ಉಪ್ಪಿನಂಗಡಿ: ಹಸು ಹಾಲು ಕೊಡುವುದನ್ನು ಕಡಿಮೆ ಮಾಡಿದಾಗ ಕಸಾಯಿಕಾನೆಗೆ ತಳ್ಳುವವರ ಸಂಖ್ಯೆಯೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಬಿಳಿಯೂರು ಗ್ರಾಮದ ಬೆದ್ರದ ಕುಟುಂಬವೊಂದರ ಗೋಪ್ರೀತಿ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಹೌದು.. ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ಬೆದ್ರ ಮನೆಯ ವಾಸಪ್ಪ ಪೂಜಾರಿ ಎಂಬವರ ಮನೆಯಲ್ಲಿರುವ ಗೋವು ೨೮ ವರ್ಷಗಳನ್ನು ಪೂರೈಸಿದ್ದು, ಹುಟ್ಟು, ತಾರುಣ್ಯ, ಯೌವ್ವನ, ವೃದ್ದಾಪ್ಯವನ್ನೂ ಒಂದೇ ಮನೆಯಲ್ಲಿ ಕಂಡಿರುವುದು ವಿಶೇಷವಾಗಿದೆ.
ಹೈನುಗಾರಿಕೆಗಾಗಿ ಗೋವುಗಳನ್ನು ಸಾಕುವ ಮಂದಿ ಹಾಲಿನ ಲಭ್ಯತೆಯನ್ನು ಆಧರಿಸಿ ಗೋವುಗಳನ್ನು ಉಳಿಸುವ ಅಥವಾ ಮಾರಾಟ ಮಾಡುವ ನಿರ್ಧಾರವನ್ನು ತಳೆಯುತ್ತಾರೆ. ತತ್ ಪರಿಣಾಮ ಗೋವುಗಳು ತನ್ನ ಜೀವಿತಾವಧಿಯಲ್ಲಿ ಹಲವಾರು ಮಂದಿಯ ಯಜಮಾನರನ್ನು ಕಂಡು ನಿರುಪಯುಕ್ತ ಎಂದೆನಿಸಿದಾಗ ಕಸಾಯಿಖಾನೆಯತ್ತ ಸಾಗುತ್ತಿರುವುದನ್ನು ಕಾಣುತ್ತಿರುವ ಇಂದಿನ ದಿನಗಳಲ್ಲಿ ಗೋವು ಮುದಿಯಾದರೂ ಅದು ನನ್ನ ಮನೆ ಮಗಳು ಎಂಬಂತೆ ಸಾಕುತ್ತಿರುವ ವಾಸಪ್ಪ ಪೂಜಾರಿಯವರ ನಡೆ ಶ್ಲಾಘನೀಯವಾದದ್ದು.೧೯೯೮ರಲ್ಲಿ ಹುಟ್ಟಿದ ಗೌರಿ: ೧೯೯೮ರಲ್ಲಿ ವಾಸಪ್ಪ ಪೂಜಾರಿ ಹಟ್ಟಿಯಲ್ಲೇ ಜನಿಸಿದ ಗೌರಿ ಇಷ್ಟು ವರುಷಗಳ ಕಾಲ ಈ ಮನೆಯವರಿಗೆ ಹಾಲುಣಿಸಿದ್ದಾಳೆ. ಹೀಗಾಗಿ ಗೌರಿ ಕೇವಲ ಹಸುವಲ್ಲ ನಮ್ಮ ಮನೆಯ ಮಗಳು ಎಂದು ಮನೆ ಮಾಲೀಕ ವಾಸಪ್ಪ ಬಣ್ಣಿಸಿದ್ದಾರೆ. ಗೋವಿನ ಯಜಮಾನ ವಾಸಪ್ಪ ಹೇಳುವ ಪ್ರಕಾರ ಇತ್ತೀಚೆಗೆ ಗೌರಿ ಆಹಾರ ತಿನ್ನುವುದನ್ನು ಕಡಿಮೆ ಮಾಡುತ್ತಿದ್ದಾಳೆ. ಗೌರಿ ಇನ್ನು ತುಂಬ ದಿವಸ ನಮ್ಮೊಂದಿಗಿರುವುದು ಅನುಮಾನ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಪ್ರೀತಿ ಮೆಚ್ಚುವಂತಹದ್ದು: ಕೆದಿಲ ಗಣರಾಜ್ ಭಟ್ ನಮಗೆ ಹಾಲುಣಿಸಿದ ಗೋ ಮಾತೆಯ ಋಣವನ್ನು ಮರೆತು ಹಸು ಹಾಲು ಕೊಡುವುದನ್ನು ಕಡಿಮೆ ಮಾಡಿದಾಗ ಕಸಾಯಿಕಾನೆಗೆ ತಳ್ಳುವವರ ಸಂಖ್ಯೆಯೇ ಹೆಚ್ಚಾಗಿರುವ ಈ ಸಮಯದಲ್ಲಿ ೨೮ ವರುಷಗಳಿಂದ ತಮ್ಮ ಮನೆಯವರಿಗೆ ಹಾಲುಣಿಸಿದ ಗೌರಿಯನ್ನು ಸಾಕುತ್ತಾ ಬಂದ ವಾಸಪ್ಪ ಪೂಜಾರಿಯವರ ಮನೆಯವರ ಗೋವಿನ ಪ್ರೀತಿಯನ್ನು ಮೆಚ್ಚಲೇ ಬೇಕು ಎಂದು ಹೇಳುತ್ತಾರೆ ಕೆದಿಲದ ಗಣರಾಜ ಭಟ್.