಚೂಣಿ ನಾಯಕರು. ಅವರೇ ಈ ಹೋರಾಟ ಮಾಡಲು ನಮಗೆ ಮೊದಲು ಬೆಂಬಲ ನೀಡಿದ್ದು. ಅವರಿಗೆ ಜಿಲ್ಲೆಗೆ ಬರಲು ಕಾನೂನು ತೊಡಕಿನ ಕಾರಣ ವಿಡಿಯೋ ಕಾನ್ಫರೆನ್ಸ್ ಮೂಲಕ ನಮ್ಮ ಜತೆಗೆ ಮಾತನಾಡಿದ್ದಾರೆ. ಗುರುವಾರ ಬೆಳಗಾವಿ, ಶುಕ್ರವಾರ ಹುಬ್ಬಳ್ಳಿಯಲ್ಲಿ ಚಳವಳಿ ಮಾಡಲಿದ್ದೇವೆ ಎಂದ ಸ್ವಾಮೀಜಿ, ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ಈಗ ನಡೆದುಕೊಳ್ಳಬೇಕಿದೆ. ಚುನಾವಣೆ ಮುಗಿದ ಬಳಿಕ ಸಭೆ ಎಂದು ಹೇಳಿದ್ದರು. ಆದರೂ ಸಭೆ ಮಾಡಿಲ್ಲ. ಈಗಲೂ ಕಾಲ ಮಿಂಚಿಲ್ಲ, ಚುನಾವಣಾ ನೀತಿ ಸಂಹಿತೆ ಮುಗಿದಿದೆ. ಮೀಸಲಾತಿ ಕೊಡಲಿ. ಇಲ್ಲದೇ ಹೋದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.