ಹಾವೇರಿ: ಜಿಲ್ಲೆಯಲ್ಲಿ 25 ಲಕ್ಷ ಟನ್‌ ಕಬ್ಬು ಬೆಳೆಯುತ್ತಿದ್ದು, ಈಗ ಯೂರಿಯಾ ಗೊಬ್ಬರ ಹಾಕುವ ಅಗತ್ಯವಿದೆ. ಆದರೆ, ಅಂಗಡಿಗಳಲ್ಲಿ ಯೂರಿಯಾ ಗೊಬ್ಬರ ನೀಡುತ್ತಿಲ್ಲ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಕ್ಕರೆ ಕಾರ್ಖಾನೆಯವರ ಜೊತೆ ಹೋರಾಟ ಮಾಡಿ ಬಾಕಿ ಬರಬೇಕಿದ್ದ 8.5 ಕೋಟಿ ರು. ಹಣವನ್ನು ಪಡೆಯಲಾಯಿತು. ಆದರೆ ಈಗ ರೈತರಿಗೆ ಗೊಬ್ಬರ ಸಿಗುತ್ತಿಲ್ಲ. ಗೊಬ್ಬರವಿದ್ದಾಗ ಹಣ ಇರಲಿಲ್ಲ, ಈಗ ಹಣ ಇದ್ದಾಗ ಗೊಬ್ಬರವಿಲ್ಲ. ಬೇಸಿಗೆಯಲ್ಲಿ ಗೊಬ್ಬರದ ಅಭಾವವಾದರೆ ಬಿತ್ತನೆ ಸಮಯದಲ್ಲಿ ಇನ್ನೇನು ಗತಿ ಎಂದು ಅವರು ಪ್ರಶ್ನಿಸಿದ್ದಾರೆ. ಜಿಲ್ಲೆಯಲ್ಲಿ 25 ಲಕ್ಷಕ್ಕಿಂತ ಹೆಚ್ಚು ಟನ್‌ ಕಬ್ಬು ಬೆಳೆಯುತ್ತಿದ್ದು ಈಗ ಕಬ್ಬಿಗೆ ಸರಿಯಾದ ರೀತಿಯ ಗೊಬ್ಬರ ಸಿಗುತ್ತಿಲ್ಲ. ಬೇಸಿಗೆ ಇರುವ ಕಾರಣ ರೈತರು ಕಷ್ಟಪಟ್ಟು ನೀರು ಹಾಯಿಸಿ ಗೊಬ್ಬರ ಹಾಕಲು ಅಂಗಡಿಯ ಮುಂದೆ ಹೋದರೆ ಗೊಬ್ಬರವಿಲ್ಲ ಎಂದು ಅಂಗಡಿಯವರು ಹೇಳುತ್ತಾರೆ. ಜಂಟಿ ಕೃಷಿ ನಿರ್ದೇಶಕರನ್ನು ಕೇಳಿದರೆ ಗೊಬ್ಬರ ಅಭಾವವಿಲ್ಲ, ಬೇಕಾದಷ್ಟು ದಾಸ್ತಾನು ಇದೆ ಎಂದು ಹೇಳುತ್ತಾರೆ. ಹಾಗಾದರೆ ಜಿಲ್ಲೆಯಲ್ಲಿ ಬರುವ ಗೊಬ್ಬರ ಎಲ್ಲಿ ಹೋಗುತ್ತದೆ ಎಂದು ರೈತರ ಪ್ರಶ್ನೆಯಾಗಿದೆ. ಯೂರಿಯಾ ಗೊಬ್ಬರವಂತು ಯಾವ ಅಂಗಡಿಯಲ್ಲಿ ಹೋದರೂ ಸಿಗುತ್ತಿಲ್ಲ. ಯಾರಾದರೂ ಸ್ಟಾಕ್ ಮಾಡಿಕೊಂಡವರ ಬಳಿ ಹೋದರೆ ಒಂದು ಚೀಲ ಯೂರಿಯಾ ಗೊಬ್ಬರಕ್ಕೆ 500 ರುಪಾಯಿ ಲಿಂಕ್ ಹೇಳುತ್ತಾರೆ. ಅದನ್ನು ಕೊಟ್ಟು ಕೊಂಡುಕೊಳ್ಳುವಷ್ಟು ರೈತರು ಸದ್ಯದ ಪರಿಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಇನ್ನೊಂದು ತಿಂಗಳ ಗತಿಸಿದರೆ ಬಿತ್ತನೆ ಸಮಯ ಪ್ರಾರಂಭವಾಗುತ್ತದೆ. ಕಳಪೆ ಬೀಜಗಳು ಮಾರಾಟವಾಗದಂತೆ ಜಂಟಿ ಕೃಷಿ ನಿರ್ದೇಶಕರು ಎಲ್ಲಾ ಅಂಗಡಿಯವರಿಗೆ ತಾಕೀತು ಮಾಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಕಬ್ಬು ಬೆಳೆಗಾರರಿಗೆ ಅತಿ ಅವಶ್ಯವಾಗಿ ಯೂರಿಯಾ ಗೊಬ್ಬರ ಬೇಕಾಗಿದೆ. ಜಿಲ್ಲಾಧಿಕಾರಿಗಳು ತಕ್ಷಣವೇ ಹಾವೇರಿ ಜಿಲ್ಲೆಯ ಎಲ್ಲಾ ಹಳ್ಳಿಗಳಿಗೂ ಯೂರಿಯಾ ಗೊಬ್ಬರವನ್ನು ಪೂರೈಸಲು ಸೂಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.