ಇಲ್ಲಿನ ನೇತ್ರಾವತಿ ಸೇತುವೆಯಲ್ಲಿ ಕಾಣಿಸಿಕೊಂಡಿದೆ ಎನ್ನಲಾದ ಬಿರುಕಿನ ಬಗ್ಗೆ ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಲೋಕೋಪಯೋಗಿ ಇಲಾಖೆ ಕಾರ‍್ಯ ನಿರ್ವಾಹಕ ಇಂಜಿನಿಯರ್ ರಾಘವೇಂದ್ರ ನಾಯಕ್ ನೇತೃತ್ವದ ತಂಡ ಮಂಗಳವಾರ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಸೇತುವೆಯಲ್ಲಿ ಕಾಣಿಸಿಕೊಂಡಿದೆ ಎನ್ನಲಾದ ಬಿರುಕಿನ ಬಗ್ಗೆ ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಲೋಕೋಪಯೋಗಿ ಇಲಾಖೆ ಕಾರ‍್ಯ ನಿರ್ವಾಹಕ ಇಂಜಿನಿಯರ್ ರಾಘವೇಂದ್ರ ನಾಯಕ್ ನೇತೃತ್ವದ ತಂಡ ಮಂಗಳವಾರ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಮಂಗಳವಾರ ಬೆಳಗ್ಗೆ ಸೇತುವೆ ಇಕ್ಕೆಲಗಳ ಸ್ಲ್ಯಾಬ್‌ಗಳ ಬಿರುಕು ಕುರಿತಂತೆ ಅಧ್ಯಯನ ನಡೆಸಿದ ಅವರು ಮಳೆ ಪ್ರಮಾಣ ಕಡಿಮೆಯಾದ ಬಳಿಕ ಸೇತುವೆ ಅಡಿ ಭಾಗದ ಸ್ಲ್ಯಾಬ್‌ಗಳನ್ನು ಪರಿಶೀಲನೆಗೊಳಪಡಿಸಲಾಗುವುದು ಹಾಗೂ ಫಿಲ್ಲರ್ ಗಳಲ್ಲಿ ಕಾಣಿಸಿರುವ ಸವೆತವನ್ನು ಸರಿಪಡಿಸಲು ಯತ್ನಿಸಲಾಗುವುದು. ಅಲ್ಲದೆ ಈಗಾಗಲೇ ಗುರುವಾಯನಕೆರೆ ಕಡೆಯಿಂದ ಮೈಸೂರಿನತ್ತ ತೆರಳುವ ಭಾರಿ ಗಾತ್ರದ ಘನ ವಾಹನಗಳಲ್ಲಿ ರಾತ್ರಿ ಹಗಲು ಎನ್ನದೇ ಮಿತಿ ಮೀರಿದ ಭಾರದ ಮಣ್ಣು ಒಯ್ಯುವ ಲಾರಿಗಳಿಗೆ ಕಡಿವಾಣ ಹಾಕಲು ಪ್ರಾದೇಶಿಕ ಸಾರಿಗೆ ಆಯುಕ್ತರಿಗೆ ಪತ್ರ ಮೂಲಕ ತಿಳಿಸಲಾಗುವುದು. ಇದರಿಂದ ಕೊಂಚ ಪ್ರಮಾಣದ ಹಾನಿಯಾಗುವ ಸಾಧ್ಯತೆ ಇದ್ದು, ಸೇತುವೆಯ ಬಾಳಿಕೆಗಾಗಿ ಈ ಕ್ರಮ ಅನುಸರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ತಕ್ಷಣವೇ ಮಳೆಗಾಲಕ್ಕೆ ನಿರ್ವಾಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಅಲ್ಲದೆ ಕುಪ್ಪೆಟ್ಟಿ ಉಪ್ಪಿನಂಗಡಿ ನಡುವಣ ರಸ್ತೆ ಸಂಪೂರ್ಣ ಹದಗೆಟ್ಟಿರುವುದು ಮನವರಿಕೆಯಾಗಿದ್ದು, ಮರು ಡಾಮರೀಕರಣಕ್ಕೆ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಕಳುಹಿಸಿಕೊಡಲಾಗಿದೆ.ಸಹಾಯಕ ಇಂಜಿನಿಯರ್ ಗೋಪಾಲ್, ಕಿರಿಯ ಇಂಜಿನಿಯರ್ ಸೂರಜ್ ಗುತ್ತಿಗೆದಾರ ಅಕ್ಷಯ್ ಸುವರ್ಣ, ಯೋಗೀಶ ಅಳಕೆ, ಇಳಂತಿಲ ಗ್ರಾಪಂ ಮಾಜಿ ಅಧ್ಯಕ್ಷ ಇಸುಬು ಪೆದಮಲೆ, ಮಾಜಿ ಸದಸ್ಯ ಯು.ಟಿ. ಪಯಾಜ್, ಅಹಮ್ಮದ್, ತಣ್ಣೀರುಪಂತ ಗ್ರಾಪಂ ಸದಸ್ಯ ಡಿ.ಕೆ. ಅಯೂಬ್ ಸ್ಥಳೀಯರಾದ ರಶೀದ್ ಯು.ಟಿ. ಅಮನ್, ನಬೀಲ್ ಉಪಸ್ಥಿತರಿದ್ದರು.