ಬಾಣಂತಿಯರ ಸಾವು ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ

| Published : Dec 07 2024, 12:32 AM IST

ಸಾರಾಂಶ

ಜಿಲ್ಲಾಸ್ಪತ್ರೆ ಸೇರಿದಂತೆ ರಾಜ್ಯದ ವಿವಿಧೆಡೆ ಸಂಭವಿಸಿರುವ ಬಾಣಂತಿಯರ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಒತ್ತಾಯಿಸಿದರು.

ಬಳ್ಳಾರಿ: ಜಿಲ್ಲಾಸ್ಪತ್ರೆ ಸೇರಿದಂತೆ ರಾಜ್ಯದ ವಿವಿಧೆಡೆ ಸಂಭವಿಸಿರುವ ಬಾಣಂತಿಯರ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಒತ್ತಾಯಿಸಿದರು.

ನಗರದ ಜಿಲ್ಲಾಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಬಳ್ಳಾರಿ ಜಿಲ್ಲಾಸ್ಪತ್ರೆ ಸೇರಿದಂತೆ ರಾಜ್ಯದ ನಾನಾ ಕಡೆ 100ಕ್ಕೂ ಅಧಿಕ ಬಾಣಂತಿಯರು ಮೃತಪಟ್ಟಿದ್ದಾರೆ. ಆರೋಗ್ಯ ಮಂತ್ರಿಗಳು ಏನು ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಜಿಲ್ಲೆಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮೃತ ಕುಟುಂಬಗಳಿಗೆ ಸಾಂತ್ವನ ಹೇಳಬೇಕಿದ್ದ ಆರೋಗ್ಯ ಮಂತ್ರಿಗಳು ಬೆಂಗಳೂರಿನಲ್ಲಿ ಕುಳಿತು ಕಾಲ ಕಳೆಯುತ್ತಿದ್ದಾರೆ ಎಂದು ದೂರಿದರು.

ಸಾವಿನ ತನಿಖೆ ಬಳಿಕ ಐವಿ ದ್ರಾವಣ ಕಾರಣ ಎಂಬುದು ಬಯಲಾಗಿದೆ. ಬ್ಯಾನ್‌ ಆದ ಔಷಧಗಳನ್ನು ಸರ್ಕಾರ ಆಸ್ಪತ್ರೆಗಳಿಗೆ ಪೂರೈಸುತ್ತಿದೆ. ಹೀಗಾಗಿಯೇ ಬಾಣಂತಿಯರ ಸಾವು ಸಂಭವಿಸಿದೆ. ಕಳಪೆ ಗುಣಮಟ್ಟದ ಔಷಧ ಪೂರೈಸುವ ಕಂಪನಿಯಿಂದಲೇ ಸರ್ಕಾರ ಔಷಧ ಖರೀದಿಸಿದೆ. ಈ ಹಿಂದೆ ಬ್ಯಾನ್ ಆದ ಕಂಪನಿಯಿಂದ ಔಷಧ ಖರೀದಿ ಮಾಡಿದ್ದು ಯಾಕೆ? ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕಲ್ಲವೇ? ಸರ್ಕಾರಕ್ಕೆ ಇನ್ನೂ ಎಷ್ಟು ಜನರ ಸಾವಾಗಬೇಕಿದೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಬಾಣಂತಿಯರ ಸಾವು ತಡೆಗಟ್ಟಬೇಕು. ಆರೋಗ್ಯ ಮಂತ್ರಿಗಳು ರಾಜ್ಯದ ಎಲ್ಲ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ತಪ್ಪಿತಸ್ಥ ಕಂಪನಿಯವರ ವಿರುದ್ಧ ಶಿಸ್ತುಕ್ರಮ ಜರುಗಿಸಿ, ಜೈಲಿಗೆ ಕಳುಹಿಸಬೇಕು. ಮೃತ ಕುಟುಂಬಗಳಿಗೆ ತಲಾ ಒಂದು ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ತಾಯಿ-ಮಗುವಿನ ಸುರಕ್ಷತೆ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಿದೆ. ನಾನು ಈ ಹಿಂದೆ ಆರೋಗ್ಯ ಸಚಿವರಾಗಿದ್ದಾಗ ತಾಯಿ-ಮಗುವಿನ ಸುರಕ್ಷತೆ ವಿಚಾರದಲ್ಲಿ ಎರಡನೇ ಸ್ಥಾನದಲ್ಲಿದ್ದ ಕರ್ನಾಟಕ, ಇದೀಗ ಕೊನೆಯ ಸ್ಥಾನದಲ್ಲಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಂಡಿದೆ? ಆರೋಗ್ಯ ವಲಯವನ್ನು ನಿರ್ಲಕ್ಷಿಸುತ್ತಿರುವುದು ಯಾಕೆ? ಎಂದು ಕೇಳಿದರು.

ರಾಜ್ಯದಲ್ಲಿ ಒಂದೆಡೆ ಬಾಣಂತಿಯರ ಸಾವು ಪ್ರಕರಣಗಳು ಹೆಚ್ಚುತ್ತಿವೆ. ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜನಕಲ್ಯಾಣ ಸಮಾವೇಶ ಮಾಡುತ್ತಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಸಮಾವೇಶ ಮಾಡುತ್ತಿದ್ದಾರೆ? ಇಡಿ, ಸಿಬಿಐ ಎದುರಿಗೆ ತನ್ನ ಶಕ್ತಿ ಸಾಬೀತುಪಡಿಸಿಕೊಳ್ಳಲು ಸಿಎಂ ಸಮಾವೇಶ ಮಾಡುತ್ತಿದ್ದಾರೆಯೇ ಎಂದು ಶ್ರೀರಾಮುಲು ಪ್ರಶ್ನಿಸಿದರು.

ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌, ರಾಜ್ಯಾಧ್ಯಕ್ಷರು ಎಲ್ಲರನ್ನೂ ಒಳಗೊಂಡಂತೆ ಬಿಜೆಪಿ ಗಟ್ಟಿಯಾಗಿದೆ. ಯತ್ನಾಳ್‌ ಅವರು ಪಕ್ಷ ದಲ್ಲಿ ಉಳಿಯಬೇಕು. ಭ್ರಷ್ಟ ಕಾಂಗ್ರೆಸ್‌ ತೊಲಗಿಸಲು ಎಲ್ಲರೂ ಒಂದಾಗಬೇಕಾಗಿದೆ ಎಂದು ಹೇಳಿದರು.