ಸಾರಾಂಶ
ಮಂಡ್ಯ : ಏಕ ಕಾಲದಲ್ಲಿ ಹಲವು ಕೆಲಸದ ಒತ್ತಡ, ವಿವಿಧ ಬಗೆಯ ಮೊಬೈಲ್ ಆಪ್‌ಗಳನ್ನು ಬಳಸಿ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಲು ಹೇರಲಾಗುತ್ತಿರುವ ಅತೀವ ಒತ್ತಡ, ರಜಾ ದಿನಗಳಲ್ಲಿಯೂ ಸಹ ಕೆಲಸ ನಿರ್ವಹಿಸಬೇಕಾದ ಅನಿವಾರ್ಯ ಪರಿಸ್ಥಿತಿಗಳು, ಅಂತರ ಜಿಲ್ಲಾ ನಿಯೋಜನೆ ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ ಸೇವಾ ವಿಷಯದಲ್ಲಿ ನ್ಯಾಯವಾಗಿ ನೀಡಬೇಕಾದ ಸವಲತ್ತುಗಳುಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ (ಬೆಂಗಳೂರು) ಸಂಘದ ರಾಜ್ಯಾಧ್ಯಕ್ಷ ಎಸ್ ಮಹೇಶ್ ನೇತೃತ್ವದಲ್ಲಿ ರಾಜ್ಯಸರ್ಕಾರವನ್ನು ಒತ್ತಾಯಿಸಲಾಯಿತು.
ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ಶ್ರೀ ರಾಜೇಂದ್ರ ಕುಮಾರ್ ಕಟಾರಿಯ ಮತ್ತು ಕಂದಾಯ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ರವರನ್ನು ಭೇಟಿ ಮಾಡಿ ಆಧಾರ್ ಸೀಡಿಂಗ್ ಆ್ಯಪ್, ಲ್ಯಾಂಡ್ ಬೀಟ್ ಆ್ಯಪ್, ಬಗರ್‌ಹುಕುಂ ಆ್ಯಪ್, ಹಕ್ಕುಪತ್ರ ಆಪ್, ನಮೂನೆ 1-5ರ ವೆಬ್ ಅಪ್ಲಿಕೇಶನ್ ಸೇರಿದಂತೆ ಇನ್ನಿತರ ಕೆಲಸದ ಒತ್ತಡ ಸಡಿಲಗೊಳಿಸಲು ಮತ್ತು ಎಲ್ಲಾ ಕೆಲಸಗಳನ್ನು ಪೂರೈಸಲು ಕನಿಷ್ಠ ಆರು ತಿಂಗಳುಗಳಿಗೆ ಕಡಿಮೆ ಇಲ್ಲದಂತೆ ಕಾಲಾವಕಾಶ ನೀಡುವಂತೆ ಮನವಿ ಸಲ್ಲಿಸಿದರು.
ಈ ಆ್ಯಪ್‌ಗಳನ್ನು ಕಂದಾಯ ಇಲಾಖೆಯು ಒಂದೇ ಬಾರಿಗೆ ಅಳವಡಿಸಿ ಎಲ್ಲಾ ಆಪ್ ಗಳ ಮುಖೇನ ರೈತರ ಕೃಷಿ ಜಮೀನಿನ ಪಹಣಿಗಳಿಗೆ ಆಧಾರ್ ಜೋಡಿಸುವುದು, ಸರ್ಕಾರಿ ಜಮೀನಿನ ರಕ್ಷಣೆಗೆ ಜಿಯೋ ಫೆನ್ಸಿಂಗ್ ಮಾಡುವುದು, ಎಲ್ಲಾ ಬಗೆಯ ಸರ್ಕಾರಿ ಜಮೀನುಗಳ ಪೋಡಿ ದುರಸ್ತಿ ಸಂಬಂಧ ನಮೂನೆ 1 ರಿಂದ 5 ನ್ನು ತಯಾರಿಸಿ ಗಣಕೀಕರಣಗೊಳಿಸುವುದು, ನೂತನ ಕಂದಾಯ ಗ್ರಾಮಗಳ ರಚನೆ ಸಂಬಂಧ ಎಲ್ಲ ಪ್ರಕ್ರಿಯೆಗಳನ್ನು ಆಪ್ ಮುಖೇನ ನಿರ್ವಹಿಸುವುದು ಹೀಗೆ ಪ್ರಕ್ರಿಯೆಗಳನ್ನು ಮೊಬೈಲ್‌ನಲ್ಲೇ ಮಾಡಬೇಕಿದೆ.
ಸರ್ಕಾರದಿಂದ ಅಭಿವೃದ್ಧಿಪಡಿಸಲಾಗಿರುವ ಈ ಆ್ಯಪ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆ್ಯಂಡ್ರೈಡ್ ಮೊಬೈಲ್ ಉಪಯೋಗಿಸಿದರೂ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಕೆಲಸಕ್ಕೆ ಅಡಚಣೆಯಾಗುತ್ತಿದೆ. ಪ್ರಗತಿ ಕುಂಠಿತಗೊಳ್ಳುತ್ತಿರುವುದಾಗಿ ವಿವರಿಸಿದರು.
ಬೆಳಗ್ಗೆಯೇ ಎದ್ದು ರೈತರ ಬಳಿಗೆ ಹೋಗಬೇಕು. ವಿಳಂಬವಾಗಿ ಹೋದರೆ ರೈತರು ಕೆಲಸ-ಕಾರ್ಯಗಳ ಮೇಲೆ ಬೇರೆಡೆ ತೆರಳಿರುತ್ತಾರೆ. ಅವರಿಂದ ಮಾಹಿತಿಯನ್ನು ಪಡೆದುಕೊಳ್ಳುವುದು ಕಷ್ಟವಾಗುತ್ತಿದೆ. ಕೆಲವರ ಬಳಿ ಆ್ಯಂಡ್ರೈಡ್ ಮೊಬೈಲ್ ಇಲ್ಲದಿರುವುದೂ ಸಮಸ್ಯೆಯಾಗುತ್ತಿದೆ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರಲ್ಲಿ ಮನವರಿಕೆ ಮಾಡಿಕೊಟ್ಟರು
ಗ್ರಾಮ ಆಡಳಿತ ಅಧಿಕಾರಿಗಳ ಪದೋನ್ನತಿಗೆ ಸಂಬಂಧಿಸಿದಂತೆ ನ್ಯಾಯಾಲಯದ ತಡೆಯಾಜ್ಞೆ ಇಲ್ಲದಿದ್ದರೂ ಕೂಡ ಪದೋನ್ನತಿಯನ್ನು ತಡೆಹಿಡಿಯಲಾಗಿದೆ. ಕೂಡಲೇ ಇದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿಯವರನ್ನು ಕೋರಿದಾಗ ಒಂದು ವಾರದೊಳಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಪತಿ-ಪತ್ನಿ ಪ್ರಕರಣದ ಅಡಿಯಲ್ಲಿ ಅಂತರಜಿಲ್ಲಾ ವರ್ಗಾವಣೆಗಾಗಿ ಬಾಕಿ ಇರುವ ಪ್ರಕರಣಗಳನ್ನು ಕೂಡಲೇ ಆದೇಶಿಸುವುದು. ರಾಜ್ಯದ ಗ್ರಾಮ ಆಡಳಿತ ಅಧಿಕಾರಿಗಳ ನಿಯೋಜನೆಯ ಬಗ್ಗೆ ಏಕವ್ಯಕ್ತಿಯ ನಿಯೋಜನೆ ಬದಲಾಗಿ ಸಿಬ್ಬಂದಿಯ ಕೊರತೆ ಸಮತೋಲನ ಕಾಪಾಡಲು ಪರಸ್ಪರ ನಿಯೋಜನೆಯನ್ನು ಮಾಡಬೇಕಾಗಿ ಕೋರಲಾಯಿತು.
ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದವರ ಮನವಿಯನ್ನುಆಲಿಸಿದ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಮೇ 28ರಂದು ಈ ವಿಷಯವಾಗಿ ಸಭೆ ಕರೆದು ಅಂತಿಮ ನಿರ್ಣಯ ಮಾಡಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಕಂದಾಯ ಆಯುಕ್ತ ಸುನಿಲ್‌ಕುಮಾರ್ ಅವರೊಂದಿಗೆ ಎರಡು ಗಂಟೆಗಳ ಕಾಲ ಸಭೆ ನಡೆಸಿ ಸಮಸ್ಯೆಗಳ ಕುರಿತಂತೆ ವಿವರವಾಗಿ ಚರ್ಚಿಸಲಾಯಿತು ಎಂದು ಸಂಘದ ರಾಜ್ಯಾಧ್ಯಕ್ಷ ಮಹೇಶ್ ತಿಳಿಸಿದ್ದಾರೆ.
ಆಧಾರ್ ಸೀಡಿಂಗ್ ಆ್ಯಪ್, ಲ್ಯಾಂಡ್ ಬೀಟ್ ಆ್ಯಪ್, ಬಗರ್ ಹುಕುಂ ಆ್ಯಪ್, ಹಕ್ಕುಪತ್ರ ಆ್ಯಪ್, ನಮೂನೆ 1-5ರ ವೆಬ್ ಅಪ್ಲಿಕೇಶನ್ ಗಳಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಯಾರೂ ಕೂಡ ನಮಗೆ ಮನವರಿಕೆ ಮಾಡಿರಲಿಲ್ಲ ಅದರಿಂದಾಗಿ ಈ ಬಗ್ಗೆ ನಾವು ಒತ್ತಡ ಹೇರಿರುವ ಬಗ್ಗೆ ಆಯುಕ್ತರು ಬೇಸರ ವ್ಯಕ್ತಪಡಿಸಿದರು ಎಂದು ಹೇಳಿದ್ದಾರೆ.
ಕಂದಾಯ ಆಯುಕ್ತರ ಮೌಖಿಕ ನಿರ್ದೇಶನದಂತೆ ರಾಜ್ಯದ ಎಲ್ಲಾ ಗ್ರಾಮಲೆಕ್ಕಾಧಿಕಾರಿಗಳು ಲ್ಯಾಂಡ್ ಬಿಟ್ ಆ್ಯಪ್‌ನಲ್ಲಿ ಕರ್ತವ್ಯ ನಿರ್ವಹಿಸುವಾಗ ಕೇವಲ ಒತ್ತುವರಿ ಇರುವ ಭಾಗವನ್ನಷ್ಟೇ ವರದಿ ಮಾಡುವಂತೆ ಸೂಚಿದ್ದಾರೆ. ಲ್ಯಾಂಡ್ ಬಿಟ್ ಆ್ಯಪ್‌ನ ದೂರವನ್ನು 10 ಮೀಟರ್ ನಿಂದ 50 ಮೀಟರ್ ನವರೆಗೆ ವಿಸ್ತರಿಸುವುದಾಗಿ ತಿಳಿಸಿ ತಕ್ಷಣವೇ ಅನುಷ್ಟಾನ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು ಎಂದಿದ್ದಾರೆ.
ಲ್ಯಾಂಡ್ ಬೀಟ್ ಆ್ಯಪ್ ನಲ್ಲಿ ಕಂದಾಯ ಸರ್ಕಾರಿ ಭೂಮಿಯನ್ನು ಹೊರತುಪಡಿಸಿ ಇತರೆ ಇಲಾಖೆಗೆ ಹಸ್ತಾಂತರ ಮಾಡಿರುವ ಜಮೀನುಗಳನ್ನು ಈ ಕೆಲಸ ನಿರ್ವಹಿಸಲು ಆಯಾ ಇಲಾಖೆಗೆ ಆ್ಯಪ್ ನಿರ್ವಹಿಸುವ ಜವಾಬ್ದಾರಿ ನೀಡಲಾಗುವುದು. ಆಧಾರ್ ಸೀಡಿಂಗ್ ಬಗ್ಗೆ ಓಟಿಪಿ ವಿಷಯವಾಗಿ ಇನ್ನಷ್ಟು ಸರಳಿಕರಣ ಮಾಡಲು ಮತ್ತು ಕೆಲಸದ ಒತ್ತಡವನ್ನು ಕಡಿಮೆ ಮಾಡುವ ಕುರಿತಂತೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರೆಂದು ಹೇಳಿದ್ದಾರೆ.
ಸಂಘದ ನಿಯೋಗದ ನೇತೃತ್ವವನ್ನು ರಾಜ್ಯ ಅಧ್ಯಕ್ಷರಾದ ಎಸ್ ಮಹೇಶ್, ಪ್ರಧಾನ ಕಾರ್ಯದರ್ಶಿ ಶಿವಾನಂದ ನಾಯ್ಕ ಕೆ ಎಸ್ ಮತ್ತು ರಾಜ್ಯ ಉಪಾಧ್ಯಕ್ಷರಾದ ಎಸ್.ಮಧುಸೂಧನ್ ರವರು ವಹಿಸಿದ್ದರು.