ಸಾರಾಂಶ
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಎಸ್ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯ ಫಲಿತಾಂಶ ಉತ್ತಮಗೊಳ್ಳುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಇಲಾಖೆ ಅಧಿಕಾರಿಗಳು, ಶಿಕ್ಷಕರು ಕ್ರಿಯಾಯೋಜನೆ ರೂಪಿಸಿ, ಅಗತ್ಯ ಕ್ರಮ ಕೈಗೊಂಡು ತಾಲೂಕನ್ನು ಶೈಕ್ಷಣಿಕವಾಗಿ ಸದೃಢಗೊಳಿಸಬೇಕು ಎಂದು ಸಾಮೂಹಿಕ ಸಂಘಟನೆಗಳ ಕಾರ್ಯಕರ್ತರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಎನ್ನುವುದು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಹೆಬ್ಬಾಗಿಲು. ನಿರ್ಲಕ್ಷ್ಯ ಮಾಡಿದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಮಂಕಾಗುವ ಜತೆಗೆ ನಾಡಿನ ಅಭ್ಯುದಯಕ್ಕೆ ಕಾರಣವಾಗಬೇಕಾದ ಮಕ್ಕಳು ಪ್ರೌಢ ವಯಸ್ಸಿನಲ್ಲಿಯೇ ಶಾಲೆ ಬಿಡಬೇಕಾಗುತ್ತದೆ. ಎಸ್ಎಸ್ಎಲ್‌ಸಿ, ಪಿಯುಸಿಯಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವುದು ಕೇವಲ ಮಗುವಿನ ಜವಾಬ್ದಾರಿ ಅಷ್ಟೇ ಅಲ್ಲ, ಸುತ್ತಲೂ ಇರುವ ಎಲ್ಲ ಪ್ರಜ್ಞಾವಂತರ ಹಾಗೂ ನಾಗರಿಕರ ಹೊಣೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಎಸ್ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಫಲಿತಾಂಶ ಬರುವಂತೆ ಕ್ಷೇತ್ರದ ಶಾಸಕರು, ಜನಪ್ರತಿನಿಧಿಗಳು, ವಿಚಾರವಂತರು, ಸಂಘಟನೆಗಳ ಮುಖಂಡರು ವಿಶೇಷವಾಗಿ ಸರ್ಕಾರಿ ನೌಕರರು ಎಲ್ಲ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಕಾರ್ಯತತ್ಪರರಾಗಬೇಕು. ಇಲ್ಲದೇ ಹೋದಲ್ಲಿ ತಾಲೂಕಿನ ಶೈಕ್ಷಣಿಕ ಮಟ್ಟ ಅಧೋಗತಿಗೆ ಹೋಗುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಿದ್ದಾರೆ.ಈ ಹಿಂದೆ ಬರುತ್ತಿದ್ದ ಎಸ್ಎಸ್‌ಎಲ್‌ಸಿ ಮತ್ತು ಪಿಯುಸಿ ಉತ್ತಮ ಫಲಿತಾಂಶ ಈಗ ಯಾಕೆ ಬರುತ್ತಿಲ್ಲ? ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮತ್ತು ಶಿಕ್ಷಕರ ನಿರ್ಲಕ್ಷ್ಯ ಕಾರಣವೇ ಎಂಬ ಅನುಮಾನ ಬರತೊಡಗಿದೆ. ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಮೇಲೆ ಸ್ಥಳೀಯ ಜನಪ್ರತಿನಿಧಿಗಳು ಒತ್ತಡ ತರಬೇಕು. ಕೆಲವು ಶಿಕ್ಷಕರು ಸಂಘ-ಸಂಸ್ಥೆಗಳ ಹೆಸರಿನಲ್ಲಿ ಶಾಲೆಗಳಿಗೆ ಪದೇ ಪದೇ ಗೈರಾಗುತ್ತ, ರಾಜಕಾರಣಿಗಳ ಹಿಂದೆ ಮುಂದೆ ಓಡಾಡುವುದನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
2024-25ನೇ ಸಾಲಿನ ಹರಪನಹಳ್ಳಿ ತಾಲೂಕು ಫಲಿತಾಂಶದ ವಿಶ್ಲೇಷಣೆ ನಡೆಸಿ, ಅದರ ಆಧಾರದ ಮೇಲೆ ಮುಂಬರುವ ವರ್ಷಗಳ ಶೈಕ್ಷಣಿಕ ಪ್ರಕ್ರಿಯೆಗಳಲ್ಲಿ ಯಾವ ರೀತಿಯಾಗಿ ಫಲಿತಾಂಶ ಉತ್ತಮ ಮಾಡಬಹುದು ಎಂಬುದರ ಬಗ್ಗೆ ಚಿಂತನ-ಮಂಥನ ನಡೆಸಲು ತಾಲೂಕು ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದ್ದಾರೆ.ಎಐಕೆಎಸ್ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ, ದೇವದಾಸಿ ಮಹಿಳಾ ಸಂಘಟನೆ ಮುಖಂಡೆ ರೇಣುಕಮ್ಮ, ಸಿಪಿಐಎಂಎಲ್ ಮುಖಂಡ ಸಂದೇರ ಪರಶುರಾಮ್, ಹುಲಿಕಟ್ಟಿ ರಹಮಾತ್, ಗೂಳೇದಹಟ್ಟಿ ಸಂತೋಷ್, ರೈತ ಸಂಘಟನೆ ಮುಖಂಡ ಕೆ. ಕಲಹಳ್ಳಿ ಗೋಣೆಪ್ಪ, ಮೈಲಪ್ಪ, ಡಿ.ಎಚ್. ಅರುಣ, ಐಷಾ ಮುಖಂಡ ಮೋಹನ್, ಬಳಿಗನೂರು ಬಾಲಗಂಗಾಧರ, ರಾಜಪ್ಪ ಹುಲಿಕಟ್ಟಿ, ಸುಭಾಷ ಅಕ್ಕಿ, ಹಗರಿ ಗುಡಿಹಳ್ಳಿ ಶಿವರಾಮ, ದಾದು, ಹರಿಯಮ್ಮನಹಳ್ಳಿ ಬಸವರಾಜ ಇತರರು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.