ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಕನ್ನಡ ನಾಡು, ನುಡಿ, ಸಂಸ್ಕೃತಿಯ ಅರಿವು ಮೂಡಿಸುವಲ್ಲಿ ಶಿಕ್ಷಕರ ಮತ್ತು ಹೆತ್ತವರ ಪಾತ್ರ ಬಹಳಷ್ಟಿದೆ. ಕನ್ನಡ ಸಂಸ್ಕೃತಿಯ ರಾಯಭಾರಿಗಳನ್ನಾಗಿ ಯುವ ಜನಾಂಗವನ್ನು ಮೂಡಿಸುವ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಹೇಳಿದರು. ಅವರು ಇಳಂತಿಲ ಗ್ರಾಮದ ಅಂಡೆತ್ತಡ್ಕ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ 14ನೇ ಕನ್ನಡ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಆಸಕ್ತಿ ಮತ್ತು ಇಚ್ಛಾಶಕ್ತಿ ಮನಸ್ಸುಗಳ ಮೂಲಕ ಭಾ಼ಷೆಯನ್ನು ಉಳಿಸಲು ಸಾಧ್ಯ ಎಂದರು. ಬಳಿಕ ಮಾತನಾಡಿದ ಅತಿಥಿಗಳಾದ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು , ಕನ್ನಡ ಭಾಷೆಯ ಸೊಬಗು ಸವಿಯುವ ಮತ್ತು ಪ್ರಕಟಿಸುವ ನಿಟ್ಟಿನಲ್ಲಿ ಯುವ ಮನಸುಗಳನ್ನು ತಲುಪಬೇಕಾಗಿದೆ ಎಂದರು. ಇಳಂತಿಲ ಕನ್ನಡ ಬಳಗದ ಅಧ್ಯಕ್ಷ ಬಿ ಸುಬ್ರಹ್ಮಣ ರಾವ್ ಪ್ರಾಸ್ತವಿಕವಾಗಿ ಮಾತನಾಡಿ, ಗತಕಾಲದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಿ ಹಿರಿಯರು ಉಳಿಸಿ ಬಂದ ಠೇವಣಿಯ ಬಡ್ಡಿಯಲ್ಲಿ ಕನ್ನಡ ಭಾಷೆಯ ಸೌಂದರ್ಯವನ್ನು ಮುಂದಿನ ಪೀಳಿಗೆ ತಿಳಿಸುವ ನಿಟ್ಟಿನಲ್ಲಿ ಕನ್ನಡ ಹಬ್ಬ ನಿರಂತರ ನಡೆಸಲು ಸಾಧ್ಯವಾಗಿದೆ ಎಂದರು. ಸಮಾರಂಭದಲ್ಲಿ ಪ್ರಮುಖರಾದ ಪೆಲಪ್ಪಾರು ವೆಂಕಟರಮಣ ಭಟ್, ಶಾಲಾ ಮುಖ್ಯ ಶಿಕ್ಷಕ ಕೃಷ್ಣಪ್ಪ ಪೂಜಾರಿ, ಶಿಕ್ಷಕರಾದ ಅಣ್ಣಪ್ಪ, ಗಿರಿಜಾ, ಸಂತೋಷ ಮತ್ತಿತರರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಶಿಕ್ಷಕಿ ನಯನ ವಂದನೆಗೈದರು.