ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಬದಲಾದ ನೇತ್ರಾವತಿ ನದಿಯ ಜಲಮಟ್ಟದಿಂದಾಗಿ ಈ ಬಾರಿ ಉದ್ಭವ ಲಿಂಗಕ್ಕೆ ನೇರವಾಗಿ ಪೂಜೆ ಸಲ್ಲಿಸುವ ಅವಕಾಶ ಇಲ್ಲವಾಗಿದ್ದು, ಭಕ್ತ ಜನತೆಯ ನಿರಾಸೆಯ ನಡುವೆಯೇ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳೀ ದೇವಾಲಯದಲ್ಲಿ ಫೆ.೨೧ರಿಂದ ವರ್ಷಾವಧಿ ಮಖೆ ಜಾತ್ರೋತ್ಸವ ಪ್ರಾರಂಭಗೊಳ್ಳಲಿದೆ.ಫೆ.೨೧ರಂದು ದ್ವಜಾರೋಹಣದೊಂದಿಗೆ ವರ್ಷಾವಧಿ ಉತ್ಸವಕ್ಕೆ ಚಾಲನೆ ದೊರಕಲಿದ್ದು, ಫೆ.೨೩ರಂದು ಮೊದಲ ಮಖೆ ಜಾತ್ರೆ (ಹುಣ್ಣಿಮೆ ಮಖೆ ಕೂಟ) ನಡೆಯಲಿದೆ.. ಫೆ.೨೫ ರಂದು ಶ್ರೀ ದೇವರ ಪ್ರತಿಷ್ಠಾ ಮಹೋತ್ಸವ , ಮಾರ್ಚ್ ೩ ರಂದು ನಡು ಮಖೆಯಾಗಿ ಅಷ್ಠಮಿ ಮಖೆ ಜಾತ್ರೆ ಜರುಗಲಿದೆ. ಮಾರ್ಚ್ ೮ರಂದು ಕಡೆ ಮಖೆಯಾಗಿ ಶಿವರಾತ್ರಿ ಮಖೆ ಜಾತ್ರೆ ನಡೆಯಲಿದೆ. ಶಿವರಾತ್ರಿಯ ಹಿನ್ನೆಲೆಯಲ್ಲಿ ನದಿ ಗರ್ಭದಲ್ಲಿನ ಉದ್ಭವ ಲಿಂಗಕ್ಕೆ ನಡೆಯುತ್ತಿದ್ದ ಎಲ್ಲ ಪೂಜೆ ಪುನಸ್ಕಾರಗಳು ಈ ಬಾರಿ ಸ್ಥಗಿತಗೊಳ್ಳಲಿದ್ದು, ಭಕ್ತಾದಿಗಳನ್ನು ನಿರಾಸೆಗೆ ಒಳಪಡಿಸಿದೆ.
ಮಾರ್ಚ್ ೧೫ ರಂದು ಮಹಾಕಾಳಿ ಅಮ್ಮನವರ ಮೆಚ್ಚಿ, ಮತ್ತು ಮಾರ್ಚ್ ೧೯ ರಂದು ದೊಂಪದ ಬಲಿ ನೇಮೋತ್ಸವವು ಜರುಗಲಿದೆ. ಗತ ವೈಭವ ಕಳೆದುಕೊಳ್ಳಲಿದೆ ಮಖೆ ತೀರ್ಥಸ್ನಾನ: ಹರಿಯುವ ನದಿ ಅದರಲ್ಲೂ ಉಭಯ ನದಿಗಳು ಸಂಗಮಿಸುವ ಸ್ಥಳ ಪುಣ್ಯ ತೀರ್ಥ ಸ್ನಾನಕ್ಕೆ ಪ್ರಾಶಸ್ತ್ಯವೆನಿಸಿದೆ. ಅದರಂತೆ ಉಪ್ಪಿನಂಗಡಿಯಲ್ಲಿ ಕುಮಾರಧಾರಾ ನದಿ ಮತ್ತು ನೇತ್ರಾವತಿ ನದಿಗಳು ಸಂಗಮಿಸಿದ್ದು, ನದಿ ಗರ್ಭದಲ್ಲಿ ಸಾವಿರಾರು ಲಿಂಗ ರೂಪಿ ಕಲ್ಲುಗಳು ಇರುವುದರಿಂದ ಇಲ್ಲಿ ಶಿವ ಸಹಸ್ರಲಿಂಗ ರೂಪದಲ್ಲಿ ಇದ್ದು , ಮಖೆ ಜಾತ್ರೋತ್ಸವದ ಸಮಯದಲ್ಲಿ ಇಲ್ಲಿನ ಸಂಗಮ ಕ್ಷೇತ್ರದಲ್ಲಿ ಮಿಂದೆದ್ದರೆ ಪೂರ್ವಜನ್ಮದ ಪಾಪಗಳೂ ನಾಶವಾಗುವುದೆಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಅಂತೆಯೇ ಪ್ರಾಚೀನ ಕಾಲದಿಂದಲೂ ವರ್ಷಂಪ್ರತಿ ನಡೆಯುವ ಮೂರು ಮಖೆ ಜಾತ್ರೆಯ ಸಮಯದಲ್ಲೂ ಸಂಗಮ ಸ್ಥಳದಲ್ಲಿ ಸಾವಿರಾರು ಭಕ್ತರು ಮಖೆ ತೀರ್ಥ ಸ್ನಾನ ಮಾಡಿ ಪುನೀತರಾಗುತ್ತಿದ್ದರು.ಈ ಬಾರಿ ಅಣೆಕಟ್ಟಿನ ಹಿನ್ನೀರು ಉಪ್ಪಿನಂಗಡಿಯುದ್ದಕ್ಕೂ ವ್ಯಾಪಿಸಿರುವುದರಿಂದ ಈ ಹಿಂದಿನಂತೆ ಭಕ್ತ ಜನತೆಗೆ ನದಿಗಿಳಿದು ತೀರ್ಥ ಸ್ನಾನ ಮಾಡಲು ಅಸಾಧ್ಯ. ನದಿಗಿಳಿಯುವ ಎರಡು ಮೆಟ್ಟಿಲುಗಳಲ್ಲಿಯೇ ಸ್ನಾನ ಮಾಡಲು ಅವಕಾಶವಿದ್ದು, ಅಣೆಕಟ್ಟಿನ ಹಿನ್ನೀರು ನಿಂತ ನೀರಿನಂತೆ ಭಾಸವಾಗುತ್ತಿರುವುದರಿಂದ ಮೇಲಾಗಿ ಪೇಟೆ ಪಟ್ಟಣದ ಕೊಳಚೆ ನೀರು ದೇವಾಲಯದ ಸನಿಹದಲ್ಲೇ ನದಿಗೆ ಸೇರುತ್ತಿರುವುದರಿಂದ ಮಖೆ ತೀರ್ಥಸ್ನಾನ ಗತ ವೈಭವವನ್ನು ಕಳೆದುಕೊಳ್ಳುವುದು ನಿಶ್ಚಿತವೆನಿಸಿದೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))