ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೆಶ್ವರ ದೇವಾಲಯದಲ್ಲಿ ಕರೆಯಲಾದ ಜಾತ್ರಾ ಪೂರ್ವ ಭಕ್ತರ ಮತ್ತು ಅಧಿಕಾರಿಗಳ ಸಭೆ

ಉಪ್ಪಿನಂಗಡಿ: ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಸಂಗಮ ತಾಣವಾಗಿರುವ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರನ ಕ್ಷೇತ್ರವನ್ನು ಇನ್ನೊಂದು ಪ್ರಯಾಗದಂತೆ ಪರಿವರ್ತನೆ ಮಾಡುವ ಕನಸು ನನಸಾಗುವ ಯತ್ನ ಕೊನೆಯ ಹಂತದಲ್ಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು. ಶನಿವಾರ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೆಶ್ವರ ದೇವಾಲಯದಲ್ಲಿ ಕರೆಯಲಾದ ಜಾತ್ರಾ ಪೂರ್ವ ಭಕ್ತರ ಮತ್ತು ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು.

ದೇವಾಲಯದ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ೩೫೨ ಕೋಟಿ ರು. ಮೊತ್ತದ ನೀಲ ನಕ್ಷೆ ಸಿದ್ದವಾಗಿದೆ. ಎಲ್ಲ ಹಂತವನ್ನು ದಾಟಿ ವಿತ್ತ ಸಚಿವರೂ ಆಗಿರುವ ರಾಜ್ಯದ ಮುಖ್ಯಮಂತ್ರಿಗಳ ಕೈಗೆ ಕಡತ ತಲುಪಿದೆ. ಅಲ್ಲಿ ಅನುಮೋದನೆ ದೊರಕಿದೊಡನೆ ಉಪ್ಪಿನಂಗಡಿಯನ್ನು ಇನ್ನೊಂದು ಪ್ರಯಾಗವನ್ನಾಗಿಸುವ ನನ್ನ ಕನಸು ನನಸಾಗಲಿದೆ ಎಂದರು.

ಜಾತ್ರೆ ಸಮಯದಲ್ಲಿ ಪಾರ್ಕಿಂಗ್ , ಶುಚಿತ್ವ , ಸುರಕ್ಷತೆಯತ್ತ ಗಮನಹರಿಸಲು ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ದೇವಾಲಯದಿಂದ ಖರೀದಿಸಲಾದ ಜಾಗದಲ್ಲಿರುವ ಸಿನಿಮಾ ಥಿಯೇಟರ್ ಹಳೆ ಕಟ್ಟಡವನ್ನು ತೆರವುಗೊಳಿಸಿ ಅಲ್ಲಿನ ಜಾಗವನ್ನು ಜಾತ್ರೆ ಸಮಯದಲ್ಲಿ ಬಳಸುವಂತೆ ಮಾಡಬೇಕೆಂದು ನಿರ್ದೇಶನ ನೀಡಿದರು.

ನೇತ್ರಾವತಿ ನದಿ ನೀರಿನಲ್ಲಿ ರಾತ್ರಿ ವೇಳೆ ಮಲ ತ್ಯಾಜ್ಯದ ದುರ್ವಾಸನೆ ಬರುವ ಬಗ್ಗೆ ಕೇಳಿ ಬಂದ ದೂರನ್ನು ಗಂಭ್ಹೀರವಾಗಿ ಪರಿಗಣಿಸಬೇಕೆಂದ ಶಾಸಕರು, ನದಿ ನೀರನ್ನು ಕಲುಷಿತಗೊಳಿಸುವ ಕೃತ್ಯವನ್ನು ನಿರ್ದಾಕ್ಷಿಣ್ಯವಾಗಿ ತಡೆಗಟ್ಟಬೇಕೆಂದು ನಿರ್ದೇಶನ ನೀಡಿದರು. ಸಭೆಯಲ್ಲಿ ತಹಸೀಲ್ದಾರ್ ಎಸ್.ಬಿ. ಕೂಡಲಗಿರಿ, ಉಪತಹಸೀಲ್ದಾರ್ ಕವಿತಾ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯಕ್ , ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ. ಹರೀಶ್ ಉಪಾಧ್ಯಾಯ, ಅನಿತಾ ಕೇಶವ, ಡಾ. ರಮ್ಯ ರಾಜಾರಾಮ್ , ವೆಂಕಪ್ಪ ಪೂಜಾರಿ, ದೇವಿದಾಸ್ ರೈ, ಗೋಪಾಲಕೃಷ್ಣ ರೈ, ಕೃಷ್ಣ ರಾವ್ ಅರ್ತಿಲ, ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು ಮತ್ತಿತರರು ಉಪಸ್ಥಿತರಿದ್ದರು. ಕರುಣಾಕರ ಸುವರ್ಣ, ಯು. ರಾಮ , ಸ್ವರ್ಣೇಶ್ ಗಾಣಿಗ, ರವಿ ಆಚಾರ್ಯ, ಸಚಿನ್ ಎ. ಎಸ್., ಕಾರ್ತೀಕ್ ಶೇಠ್ , ಸಂತೋಷ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು. ಪ್ರಮುಖರಾದ ಡಾ. ರಾಜಾರಾಮ್ ಕೆ.ಬಿ., ಚಂದಪ್ಪ ಮೂಲ್ಯ, ಉಮಾನಾಥ ಶೆಟ್ಟಿ, ಕಂಗ್ವೆ ವಿಶ್ವನಾಥ ಶೆಟ್ಟಿ, ರಾಮಚಂದ್ರ ಮಣಿಯಾಣಿ, ವಿದ್ಯಾಧರ ಜೈನ್ , ಎನ್. ಗೋಪಾಲ ಹೆಗ್ಡೆ, ಹರಿರಾಮಚಂದ್ರ, ಎನ್. ರಾಘವೇಂದ್ರ ನಾಯಕ್, ಸುದರ್ಶನ್ ಎಂ., ಮಿತ್ರದಾಸ್ ರೈ, ಉಷಾ ಮುಳಿಯ, ಗೀತಾ ದಾಸರಮೂಲೆ, ಕೆ. ಉದಯ ಕುಮಾರ್, ಮುರಳೀಧರ್ ರೈ ಮಠಂತಬೆಟ್ಟು ಭಾಗವಹಿಸಿದ್ದರು. ವಿವಿಧ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.