ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ, ಮಹಾಕಾಳಿ ದೇವಸ್ಥಾನದಲ್ಲಿ ಮಹಾಕಾಳಿ ಅಮ್ಮನವರಿಗೆ ಶುಕ್ರವಾರ ರಾತ್ರಿ ನೇಮೋತ್ಸವವು ಭಾರಿ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಭಕ್ತಿ ಸಡಗರದೊಂದಿಗೆ ನಡೆಯಿತು.ಅಣಿಕಟ್ಟೆಯಲ್ಲಿ ಶ್ರೀ ಮಹಾಕಾಳಿ ಅಮ್ಮನ ಮುಡಿ ನಾಲಗೆಯನ್ನು ಪರಂಪರಾಗತ ಪೂಜನೆಗೆ ಒಳಪಡಿಸಿ ನಾಲ್ಕು ಬಿದಿರುಗಳ ಹಾಯದಿಂದ ನಾಲ್ಕು ಮನೆತನದವರು ಒಗ್ಗೂಡಿ ಸಂತಮಜಲಿಗೆ ತಂದು, ಅಲ್ಲಿ ಅಣಿಕಟ್ಟಿ ನಿಂತ ದೈವನರ್ತಕರ ಮೂಲಕ ನೇಮೋತ್ಸವದ ವಿಧಿವಿಧಾನಗಳು ನೆರವೇರಿದವು. ಕ್ಷೇತ್ರದ ಪರಿವಾರ ದೈವಗಳ ನೇಮೋತ್ಸವವು ಶನಿವಾರ ನಸುಕಿನ ವೇಳೆಯ ವರೆಗೆ ನಡೆದವು.ಗಮನ ಸೆಳೆದ ಮಲ್ಲಿಗೆ ಸಮರ್ಪಣೆ:ನೇಮದಂದು ಬಳಕೆಯಾಗುವ ಅಮ್ಮನ ಮುಡಿಗೆ ಸಾವಿರಾರು ಭಕ್ತರು ಮಲ್ಲಿಗೆ ಹೂವನ್ನು ಸಮರ್ಪಿಸಿ ಪುನೀತರಾದರು. ಭಕ್ತರು ಸಲ್ಲಿಸಿದ ಮಲ್ಲಿಗೆ ಹಾರವು ಬೃಹತ್ ಪ್ರಮಾಣದಲ್ಲಿ ಸಂಗ್ರಹಗೊಂಡು ಗಮನ ಸೆಳೆಯಿತು.ಕಿಕ್ಕಿರಿದು ಜಮಾಯಿಸಿದ ಭಕ್ತರು:ಮಹಾಕಾಳಿ ಮೆಚ್ಚಿ ಯಾ ನೇಮಕ್ಕೆ ಭಾರಿ ಸಂಖ್ಯೆಯ ಭಕ್ತರು ಆಗಮಿಸುವು ಇಲ್ಲಿನ ವಿಶೇಷತೆಯಾಗಿದ್ದು, ಶುಕ್ರವಾರವೂ ನಿರೀಕ್ಷೆಯನ್ನು ಮೀರಿದ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಭಕ್ತರಿಗೆ ಶ್ರೀ ದೇವಳದ ವತಿಯಿಂದ ರಾತ್ರಿ ಅನ್ನ ಸಂತರ್ಪಣೆ ಏಪ್ಡಿಸಲಾಗಿದ್ದು, ಮಧ್ಯರಾತ್ರಿ ವರೆಗೆ ಅನ್ನಪ್ರಸಾದ ವಿತರಣೆ ನಡೆಯಿತು. ನೆಕ್ಕಿಲಾಡಿ ಪರಿಸರದ ಭಕ್ತರ ನೇತೃತ್ವದಲ್ಲಿ ಆಗಮಿಸಿದ ಭಕ್ತರಿಗೆ ಪರಂಪಾರಗತ ಸೋಜಿಯನ್ನು ವಿತರಿಸುವ ಸೇವೆಯೂ ಗಮನ ಸೆಳೆಯಿತು.ಧರ್ಣಪ್ಪ ಪರವ ಮತ್ತವರ ಕುಟುಂಬ ಸದಸ್ಯರ ಪಾಲ್ಗೊಳ್ಳುವಿಕೆಯಿಂದ ಮಹಾಕಾಳಿ ಅಮ್ಮನವರ ಮೆಚ್ಚಿಯ ನಡಾವಳಿಗಳು ನಡೆದವು. ಸಾವಿರಾರು ಭಕ್ತರು ಪರವ ಮನೆತನದ ಮಂದಿಯಿಂದ ಕರಿನೂಲು ಧಾರಣೆ ಮಾಡಿಸಿಕೊಂಡರು.ಕಾರ್ಯಕ್ರಮದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಮಲ್ಲಿಕಾ ಪಕಳ, ಮಾಜಿ ಶಾಸಕ ಸಂಜೀವ ಮಠಂದೂರು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಯ್ಕ್, ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ, ಸಮಿತಿ ಸದಸ್ಯರಾದ ಕೆ. ಹರೀಶ್ ಉಪಾಧ್ಯಾಯ, ಬಿ.ಗೋಪಾಲಕೃಷ್ಣ ರೈ, ಸೋಮನಾಥ, ಕೃಷ್ಣರಾವ್ ಅರ್ತಿಲ, ದೇವಿದಾಸ್ ರೈ ಬಿ., ವೆಂಕಪ್ಪ ಪೂಜಾರಿ, ಅನಿತಾ ಕೇಶವ ಗೌಡ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಮಾಜಿ ಸದಸ್ಯರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಸುನಿಲ್ ಅನಾವು, ಸುನಿಲ್ ನಾಯ್ಕ್, ಹರಿರಾಮಚಂದ್ರ, ಸುಂದರ ಗೌಡ, ಪ್ರಮುಖರಾದ ಎನ್.ಉಮೇಶ್ ಶೆಣೈ, ರಾಮಚಂದ್ರ ಮಣಿಯಾಣಿ, ಸುಜಾತಕೃಷ್ಣ ಆಚಾರ್ಯ, ಎನ್.ಗೋಪಾಲ ಹೆಗ್ಡೆ, ಐ.ಚಂದ್ರಶೇಖರ್ ನಾಯಕ್, ಡಾ. ಎಂ.ಎನ್. ಭಟ್, ಡಾ. ನಿರಂಜನ್ ರೈ, ಡಾ. ಸುಪ್ರಿತ್ ಲೋಬೋ, ಪ್ರಶಾಂತ್ ಡಿಕೋಸ್ಟಾ, ಕೈಲಾರ್ ರಾಜಗೋಪಾಲ ಭಟ್, ಕೃಷ್ಣ ಶೈಣೈ ಮೊದಲಾದವರು ಭಾಗವಹಿಸಿದ್ದರು.