ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ನಗರ ಸಮೀಪದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಕಾಂಪೌಂಡ್ ನಿರ್ಮಾಣ ಕಾಮಗಾರಿಯಲ್ಲಿ ವ್ಯತ್ಯಾಸ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಸರಿಪಡಿಸಬೇಕು ಎಂದು ಮಹರ್ಷಿ ವಾಲ್ಮೀಕಿ ನಾಯಕರ ಯುವಕರ ಸಂಘದ ಮುಖಂಡರು ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಜಗದೀಶ್ ಕೋಟೆ, ಎಐಟಿ ಕಾಲೇಜು ಸಮೀಪ ವಾಲ್ಮೀಕಿ ಸಮುದಾಯ ಭವನದ ಕಾಂಪೌಂಡ್ ನಿರ್ಮಾಣದಲ್ಲಿ 8 ಅಡಿ ವ್ಯತ್ಯಾಸ ಕಂಡು ಬಂದಿದೆ. ಕೂಡಲೇ ತನಿಖೆ ನಡೆಸಿ ಸಮುದಾಯದ ಜಾಗ ಉಳಿಸಿಕೊಡಬೇಕು ಎಂದು ಒತ್ತಾಯಿಸಿದರು.
ವಾಲ್ಮೀಕಿ ಸಮುದಾಯ ಭವನ ಸುಮಾರು 75 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಆದರೆ, ಭವನದ ಹೊರಾಂಗಣದ ಕಾಂಪೌಂಡ್ ಕಾಮಗಾರಿ ನಿವೇಶನದ ಅಳತೆಯಂತೆ ನಿರ್ಮಿಸದೆ, 8 ಅಡಿ ಒಳ ಭಾಗಕ್ಕೆ ಕಾಂಪೌಂಡ್ ನಿರ್ಮಾಣಗೊಳ್ಳುತ್ತಿದೆ ಎಂದು ಹೇಳಿದರು.ಈ ಬಗ್ಗೆ ಐಟಿಡಿಪಿ ಸಮನ್ವಯಾಧಿಕಾರಿಗಳನ್ನು ವಿಚಾರಿಸಿದರೆ ನಾವೇ ಎಂಟು ಅಡಿ ಒಳಭಾಗಕ್ಕೆ ಕಾಂಪೌಂಡ್ ನಿರ್ಮಿಸುತ್ತಿದ್ದೇವೆಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ಅಲ್ಲದೇ ಭವನದ ಜಾಗದಲ್ಲಿ ವಾಲ್ಮೀಕಿ ಗುರುಗಳ ಪ್ರತಿಮೆ ನಿರ್ಮಾಣ ಮಾಡಬೇಕಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಜಾಗದ ಸಂಬಂಧ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಐಟಿಡಿಪಿ ಇಲಾಖೆಗೆ ಸೇರಿದ ಜಾಗದಲ್ಲಿ ಅಳತೆ ವ್ಯತ್ಯಾಸ ಕಂಡುಬಂದರೂ ಇಲಾಖಾಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದನ್ನು ಗಮನಿಸಿದರೆ ಹಲವು ಅನುಮಾನಗಳು ಮೂಡುತ್ತಿವೆ. ಈ ಕಾಮಗಾರಿ ಸಂಬಂಧಿಸಿದ ಅಧಿಕಾರಿ, ಕೆ.ಆರ್.ಐ.ಡಿ.ಎಲ್. ಇಂಜಿನಿಯರ್ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅಸಮಾಧಾನ ಮೂಡಿಸಿದೆ ಎಂದರು.ಹೀಗಾಗಿ ಕಾಂಪೌಂಡ್ ಕಾಮಗಾರಿಯಲ್ಲಿ ವ್ಯತ್ಯಾಸವಾಗಿರುವುದನ್ನು ಪರಿಶೀಲಿಸಿ ವಾಲ್ಮೀಕಿ ಭವನದ ಜಾಗವನ್ನು ಸಿಡಿಎ ಮಾಡಿಸಬೇಕು. ನಿವೇಶನದ ಅಳತೆಯಂತೆ ಕಾಂಪೌಂಡ್ ಮತ್ತು ಉಳಿಕೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಮಾಜ ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮಧುಕುಮಾರ್, ತಾಲೂಕು ಅಧ್ಯಕ್ಷ ಪ್ರದೀಪ್, ಗೌರವಾಧ್ಯಕ್ಷ ವಿಜಯ್‌ಕುಮಾರ್, ಮುಖಂಡರಾದ ಬಿ.ಟಿ. ಕುಮಾರ ನಾಯ್ಕ್, ಲಕ್ಷ್ಮಣ್ ನಾಯ್ಕ್, ರಂಗನಾಯ್ಕ್ ಹಾಜರಿದ್ದರು.