ರಾಷ್ಟ್ರೀಯ ಹೆದ್ದಾರಿ ೭೫ ರ ಚತುಷ್ಪಥ ಕಾಮಗಾರಿಯ ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸರ್ವೀಸ್ ರಸ್ತೆಯ ಕಾಮಗಾರಿ ತೀರಾ ಮಂದಗತಿಯಲ್ಲಿ ನಡೆಯುತ್ತಿದೆ ಎಂದು ಇಲ್ಲಿನ ವರ್ತಕ ಸಂಘವು ಸ್ಥಳೀಯಾಡಳಿತ ಹಾಗೂ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದೆ.
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ೭೫ ರ ಚತುಷ್ಪಥ ಕಾಮಗಾರಿಯ ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸರ್ವೀಸ್ ರಸ್ತೆಯ ಕಾಮಗಾರಿ ತೀರಾ ಮಂದಗತಿಯಲ್ಲಿ ನಡೆಯುತ್ತಿದ್ದು, ಇದರಿಂದಾಗಿ ಸ್ಥಳೀಯ ವರ್ತಕರು ಸುದೀರ್ಘ ಕಾಲ ಸಮಸ್ಯೆಗೆ ಸಿಲುಕುವಂತಾಗಿದೆ ಎಂದು ಇಲ್ಲಿನ ವರ್ತಕ ಸಂಘವು ಸ್ಥಳೀಯಾಡಳಿತ ಹಾಗೂ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದೆ. ಕಳೆದ ಮಳೆಗಾಲದ ಮೊದಲು ವೇಗದೊಂದಿಗೆ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದರೆ, ಮಳೆಗಾಲ ಮುಗಿದು ಮತ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆಯಾದರೂ ಕಾಮಗಾರಿಯ ವೇಗ ಮಾತ್ರ ನಿಧಾನವಗಿದೆ. ಇದರಿಂದಾಗಿ ಪರ್ಯಾಯವಾಗಿ ಕಲ್ಪಿಸಲಾದ ಮಾರ್ಗದಲ್ಲಿನ ವಾಹನ ಸಂಚಾರ ಪೇಟೆಯಲ್ಲಿನ ವ್ಯವಹಾರಿಕ ಕ್ಷೇತ್ರ ತಲ್ಲಣಗೊಳಿಸಿದ್ದು, ಆಕ್ರೋಶಗೊಂಡ ವರ್ತಕರು ಕಾಮಗಾರಿ ಆದ್ಯತೆಯ ನೆಲೆಯಲ್ಲಿ ಕ್ಷಿಪ್ರ ಗತಿಯಲ್ಲಿ ಪೂರ್ಣಸಬೇಕೆಂದು ಅಗ್ರಹಿಸಿ ಬುಧವಾರ ಪಂಚಾಯಿತಿ ಕಚೇರಿಗೆ ಲಿಖಿತ ಮನವಿ ಸಲ್ಲಿಸಿದ್ದರು.
ಪಂಚಾಯಿತಿ ಆಡಳಿತವು ಕಾಮಗಾರಿ ನಿರತ ಕೆಎನ್‌ಆರ್ ಸಂಸ್ಥೆಯ ಇಂಜಿನಿಯರ್ ಗಳನ್ನು ಗುರುವಾರ ಸ್ಥಳಕ್ಕೆ ಕರೆಯಿಸಿ ನಡೆಸಲಾಗುತ್ತಿರುವ ಕಾಮಗಾರಿಯನ್ನು ಅನಗತ್ಯ ವಿಳಂಬ ಮಾಡದೆ ಆದ್ಯತೆಯ ನೆಲೆಯಲ್ಲಿ ತ್ವರಿತಗತಿಯಲ್ಲಿ ನಡೆಸಬೇಕೆಂದು ಅಗ್ರಹಿಸಿತು.ಸ್ಥಳದಲ್ಲಿ ಉಪಸ್ಥಿತರಿದ್ದ ಹಿರಿಯ ಉದ್ಯಮಿ ಯು. ರಾಮ , ವರ್ತಕ ಸಮೂಹ ಅನುಭವಿಸುತ್ತಿರುವ ಸಂಕಷ್ಟಗಳನ್ನು ಉಲ್ಲೇಖಿಸಿ, ಆಡಳಿತ ವ್ಯವಸ್ಥೆಯಾಗಲಿ, ಜನಪ್ರತಿನಿಧಿಗಳಾಗಲಿ ಈ ರೀತಿಯ ನಿರ್ಲಕ್ಷ್ಯ ಧೋರಣೆ ಅನುಸರಿಸುವುದು ಸರಿಯಲ್ಲ. ತಾಳ್ಮೆಯನ್ನು ಕೆಣಕುತ್ತ್ಲೇ ಇದ್ದರೆ ಬೀದಿಗಿಳಿದು ಹೋರಾಟ ನಡೆಸುವುದು ನಮಗೆ ಅನಿರ್ವಾಯವಾದೀತೆಂದು ಎಚ್ಚರಿಸಿದರು. ಎಂಜಿನಿಯರ್ ರಘುನಾಥ್ ರೆಡ್ಡಿ ವರ್ತಕ ಸಮೂಹದ ಆಗ್ರಹ ಆಲಿಸಿ , ಕಾಮಗಾರಿ ವೇಗವಾಗಿ ಪೂರೈಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟ, ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಡಾ ರಾಜಾರಾಮ ಕೆ ಬಿ, ಪಂಚಾಯಿತಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಪಂಚಾಯಿತಿ ಸದಸ್ಯ ಅಬ್ದುಲ್ ರಶೀದ್, ವರ್ತಕರಾದ ಮಸೂದ್ , ಕೈಲಾರ್ ರಾಜಗೋಪಾಲ ಭಟ್, ಅನೂಷ್ ಕುಲಾಲ್, ಅರವಿಂದ ಭಂಡಾರಿ, ಪ್ರಕಾಶ್ ಬಿ, ರೂಪೇಶ್ ರೈ ಅಲಿಮಾರ, ಕರಾಯ ಸತೀಶ್ ನಾಯಕ್ , ವಸಂತ ಗೌಡ, ಚೇತನ್ ಶೆಣೈ ಮತ್ತಿತರರಿದ್ದರು.