ಅರಸೀಕೆರೆಯಲ್ಲಿರುವ ಮುಜಾವರ್ ಮೊಹಲ್ಲಾದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲಾ ಕಟ್ಟಡ ಶಿಥಿಲವಾಗಿದ್ದು ಯಾವ ವೇಳೆಯಲ್ಲಾದರೂ ಬೀಳುವ ಸ್ಥಿತಿಯಲ್ಲಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಒಂದೇ ಕೊಠಡಿಯಲ್ಲಿ ಏಳು ತರಗತಿಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದೇ ಕೊಠಡಿಯಲ್ಲಿ ಏಳು ತರಗತಿ ಮಕ್ಕಳು ಅಭ್ಯಾಸ । ಜನಪ್ರತಿನಿಧಿಗಳ ನಿರ್ಲಕ್ಷ್ಯ

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದಲ್ಲಿನ ಮುಜಾವರ್ ಮೊಹಲ್ಲಾದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲಾ ಕಟ್ಟಡ ಶಿಥಿಲವಾಗಿದ್ದು ಯಾವ ವೇಳೆಯಲ್ಲಾದರೂ ಬೀಳುವ ಸ್ಥಿತಿಯಲ್ಲಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಒಂದೇ ಕೊಠಡಿಯಲ್ಲಿ ಏಳು ತರಗತಿಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ

ಶಾಲೆ ಆರ್‌ಸಿಸಿ ಕಟ್ಟಡದ ಮೇಲೆ ಸೋಲಾರ್ ಕೆಲ ವರ್ಷಗಳ ಹಿಂದೆ ಅಳವಡಿಸಲಾಗಿತ್ತು. ತಾಂತ್ರಿಕ ನಿರ್ಲಕ್ಷ್ಯದಿಂದಾಗಿ ಇದನ್ನು ಅಳವಡಿಕೆ ಮಾಡುವಾಗ ಆರ್‌ಸಿಸಿಗೆ ಧಕ್ಕೆ ಆಗಿದೆ ಅಂದಿನಿಂದಲೂ ಕೊಠಡಿಗಳ ಒಳಗೆ ನೀರು ಸೋರಲಾರಂಬಿಸಿದ್ದು ಆರ್‌ಸಿಸಿ ಕಟ್ಟಡ ಸಂಪೂರ್ಣ ಶಿಥಿಲವಾಗಿದೆ.

ಶಾಲೆಗೆ ಶೌಚಾಲಯ ಇದ್ದರೂ ಸಹ ಸೂರಿಲ್ಲದ ಶೌಚಾಲಯ ಪುಂಡ ಪೋಕರಿ ಹುಡುಗರು ಮೇಲಿಂದ ಎಸೆವ ಕಸ ಮತ್ತು ಕಲ್ಲುಗಳು ಶೌಚಾಲಯವನ್ನು ತುಂಬಿವೆ. ನಿತ್ಯ ಶೌಚಾಲಯ ಸ್ವಚ್ಛತೆ ಮಾಡುವುದೇ ಸಮಸ್ಯೆಯಾಗಿದೆ. ಶಾಲೆಗೆ ಹೆಚ್ಚಿನ ಅನುದಾನ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಪದೇ ಪದೇ ಶೌಚಾಲಯವನ್ನು ನಿತ್ಯ ಸ್ವಚ್ಛತೆ ಮಾಡಿಸುವುದು ಶಿಕ್ಷಕರಿಗೆ ಸವಾಲಾಗಿದೆ.

ಶಿಕ್ಷಣ ಇಲಾಖೆ ಅಗತ್ಯ ಶಿಕ್ಷಕರನ್ನು ಒದಗಿಸಿದ್ದರೂ ಸಹ ಪ್ರತ್ಯೇಕವಾಗಿ ಮಕ್ಕಳನ್ನು ಕುಳ್ಳಿರಿಸಿಕೊಂಡು ಪಾಠ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಗುಣಮಟ್ಟದ ಶಿಕ್ಷಣ ನೀಡುವ ಉತ್ತಮ ಶಿಕ್ಷಕರು ಈ ಶಾಲೆಯಲ್ಲಿ ಇದ್ದಾರೆ. ಬಿಸಿಯೂಟ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಹಾಲು, ಮೊಟ್ಟೆ ಎಲ್ಲವೂ ಉಚಿತ ಲಭ್ಯ. ಆದರೆ ಕುಳಿತುಕೊಳ್ಳಲು ಕೊಠಡಿಗಳೇ ಇಲ್ಲ. ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಅನೇಕ ತರಗತಿಗಳು ನಡೆಯುತ್ತವೆ. ಏನೆಲ್ಲಾ ಯೋಜನೆಗಳನ್ನು ತಾಲೂಕಿಗೆ ತಂದರೂ ಸಹ ಶೈಕ್ಷಣಿಕವಾಗಿ ಹಳೆಯ ಶಾಲಾ ಕಟ್ಟಡ ದುರಸ್ತಿಗೆ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಅತಿ ತುರ್ತಾಗಿ ಈ ಶಾಲೆಯ ದುರಸ್ತಿ ಕಾರ್ಯವನ್ನು ಜನಪ್ರತಿನಿಧಿಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಮಾಡಿಸುವ ಅಗತ್ಯವಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳತ್ತ ಕರೆದೊಯ್ಯುವ ಸಾಧ್ಯತೆ ಇರುವುದರಿಂದ ಸರ್ಕಾರಿ ಶಾಲೆಯ ಉಳಿವಿಗಾಗಿ ಇಲಾಖಾ ಅಧಿಕಾರಗಳು ಮುಂದಾಗುವ ಅಗತ್ಯವಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.