ಸಾರಾಂಶ
ಅಂಕೋಲಾ ತಾಲೂಕಿನಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಅವರನ್ನು ನಿಗ್ರಹಿಸುವಂತೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಂಕೋಲಾದಲ್ಲಿ ಪೊಲೀಸರಿಗೆ ಮನವಿ ಸಲ್ಲಿಸಲಾಯಿತು.
ಅಂಕೋಲಾ: ತಾಲೂಕಿನಲ್ಲಿ ಪತ್ರಕರ್ತರೆಂದು ಹೇಳಿಕೊಂಡು ಪೊಲೀಸ್ ಠಾಣೆ ಹಾಗೂ ವಿವಿಧ ಇಲಾಖೆಗಳಲ್ಲಿ ಕೆಲವು ವ್ಯಕ್ತಿಗಳು ಒತ್ತಡ ಹಾಕಿ ತಾವು ಕೂಡ ವರದಿಗಾರರು ಎನ್ನುವಂತೆ ಅವರಿಗೆ ಕಿರುಕುಳ ನೀಡಿ ಲಾಭ ಪಡೆದುಕೊಳ್ಳುತ್ತಿರುವುದರಿಂದ ಅಸಲಿ ಪತ್ರಕರ್ತರಿಗೆ ಕೆಟ್ಟ ಹೆಸರು ಬರುವಂತಾಗಿದೆ. ಹೀಗಾಗಿ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪೊಲೀಸ್ ನಿರೀಕ್ಷಕರಿಗೆ ಶನಿವಾರ ಮನವಿ ಸಲ್ಲಿಸಿದರು.
ಪೊಲೀಸ್ ಠಾಣೆ ಎದುರು ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಎನ್ನದೇ ಕೆಲವರು ಅಲ್ಲಿಯೇ ಠಿಕಾಣಿ ಹೂಡಿ, ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಬಂದವರನ್ನು ಠಾಣೆಗೆ ಹೋಗುವ ದಾರಿ ಮಧ್ಯದಲ್ಲಿ ತಡೆದು ನಿಮಗೆ ಏನಾಗಬೇಕಾಗಿದೆ? ನಾವಿದ್ದೇವೆ, ನಾವು ಪತ್ರಕರ್ತರು ಎಂದು ಹೇಳಿಕೊಂಡು ನಿಮ್ಮ ಸಮಸ್ಯೆ ನಾವು ಬಗೆಹರಿಸಿಕೊಡುತ್ತೇವೆ. ಏನೇ ಇದ್ದರೂ ನಮ್ಮ ಬಳಿ ಹೇಳಿ ಎಂದು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಮಾತುಕತೆ ನಡೆಸುತ್ತಾರೆ. ದೂರು ಕೊಡಲು ಬಂದವರ ಮೊಬೈಲ್ ನಂ. ಪಡೆದು ಅವರನ್ನು ಬೇರೆ ಬೇರೆ ರೀತಿಯಾಗಿ ಪೀಡಿಸುತ್ತಾರೆ. ಹೀಗೆ ಅನೇಕ ಪ್ರಕರಣ ಈ ಭಾಗದಲ್ಲಿ ನಡೆದಿದೆ. ಇದರ ಜತೆಗೆ ತಾಲೂಕಿನಲ್ಲಿ ಇನ್ನೂ ಅನೇಕ ವ್ಯಕ್ತಿಗಳು ತಾವು ಪತ್ರಕರ್ತರೆಂದು ಹೇಳಿಕೊಂಡು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಬೆದರಿಸಿ ಹಣ ಪಡೆಯುವ ವಿಚಾರವೂ ಗಮನಕ್ಕೆ ಬಂದಿದೆ. ಇಂತಹ ಕೃತ್ಯಗಳನ್ನು ಮಾಡುತ್ತಿರುವವರನ್ನು ತಡೆಯಬೇಕು ಎಂದು ಅವರು ಸಲ್ಲಿಸಿದ ಮನವಿಯಲ್ಲಿ ಕೋರಿದ್ದಾರೆ.ಪೊಲೀಸ್ ನಿರೀಕ್ಷಕ ಶ್ರೀಕಾಂತ ತೋಟಗಿ ಮನವಿ ಸ್ವೀಕರಿಸಿದರು. ಪಿಎಸ್‌ಐ ಉದ್ದಪ್ಪ ದರೆಪ್ಪನವರ, ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿದ್ಯಾಧರ ಮೊರಬಾ, ಗೌರವಾಧ್ಯಕ್ಷ ರಾಘು ಕಾಕರಮಠ, ಪದಾಧಿಕಾರಿಗಳಾದ ವಾಸುದೇವ ಗುನಗಾ, ನಾಗರಾಜ ಮಂಜಗುಣಿ, ವಿಠ್ಠಲದಾಸ ಕಾಮತ, ಸುಭಾಶ ಕಾರೇಬೈಲ್, ಕೆ. ರಮೇಶ, ಮಾರುತಿ ಹರಿಕಂತ್ರ, ಅಕ್ಷಯ ನಾಯ್ಕ, ನಾಗರಾಜ ಜಾಂಬಳೇಕರ ಉಪಸ್ಥಿತರಿದ್ದರು.