ಜನರ ಸಮಸ್ಯೆ ಪರಿಹಾರಕ್ಕೆ ವಿಶೇಷ ಅಧಿವೇಶನ ನಡೆಸಲು ಒತ್ತಾಯ

| Published : Aug 06 2024, 12:36 AM IST

ಸಾರಾಂಶ

ರಾಜ್ಯಾದ್ಯಂತ ಸುರಿದ ಮಳೆಯಿಂದಾಗಿ, ರಾಜ್ಯದಲ್ಲಿ ನೆರೆ ಹಾವಳಿಯಿಂದ ರೈತರಿಗೆ ಅಪಾರ ಬೆಳೆ ನಷ್ಟ ಉಂಟಾಗಿದೆ.

ಹೊಸಪೇಟೆ: ನೆರೆ ಹಾವಳಿಗೆ ತುತ್ತಾಗಿ ಸಂಕಷ್ಟ ಎದುರಿಸುತ್ತಿರುವ ರೈತರು, ಜನಸಾಮಾನ್ಯರ ಸಮಸ್ಯೆಗಳನ್ನು ಚರ್ಚೆ ನಡೆಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲು ಶೀಘ್ರವೇ ಸರ್ಕಾರ ವಿಧಾನಸಭೆ ವಿಶೇಷ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿ ನಗರದ ಅಂಬೇಡ್ಕರ್ ಸರ್ಕಲ್ ಹತ್ತಿರ ಅಖಿಲ ಭಾರತ ವಕೀಲರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ರಾಜ್ಯಾದ್ಯಂತ ಸುರಿದ ಮಳೆಯಿಂದಾಗಿ, ರಾಜ್ಯದಲ್ಲಿ ನೆರೆ ಹಾವಳಿಯಿಂದ ರೈತರಿಗೆ ಅಪಾರ ಬೆಳೆ ನಷ್ಟ ಉಂಟಾಗಿದೆ. ಮನೆಗಳಿಗೆ ಹಾನಿಯಾಗಿ, ಜನರು ಮೃತಪಟ್ಟಿದ್ದಾರೆ. ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಗುಡ್ಡಗಳು ಅಪಾರ ಪ್ರಮಾಣದಲ್ಲಿ ಕುಸಿದಿದ್ದು, ಜನರು ಮೃತರಾಗಿದ್ದಾರೆ. ಆದರೆ, ಆಡಳಿತ ಯಂತ್ರ ಕೇವಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದನ್ನು ಬಿಟ್ಟರೆ ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ. ಈ ಕುರಿತಂತೆ ವಿಧಾನ ಸಭೆಯಲ್ಲಿ ಯಾವುದೇ ಚರ್ಚೆಯಾಗಲಿಲ್ಲ, ನಿಯಮ 69ರ ಅಡಿಯಲ್ಲೂ ಚರ್ಚೆಯಾಗಲಿಲ್ಲ ಎಂದು ದೂರಿದರು.

ಅಧಿವೇಶನದಲ್ಲಿ ವಾಲ್ಮೀಕಿ ನಿಗಮದ ಹಗರಣ ಮತ್ತು ಮುಡಾ ಹಗರಣದ ಚರ್ಚೆಯಲ್ಲೇ ಸದನ ಕಾಲ ಹರಣ ಮಾಡಿದೆ. ಸರ್ಕಾರ ಮತ್ತು ವಿರೋಧ ಪಕ್ಷಗಳು ಒಟ್ಟಿಗೆ ಸೇರಿ ರಾಜ್ಯದ ಜನತೆಗೆ ಬಗೆದ ರಾಜಕೀಯ ಅನ್ಯಾಯವಾಗಿದೆ. ಸೌಜನ್ಯಕ್ಕಾದರೂ ನೆರೆ ಹಾವಳಿ ಕುರಿತು ಚರ್ಚೆ ಮಾಡದಿರುವುದು ರಾಜ್ಯದ ಜನತೆಯ ರಾಜಕೀಯ ದುರಂತವೇ ಸರಿ. ಸದನದ ಕಲಾಪದ ವೇಳಾಪಟ್ಟಿಯಲ್ಲಿ ಕಂಪ್ಲಿಯಲ್ಲಿ 6 ಸಾವಿರ ಎಕರೆ ಜಮೀನಿಗೆ ನೀರಾವರಿ ವ್ಯವಸ್ಥೆಯನ್ನು ಮಾಡಿಕೊಡುವ ವಿಷಯ ಸೇರಿತ್ತು. ಕೂಡ್ಲಿಗಿ ತಾಲೂಕಿನಲ್ಲಿ ಜಮೀನುಗಳಲ್ಲಿ ಕರಡಿಗಳು ಮೆಕ್ಕೆಜೋಳ ಮತ್ತು ಬಿತ್ತಿದ ಬೀಜಗಳನ್ನು ತಿನ್ನುತ್ತಿದ್ದು, ಇದಕ್ಕೆ ಪರಿಹಾರ ಕೇಳುವ ವಿಷಯವೂ ಇತ್ತು. ಆದರೆ ಈ ವಿಷಯಗಳು ಚರ್ಚೆಗೇ ಬರಲಿಲ್ಲ ಎಂದು ದೂರಿದರು.

ನೆರೆಹಾವಳಿಯಿಂದ ಉಂಟಾದ ರೈತರ ಬೆಳೆ, ಆಸ್ತಿಪಾಸ್ತಿಗಳಿಗೆ ಉಂಟಾದ ನಷ್ಟವನ್ನು ಅಂದಾಜಿಸಿ, ಪರಿಹಾರಗಳನ್ನು ಘೋಷಿಸಬೇಕು. ನೆರೆ ಹಾವಳಿಯಲ್ಲಿ ಜೀವ ಕಳೆದುಕೊಂಡ ಕುಟುಂಬಗಳಿಗೆ ತಕ್ಷಣವೇ ಪರಿಹಾರ ನೀಡಬೇಕು. ಸಕ್ಕರೆ ಕಾರ್ಖಾನೆ ಆರಂಭಿಸಿ, ಈ ಭಾಗದ ರೈತರ ಸಮಸ್ಯೆಗಳನ್ನು ಪರಿಹರಿಸಬೇಕು. ವಕೀಲರಿಗೆ ಪೊಲೀಸರ ಕಿರುಕುಳದಿಂದ ರಕ್ಷಣೆ ಪಡೆಯುವ ದಿಸೆಯಲ್ಲಿ ವಕೀಲರ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ಮಾಡಬೇಕು. ಬೇಡಿಕೆಗಳನ್ನು ಈಡೇರಿಸುವಂತೆ ತಕ್ಷಣವೇ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಎ. ಕರುಣಾನಿಧಿ, ಕಟಗಿ ಜಂಬಯ್ಯ, ರಾಮಪ್ಪ, ಕಲ್ಯಾಣಯ್ಯ, ರಮೇಶ್, ಮರಿಸ್ವಾಮಿ, ಉಮಾ ಮಹೇಶ್ವರ, ಸೋದಾ ವಿರೂಪಾಕ್ಷ ಗೌಡ ಮತ್ತಿತರರಿದ್ದರು.