ಗ್ರಾಮ ದೇವತೆ ಹಬ್ಬದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಉಂಟಾದ ಮನಸ್ತಾಪದಿಂದ ಪೊಲೀಸರ ಬಂದೋ ಬಸ್ತಿನಲ್ಲಿ ಸಾಂಪ್ರದಾಯಿಕ ಪೂಜೆ ಮಾಡಿ ಹಬ್ಬವನ್ನು ಮೊಟುಕುಗೊಳಿಸಿದ ಘಟನೆ ತಾಲೂಕಿನ ಅಮೃತೂರು ಹೋಬಳಿಯ ಕೊರಠಿ ತಿರುಮಲ ಪಾಳ್ಯದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಕುಣಿಗಲ್ ಗ್ರಾಮ ದೇವತೆ ಹಬ್ಬದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಉಂಟಾದ ಮನಸ್ತಾಪದಿಂದ ಪೊಲೀಸರ ಬಂದೋ ಬಸ್ತಿನಲ್ಲಿ ಸಾಂಪ್ರದಾಯಿಕ ಪೂಜೆ ಮಾಡಿ ಹಬ್ಬವನ್ನು ಮೊಟುಕುಗೊಳಿಸಿದ ಘಟನೆ ತಾಲೂಕಿನ ಅಮೃತೂರು ಹೋಬಳಿಯ ಕೊರಠಿ ತಿರುಮಲ ಪಾಳ್ಯದಲ್ಲಿ ನಡೆದಿದೆ.ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷ ಗ್ರಾಮದ ಶ್ರೀ ಬಸವೇಶ್ವರ ಹಾಗೂ ಆಂಜನೇಯ ಸ್ವಾಮಿ ಜಾತ್ರೆ ರಥೋತ್ಸವ ನಡೆಯುವ ಸಿದ್ಧತೆ ನಡೆದಿತ್ತು. ಈ ಸಂಬಂಧ ಗ್ರಾಮದ ಮುಖಂಡರೆಲ್ಲಾ ಸೇರಿ ಹಬ್ಬದ ಸಂಬಂಧ ಸಭೆ ನಡೆಸಿದ್ದರು.
ಸೋಮವಾರ ನಡೆದ ಸಭೆಯಲ್ಲಿ ಗ್ರಾಮದ ಹಲವಾರು ಮುಖಂಡರು ಸೇರಿದ್ದರೂ ಸಹ ಹಬ್ಬ ನಡೆಯುವ ದಿನಾಂಕ ಗೊತ್ತು ಪಡಿಸುವಲ್ಲಿ ನಿರ್ಣಯಕ್ಕೆ ಬರಲಿಲ್ಲ. ಸಭೆಯನ್ನು ಬುಧವಾರಕ್ಕೆ ಮುಂದೂಡಲಾಗಿತ್ತು. ಹಬ್ಬದ ದಿನಾಂಕ ನಿಗದಿ ಆಗದೆ ಬೇಸರಗೊಂಡ ಗ್ರಾಮದ ಮುಖಂಡರಾದ ಶಿವಣ್ಣಪ್ಪ, ಟಿ ವೆಂಕಟೇಶ್, ಪದ್ಮನಾಭ, ಪುಟ್ಟಸ್ವಾಮಿ, ಸತೀಶ್, ನಿಂಗೇಗೌಡ, ವೆಂಕಟೇಶ್ ಸೇರಿದಂತೆ ಹಲವಾರು ಮಂದಿ ತಹಸೀಲ್ದಾರ್ ಗೆ ಹಬ್ಬ ಮಾಡುವ ಸಂಬಂಧ ಅರ್ಜಿ ನೀಡಿ ಹಬ್ಬದ ತಯಾರಿಕೆ ಮುಂದಾಗಿದ್ದರು. ಈ ಘಟನೆಯಿಂದ ಆಕ್ರೋಶಗೊಂಡ ಮತ್ತೊಂದು ಬಣದ ಮುಖಂಡರಾದ ಹನುಮಂತೇಗೌಡ, ದಿವಾಕರ್ ಗೌಡ, ಲಿಂಗೇಗೌಡ, ರಾಮಾಂಜನೇಯ ಎಂಬುವರು ತಹಸೀಲ್ದಾರ್ ಗೆ ಒತ್ತಡ ತಂದು ಹಬ್ಬವನ್ನು ಮಾಡದಂತೆ ಜಾತ್ರೆ ಮಾಡದಂತೆ ಪೊಲೀಸರ ಮುಖಾಂತರ ತಡೆ ನೀಡಿದರು.ಈ ಸಂಬಂಧ ಸ್ಥಳಕ್ಕೆ ಬಂದ ಪೊಲೀಸರು ದೇವಾಲಯಕ್ಕೆ ಹಾಕಲಾಗಿದ್ದ ಶಾಮಿಯಾನ, ಊಟದ ವ್ಯವಸ್ಥೆ, ಎಲ್ಲವನ್ನು ಅಲ್ಲಿಂದ ತೆರವುಗೊಳಿಸಿ ಕೇವಲ ಪೂಜೆ ಮಾಡುವಂತೆ ಹಬ್ಬ ಮಾಡದಂತೆ ತಾಕೀತು ಮಾಡಿ ದೇವಾಲಯಕ್ಕೆ ಪೊಲೀಸ್ ಕಾವಲು ಹಾಕಿದರು. ನಂತರ ದೇವರ ವಿಗ್ರಹಕ್ಕೆ ಅಭಿಷೇಕ ಪೂಜೆ ಪುಷ್ಪಾರ್ಚನೆ ಪ್ರಸಾದ ನೀಡಲಾಯಿತು.
ಬೆಂಗಳೂರು, ಮಂಡ್ಯ, ರಾಮನಗರ ಸೇರಿದಂತೆ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ತಮ್ಮ ದೇವರ ಹಬ್ಬವನ್ನು ಹಾಳು ಮಾಡಿದ ಮುಖಂಡರಿಗೆ ಹಿಡಿ ಶಾಪ ಹಾಕಿ ಹೊರನಡೆದರು. ಈ ವೇಳೆ ಕಂದಾಯ ನಿರೀಕ್ಷಕ ರವಿ, ಡಿವೈಎಸ್ಪಿ ಓಂ ಪ್ರಕಾಶ್, ಸಿಪಿಐ ನವೀನ್ ಸ್ಥಳದಲ್ಲಿ ಟಿಕಾಣಿ ಹೂಡಿ ಬಂದೋ ಬಸ್ತ್ ವ್ಯವಸ್ಥೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡ ಪದ್ಮನಾಭ ದೇವರ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಾವು ಹಲವಾರು ಮನೆಯವರು ದೇವರ ಪೂಜೆ ಆರತಿ ಹಬ್ಬ ಮಾಡಲು ತಯಾರಿದ್ದೇವೆ ಆದರೆ ಕೆಲವು ಕಾಂಗ್ರೆಸ್ ಬೆಂಬಲಿತ ವ್ಯಕ್ತಿಗಳು ತಮ್ಮ ಅಧಿಕಾರ ಬಳಸಿಕೊಂಡು ಈ ರೀತಿ ಅಧಿಕಾರಿಗಳ ಮೇಲೆ ಒತ್ತಡ ತಂದು ಹಬ್ಬ ನಿಲ್ಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಇಂಥವರಿಗೆ ದೇವರು ಸರಿಯಾದ ಶಿಕ್ಷೆ ಕೊಡುತ್ತಾನೆ ಎಂದು ಶಾಪ ಹಾಕಿದರು.