ಅರಸೀಕೆರೆಯಲ್ಲಿ ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಅರಸೀಕೆರೆ

ದೇಶದಲ್ಲಿ ಗೋ ಹತ್ಯೆ ನಿಷೇಧಿಸುವುದರ ಜೊತೆಗೆ ಪ್ರಾಣಿಗಳ ಮಾಂಸ ವಿದೇಶಗಳಿಗೆ ರಫ್ತು ಮಾಡುವುದನ್ನು ತಡೆಯಬೇಕು ಹಾಗೂ ಗೋವಿಗೆ ರಾಷ್ಟ್ರೀಯ ಗೌರವ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ಅರಸೀಕೆರೆ ಮತ್ತು ಬಾಣಾವರದ ವಿವಿಧ ಹಿಂದೂಪರ ಹಾಗೂ ಪ್ರಾಣಿ ಸಂರಕ್ಷಣಾ ಸಂಘಟನೆಗಳು ಸೋಮವಾರ ತಹಸೀಲ್ದಾರ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿವೆ.

ಭಾರತೀಯ ಗೋ ಪರಿವಾರ್ ಚಾರಿಟಬಲ್ ಟ್ರಸ್ಟ್, ವಿಶ್ವ ಹಿಂದು ಪರಿಷತ್, ಬಜರಂಗದಳ, ಹಿಂದು ಜಾಗರಣ ವೇದಿಕೆ ಹಾಗೂ ಪ್ರಾಣಿ ಪ್ರಿಯಾ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಈ ಮನವಿ ಸಲ್ಲಿಸಲಾಯಿತು. ದೇಶದಾದ್ಯಂತ ನಡೆಯುತ್ತಿರುವ ‘ಗೋ ಸನ್ಮಾನ್’ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಅವರಿಗೆ ಮನವಿ ಕಳುಹಿಸಲಾಗಿದೆ ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಮುಖಂಡ ಕೆ.ಎಸ್. ಕೃಷ್ಣ, ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪವಿತ್ರ ಸ್ಥಾನವಿದ್ದು, ಧಾರ್ಮಿಕವಾಗಿ ದೇವತೆಗಳ ಪ್ರತೀಕವಾಗಿ ಪರಿಗಣಿಸಲಾಗುತ್ತದೆ. ಇಂತಹ ಗೋವಿನ ಹತ್ಯೆ ನಡೆಯುತ್ತಿರುವುದು ವಿಷಾದನೀಯವಾಗಿದ್ದು, ಗೋ ಹತ್ಯೆ ನಿಷೇಧಕ್ಕೆ ಕಾನೂನುಗಳಿದ್ದರೂ ಅವು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಹೇಳಿದರು.ಮುಖಂಡ ಟಿ.ವಿ. ಅರುಣ್ ಕುಮಾರ್ ಅವರು, ಗೋ ಸಂರಕ್ಷಣೆಗಾಗಿ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದು, ದೇಶದಲ್ಲಿ ಸಂಪೂರ್ಣ ಗೋವಂಶ ಹತ್ಯೆ ನಿಷೇಧ, ಪ್ರಾಣಿಗಳ ಮಾಂಸ ರಫ್ತು ನಿಲ್ಲಿಕೆ ಹಾಗೂ ಗೋವಿಗೆ ರಾಷ್ಟ್ರೀಯ ಮಾನ್ಯತೆ ನೀಡುವುದು ಅಗತ್ಯವಿದೆ. ಜೊತೆಗೆ ಪ್ರತಿ ತಾಲೂಕಿಗೆ ಗೋಶಾಲೆ, ಜಿಲ್ಲೆಗೆ ಗೋ ಅಭಯಾರಣ್ಯ ಸ್ಥಾಪನೆ, ಮೇವುಗಳಿಗೆ ಬೆಂಬಲ ಬೆಲೆ ನಿಗದಿ, ಪಠ್ಯಕ್ರಮದಲ್ಲಿ ಕೃಷಿ ಮತ್ತು ಗೋ ವಿಜ್ಞಾನ ಸೇರಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.


ಕಾರ್ಯಕ್ರಮದಲ್ಲಿ ಬಾಣಾವರ ಸಂಪತ್ ಕುಮಾರ್, ಮನು, ಪಾರಸ್ ಜೈನ್, ಟಿ. ಕಿರಣ್ ಕುಮಾರ್, ಜಿತೇಂದ್ರ, ಶಿವಕುಮಾರ್, ಚಂದ್ರಶೇಖರ್, ರಾಜಶೇಖರ, ಭರತ್, ಭವರ್ ಲಾಲ್ ದೇವಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.