ಸಾರಾಂಶ
- ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಆಕ್ರೋಶ: ಸಂಚಾರಕ್ಕೆ ಅಡ್ಡಿ - ಆಶಾಪೂರಿ, ರಾಥೋಡ್ ಏಜೆನ್ಸಿಗಳ ರಾಜ್ಯಮಟ್ಟದ ಪರವಾನಿಗೆ ರದ್ದು
- - -ಕನ್ನಡಪ್ರಭವಾರ್ತೆ ದಾವಣಗೆರೆ
ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಖಂಡಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ನಗರದ ರಸಗೊಬ್ಬರ ರಾಜ್ಯಮಟ್ಟದ ವಿತರಕ ಏಜೆನ್ಸಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಲಾಯಿತು.ನಗರದ ಶ್ರೀ ಜಯದೇವ ವೃತ್ತದಿಂದ ಬೈಕ್ ರ‍್ಯಾಲಿಯಲ್ಲಿ ಸಾಗಿದ ರೈತರು ಕೆ.ಆರ್. ಮಾರುಕಟ್ಟೆಯ ರಾಜ್ಯ ಮಟ್ಟದ ರಸಗೊಬ್ಬರ ವಿತರಕ ಏಜೆನ್ಸಿ ಆಶಾಪೂರಿ ಮತ್ತು ರಾಥೋಡ್ ಏಜೆನ್ಸಿಗಳ ಎದುರು ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ರೈತರ ಹೋರಾಟದಿಂದಾಗಿ ಮಾರುಕಟ್ಟೆ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಅಲ್ಲಿಂದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಗೆ ತೆರಳಿದರು.
ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ದಾವಣಗೆರೆ ಜಿಲ್ಲೆಗೆ ಪೂರೈಕೆಯಾಗಿದ್ದ ಸುಮಾರು 2500 ಮೆಟ್ರಿಕ್ ಟನ್ ಯೂರಿಯಾ ದಾಸ್ತಾನನ್ನು ಶಿವಮೊಗ್ಗ ಜಿಲ್ಲೆಗೆ ಸ್ಥಳೀಯ ವಿತರಕರು ಕಳುಹಿಸಿಕೊಟ್ಟಿದ್ದಾರೆ. ಇದೇ ನಮಗೆ ಯೂರಿಯಾ ಕೊರತೆಗೆ ಪ್ರಮುಖ ಕಾರಣವಾಗುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿ ಕದನದಲ್ಲಿ ರಾಜ್ಯದ ರೈತರ ಹಿತವನ್ನೇ ಮರೆತಿದ್ದಾರೆ. ಮತ್ತೊಂದೆಡೆ ಕೃಷಿ ಸಚಿವ ಚೆಲುವರಾಯ ಸ್ವಾಮಿ ತಮಗೂ, ತಮ್ಮ ಇಲಾಖೆಗೂ ಸಂಬಂಧವೇ ಇಲ್ಲವಂಬಂತೆ ಯೂರಿಯಾ ಗೊಬ್ಬರ ಬಗ್ಗೆ ಬೇಜವಾಬ್ದಾರಿಯಾಗಿ ಮಾತನಾಡುತ್ತಿದ್ದಾರೆ. ಕೃಷಿ ಅಧಿಕಾರಿಗಳು ಆಯಾ ಜಿಲ್ಲೆಗೆ ಅಗತ್ಯ ರಸಗೊಬ್ಬರದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುವಲ್ಲಿ ವಿಫರಾಗಿದ್ದಾರೆ ಎಂದು ಕಿಡಿಕಾರಿದರು.ರೈತರ ಹೋರಾಟಕ್ಕೆ ಮಣಿದ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ಅವರು ಆಶಾಪೂರಿ ಮತ್ತು ರಾಥೋಡ್ ಏಜೆನ್ಸಿಗಳ ರಾಜ್ಯಮಟ್ಟದ ಪರವಾನಿಗೆ ಸ್ಥಳದಲ್ಲಿಯೇ ರದ್ದುಪಡಿಸಿ, ಕೇವಲ ದಾವಣಗೆರೆ ಜಿಲ್ಲೆಗೆ ಸೀಮಿತಗೊಂಡಂತೆ ಪರವಾನಿಗೆಗೆ ಅವಕಾಶ ಕಲ್ಪಿಸಿದರು. ಅನಂತರ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಡಿಸಿಗೆ ಮನವಿ ಅರ್ಪಿಸಿದರು.
ಈ ಸಂದರ್ಭ ಅಪರ ಡಿಸಿ ಮಾತನಾಡಿ, ಈಗಾಗಲೇ ಜಿಲ್ಲೆಗೆ ಅಗತ್ಯ ಯೂರಿಯಾ ಸರಬರಾಜು ಆಗಿದೆ ಎನ್ನುತ್ತಿದ್ದಂತೆ ರೈತರು ಆಕ್ಷೇಪಿಸಿದರು. ಡೀಲರ್‌ಗಳ ಮನೆ, ಗೋದಾಮುಗಳಿಗೆ ಭೇಟಿ ನೀಡಿ, ದಾಖಲೆ ಸಹಿತ ಪರಿಶೀಲಿಸಿ, ಕ್ರಮ ಕೈಗೊಳ್ಳಬೇಕು. ಯೂರಿಯಾಗೆ ಉಪಯೋಗವಿಲ್ಲದ ಕ್ರಿಮಿನಾಶಕಕ್ಕೆ ಲಿಂಕ್ ಮಾಡಿ, ₹300ರಿಂದ ₹500 ತನಕ ರೈತರಿಗೆ ಮಾರುತ್ತಿದ್ದು, ಸುಲಿಗೆ ನಿಲ್ಲಿಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.ಮುಖ್ಯ ಡೀಲರ್ ಮತ್ತು ಫೆಡರೇಷನ್‌ನಿಂದ ರೈತರಿಗೆ ಗೊಬ್ಬರ ಸಮರ್ಪಕವಾಗಿ ತಲುಪಿದೆಯೇ ಇಲ್ಲವೇ ಎನ್ನುವುದನ್ನು ಗಮನಿಸಲು ಪೊಲೀಸ್, ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಬೇಕೆಂಬ ಸಂಘಟನೆಯ ಬೇಡಿಕೆಗೆ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿ, ಈ ವಿಚಾರದ ಬಗ್ಗೆ ಜಿಲ್ಲಾಧಿಕಾರಿ ಜೊತೆಗೆ ಚರ್ಚಿಸಿ ಸಮಿತಿ ರಚಿಸುವುದಾಗಿ ಪ್ರತಿಕ್ರಿಯಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ರಾಜನಹಟ್ಟಿ ರಾಜು, ಹೂವಿನಮಡು ನಾಗರಾಜ, ಚಿಕ್ಕಮಲ್ಲನಹೊಳೆ ಚಿರಂಜೀವಿ, ಆಲೂರು ಪರಶುರಾಮ, ಬೋರಗೊಂಡನಹಳ್ಳಿ ಕಲ್ಲೇಶ, ಕೊಮಾರನಹಳ್ಳಿ ಪ್ರಭು, ಕಾನನಕಟ್ಟೆ ತಿಪ್ಪೇಸ್ವಾಮಿ, ಚಿನ್ನಸಮುದ್ರ ಭೀಮಾನಾಯ್ಕ, ಸುರೇಶ ನಾಯ್ಕ, ಕೋಗಲೂರು ಕುಮಾರ, ಕಬ್ಬೂರು ತಿಪ್ಪೇಸ್ವಾಮಿ, ಗುಮ್ಮನೂರು ರುದ್ರೇಶ, ಯಲೋದಹಳ್ಳಿ ರವಿಕುಮಾರ ಇತರರು ಇದ್ದರು.- - -
-28ಕೆಡಿವಿಜಿ18.ಜೆಪಿಜಿ:ದಾವಣಗೆರೆಯಲ್ಲಿ ಸಮರ್ಪಕ ರಸಗೊಬ್ಬರ ಪೂರೈಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ರೈತರು ಪ್ರತಿಭಟಿಸಿದರು.