ಸಾರಾಂಶ
ಗಂಗಾವತಿ:
ತಾಲೂಕಿನಲ್ಲಿ ರೈತರಿಗೆ ಸಕಾಲಕ್ಕೆ ಯೂರಿಯಾ ಗೊಬ್ಬರ ಸಿಗದೆ ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿಯಲ್ಲಿ ತಹಸೀಲ್ದಾರ್ ರವಿ ಅಂಗಡಿ ಅಧ್ಯಕ್ಷತೆಯಲ್ಲಿ ಕೃಷಿ ಅಧಿಕಾರಿಗಳು ಹಾಗೂ ರಸಗೊಬ್ಬರ ವ್ಯಾಪಾರಸ್ಥರ ಸಭೆ ನಡೆಸಲಾಯಿತು.ಕೃಷಿ ಇಲಾಖೆ ಸಹಾಯಕ ಉಪ ನಿರ್ದೇಶಕ ಸಂತೋಷ ಪಟ್ಟದಕಲ್ಲು ಮಾತನಾಡಿ, ಕಳೆದ ವರ್ಷ ಆಗಸ್ಟ್ ಮೊದಲ ಬಾರಿದಲ್ಲಿ ಭತ್ತ ನಾಟಿ ಮಾಡಲಾಗುತ್ತಿತ್ತು. ಈ ವರ್ಷ ಜೂನ್‌ನಲ್ಲಿ ಉತ್ತಮ ಮಳೆಯಾಗಿದ್ದರಿಂದ ಜುಲೈನಲ್ಲಿ ನಾಟಿ ಮಾಡಲಾಗಿದೆ. ಇದರಿಂದ ಯೂರಿಯಾ ಗೊಬ್ಬರದ ಬೇಡಿಕೆ ಹೆಚ್ಚಿದೆ. ಪ್ರಸ್ತುತ ಬೆಳೆಗಳಿಗೆ 3000 ಟನ್ ರಸಗೊಬ್ಬರದ ಅವಶ್ಯಕತೆ ಇದ್ದು 1500 ಟನ್ ಮಾತ್ರ ಬಂದಿದ್ದರಿಂದ ರೈತರಿಗೆ ಸಮಸ್ಯೆಯಾಗಿದೆ ಎಂದರು.
ದೊಡ್ಡ ಹಿಡುವಳಿದಾರರಿಗೆ 30,50,80 ಚೀಲ ಯೂರಿಯಾ ಗೊಬ್ಬರ ನೀಡದೆ, ಪ್ರತಿಯೊಬ್ಬರ ರೈತರಿಗೆ 5 ಚೀಲ, ಒಣಬೇಸಾಯ ಮಾಡುವ ರೈತರಿಗೆ 2 ಚೀಲ ಯೂರಿಯಾ ಗೊಬ್ಬರ ನೀಡಬೇಕೆಂದು ವ್ಯಾಪಾರಸ್ಥರಿಗೆ ಸಲಹೆ ನೀಡಿದರು.ನೊಡಲ್ ಅಧಿಕಾರಿ ಕೃಷ್ಣ ಉಕ್ಕುಂದ ಮಾತನಾಡಿ, ನಗರ ಸೇರಿದಂತೆ ತಾಲೂಕಿನಲ್ಲಿ 75 ವ್ಯಾಪಾರಸ್ಥರಿದ್ದು ಯಾವ ರೈತರಿಗೂ ತೊಂದರೆಯಾಗದಂತೆ ಗೊಬ್ಬರ ವಿತರಿಸಬೇಕು. ರೈತರಿಗೆ ಬಿಲ್ ನೀಡಬೇಕು. ಒಂದು ವೇಳೆ ಹೆಚ್ಚು ದರಕ್ಕೆ ಮಾರಾಟ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಗೊಬ್ಬರ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಸುರೇಶ ಮಾತನಾಡಿ, ಗೊಬ್ಬರ ಮಾರಾಟ ಸಂದರ್ಭದಲ್ಲಿ ಏನಾದರು ತೊಂದರೆಯಾದರೆ ಅಧಿಕಾರಿಗಳು ನೋಟಿಸ್ ನೀಡದೆ ಸಹಕರಿಸಬೇಕೆಂದು ಕೋರಿದರು.ವ್ಯಾಪಾರಿ ಗುರುಪಾದಪ್ಪ ಮಾತನಾಡಿ, ಯೂರಿಯಾ ಗೊಬ್ಬರದ ಸಂಗ್ರಹವೇ ಇಲ್ಲ. ನಾವು ಹೇಗೆ ರೈತರಿಗೆ ವಿತರಿಸಬೇಕೆಂದು ಪ್ರಶ್ನಿಸಿದರು. ಸಭೆಯಲ್ಲಿ ಸಿ.ಎಚ್. ರಾಮಕೃಷ್ಣ, ರುದ್ರೇಶ ಸೇರಿದಂತೆ ರೈತರು ಭಾಗವಹಿಸಿದ್ದರು. ಈ ವೇಳೆ ತಾಪಂ ಇಒ ರಾಮರೆಡ್ಡಿ ಪಾಟೀಲ್ ಇದ್ದರು.
ಪರಿಶೀಲನೆ:ನಗರದ ವಿವಿಧ ಗೊಬ್ಬರ ಅಂಗಡಿಗಳಿಗೆ ಟಾಸ್ಕ್‌ಪೋರ್ಸ್ ಸಮಿತಿ ಭೇಟಿ ನೀಡಿ ದಾಖಲೆ ಪರಿಶೀಲಿಸಿ ಪಿಒಎಸ್ ಮಷೀನ್‌ನಲ್ಲಿ ದಾಸ್ತಾನು ಹಾಗೂ ಭೌತಿಕ ದಾಸ್ತಾನು ವಿವರ ಪರಿಶೀಲಿಸಿದರು. ಸರ್ಕಾರದ ಮಾರ್ಗಸೂಚಿಯಂತೆ ರೈತರಿಗೆ ಯೂರಿಯಾ ಗೊಬ್ಬರ ವಿತರಿಸಬೇಕು. ಯಾವುದೇ ಲೋಪದೋಷ ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ತಹಸೀಲ್ದಾರ್ ರವಿ ಅಂಗಡಿ, ನೋಡಲ್ ಅಧಿಕಾರಿ ಕೃಷ್ಣ ಉಕ್ಕುಂದ, ಇಒ ರಾಮರೆಡ್ಡಿ ಪಾಟೀಲ್, ಸಹಾಯಕ ಕೃಷಿ ಉಪ ನಿರ್ದೇಶಕ ಸಂತೋಷ ಪಟ್ಟದಕಲ್ಲು ಇದ್ದರು.