ಪಟ್ಟಣ ಸಹಕಾರ ಬ್ಯಾಂಕುಗಳು ಜನರ ಆಶಾಕಿರಣ ಎಂದು ಮಹಾ ಮಂಡಳದ ರಾಜ್ಯ ನಿರ್ದೇಶಕ ಎಸ್.ಪಿ. ಶೇಷಾದ್ರಿ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪಟ್ಟಣ ಸಹಕಾರ ಬ್ಯಾಂಕುಗಳು ಜನರ ಆಶಾಕಿರಣ ಎಂದು ಮಹಾ ಮಂಡಳದ ರಾಜ್ಯ ನಿರ್ದೇಶಕ ಎಸ್.ಪಿ. ಶೇಷಾದ್ರಿ ಹೇಳಿದರು.ನಗರದ ಹೋಟೆಲ್ ಮಧುರಾ ಪ್ಯಾರಡೈಸ್ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳಿಗೆ ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿ, ಪಟ್ಟಣ ಸಹಕಾರ ಬ್ಯಾಂಕುಗಳು ಕೇವಲ ಬ್ಯಾಂಕುಗಳಲ್ಲ, ಅವು ಸಾಮಾನ್ಯ ಜನರ, ಸಣ್ಣ ವ್ಯಾಪಾರಿಗಳ, ರೈತರ ಕನಸುಗಳಿಗೆ ಬಲ ಕೊಡುವ ಸಂಸ್ಥೆಗಳು. ದೊಡ್ಡ ಬ್ಯಾಂಕಿನ ಬಾಗಿಲು ತಲುಪಲು ಕಷ್ಟವಾಗುವ ಸಾಮಾನ್ಯ ಮನುಷ್ಯನಿಗೆ ಪಟ್ಟಣ ಸಹಕಾರ ಬ್ಯಾಂಕಿನ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಅದೇ ನಮ್ಮ ಶಕ್ತಿ ಅವರು ಹೇಳಿದರು.
ಗ್ರಾಹಕನೇ ದೇವರು ಎಂದು ಭಾವಿಸಿ ಗೌರವದಿಂದ ಸೇವೆ ನೀಡಬೇಕು. ಹಣಕಾಸಿನ ಶಿಸ್ತಿನಲ್ಲಿ ಯಾವುದೇ ರಾಜಿ ಇರಬಾರದು. ಸಿಬ್ಬಂದಿಯನ್ನು ಜೊತೆಗೆ ತೆಗೆದುಕೊಂಡು ತಂಡವಾಗಿ ಕೆಲಸ ಮಾಡಬೇಕು. ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಜೊತೆಗೆ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಸೇವಾ ಮನೋಭಾವವನ್ನು ಮರೆಯಬಾರದು ಎಂದು ಕರೆ ನೀಡಿದರು.ಸಂಪನ್ಮೂಲ ವ್ಯಕ್ತಿಯಾಗಿ ಪ್ರಾತ್ಯಕ್ಷಿಕೆ ಮೂಲಕ ಮಾತನಾಡಿದ ಶ್ರೀ ವಿನಾಯಕ ಭಟ್ ಅವರು ಸಹಕಾರಿ ಬ್ಯಾಂಕುಗಳ ಉಳಿವಿಗಾಗಿ ಅನೇಕ ಕಾಯ್ದೆಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಶ್ರೀರಾಮ್ ಮತ್ತು ಶ್ರೀ ಶಾಸ್ತ್ರೀ ಅವರು ಕಾರ್ಯಾಗಾರದಲ್ಲಿ ಸಹಕಾರ ಬ್ಯಾಂಕುಗಳ ಪಾತ್ರ, ಅಧಿಕಾರಿಗಳ ಪಾತ್ರಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಮಹಾ ಮಂಡಲದ ಮಾಜಿ ನಿರ್ದೇಶಕಿ ಪಿ. ವೀರಮ್ಮ, ನಿರ್ದೇಶಕ ಸತೀಶ್ ಅಂಬೊರೆ, ಸಿ.ಇ.ಒ. ಪುಂಡಲೀಕ ಎನ್. ಕೆರೂರೆ, ಮಾರಾಟ ಅಧಿಕಾರಿ ಎಸ್.ಎನ್. ದುರ್ಗಾಸಿಂಗ್, ಶಾಖಾ ವ್ಯವಸ್ಥಾಪಕಿ ರಶ್ಮಿ ಜಿ.ಆರ್., ಅಧಿಕಾರಿ ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕಾರ್ಯಾಗಾರದಲ್ಲಿ ವಿವಿಧ ಜಿಲ್ಲೆಗಳಿಂದ ಬಂದ ಬ್ಯಾಂಕಿನ ಸಿ.ಇ.ಒ.ಗಳು, ಅಧಿಕಾರಿಗಳು ಭಾಗವಹಿಸಿ ಬ್ಯಾಂಕುಗಳ ಅಭಿವೃದ್ಧಿ, ಆಡಳಿತ ಮತ್ತು ಮುಂದಿನ ಕಾರ್ಯಯೋಜನೆಗಳ ಕುರಿತು ವಿಚಾರ ವಿನಿಮಯ ಮಾಡಿಕೊಂಡರು.