ವೀರಶೈವ- ಲಿಂಗಾಯತ ಒಳಪಂಗಡಗಳ ಒಗ್ಗೂಡಿಸಲು ಶೀಘ್ರ ಕ್ರಮ

| Published : May 05 2025, 12:48 AM IST

ವೀರಶೈವ- ಲಿಂಗಾಯತ ಒಳಪಂಗಡಗಳ ಒಗ್ಗೂಡಿಸಲು ಶೀಘ್ರ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ವೀರಶೈವ-ಲಿಂಗಾಯತ ಒಳ ಪಂಗಡಗಳನ್ನೆಲ್ಲಾ ಒಗ್ಗೂಡಿಸಲು ಸಮಾಜ ಎಲ್ಲ ಸ್ವಾಮೀಜಿಗಳನ್ನು ಒಂದೇ ವೇದಿಕೆಗೆ ಕರೆತರುವ ಕೆಲಸವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಮಾಡಲಿದೆ ಎಂದು ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

- ಸಮಾಜದ ಎಲ್ಲ ಸ್ವಾಮೀಜಿಗಳನ್ನೂ ಒಂದೇ ವೇದಿಕೆಯಡಿ ಕರೆತರಲು ಚಿಂತನೆ: ಡಾ.ಶಿವಶಂಕರಪ್ಪ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವೀರಶೈವ-ಲಿಂಗಾಯತ ಒಳ ಪಂಗಡಗಳನ್ನೆಲ್ಲಾ ಒಗ್ಗೂಡಿಸಲು ಸಮಾಜ ಎಲ್ಲ ಸ್ವಾಮೀಜಿಗಳನ್ನು ಒಂದೇ ವೇದಿಕೆಗೆ ಕರೆತರುವ ಕೆಲಸವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಮಾಡಲಿದೆ ಎಂದು ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದ ಬಿಐಇಟಿ ಕಾಲೇಜಿನ ಎಸ್‌.ಎಸ್‌. ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಅ.ಭಾ.ವೀ.ಮ. ಹಮ್ಮಿಕೊಂಡಿದ್ದ ಮಹಾಸಭಾದ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿದರು. ಮಹಾಸಭಾಗೆ ಇದು ಮಹತ್ವದ ವರ್ಷವಾಗಿದೆ. ರಾಜ್ಯದಲ್ಲಿ ಜಾತಿಗಣತಿ ನಡೆದಿರುವುದು ಗಮನಾರ್ಹ ಎಂದರು.

ವೀರಶೈವ ಲಿಂಗಾಯತ ಜನಸಂಖ್ಯೆ ಹಿಂದೆ ಎಷ್ಟಿತ್ತೋ ಅದರ ಅರ್ಧಕ್ಕಿಂತ ಕಡಿಮೆ ತೋರಿಸಲಾಗಿದೆ. ರಾಜ್ಯ ಸರ್ಕಾರವು ವೀರಶೈವ ಲಿಂಗಾಯತರನ್ನು ಅಲ್ಪಸಂಖ್ಯಾತರೆಂಬಂತೆ ಮಾಡಿದೆ. ನಾವು ಕಡಿಮೆಯೆಂದರೂ 2 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿದ್ದೇವೆ. ಸರ್ಕಾರ ಕೇವಲ 65 ಲಕ್ಷ ಮಾತ್ರ ತೋರಿಸಿದೆ. ಕಡಿಮೆ ಜನಸಂಖ್ಯೆ ತೋರಿಸಿ, ಸರ್ಕಾರದ ಸೌಲಭ್ಯಗಳನ್ನು ಕಡಿತಗೊಳಿಸುವ ಕೆಲಸ ಮಾಡುವ ಪ್ರಯತ್ನ ನಡೆದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಶಾಸಕರು ಕಿಡಿಕಾರಿದರು.

ಒಕ್ಕಲಿಗರು, ವೀರಶೈವ ಮಹಾಸಭಾ 10 ದಿನಗಳ ಹಿಂದೆ ಸಭೆ ಮಾಡಿದ್ದು, ಒಕ್ಕಲಿಗರೂ ಸಹಕಾರ ನೀಡಿದರು. ಮತ್ತೊಮ್ಮೆ ಸಭೆ ಕರೆದು, ಚರ್ಚಿಸಲು ತೀರ್ಮಾನಿಸಿದೆವು. ಅಷ್ಟರಲ್ಲಿ ಕೇಂದ್ರ ಸರ್ಕಾರವೇ ಜಾತಿಗಣತಿಗೆ ನಿರ್ಧರಿಸಿದ್ದು ಅನುಕೂಲ ಆಗುವಂತೆ ಕಾಣುತ್ತಿದೆ. ಅದಕ್ಕೆ ಇನ್ನೂ ಒಂದು ವರ್ಷ ತಡವಾಗುತ್ತದೆ ಎನ್ನಲಾಗುತ್ತಿದೆ. ಅಷ್ಟರಲ್ಲಿ ಏನಾದರೂ ಮಾಡಬೇಕೆಂದು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಮ್ಮದೇ ಪಕ್ಷದ ಸರ್ಕಾರದ ನಡೆಗೆ ಬೇಸರಗೊಂಡರು.

ರಾಜ್ಯದಲ್ಲಿ ಹೆಚ್ಚಾಗಿರುವುದು ವೀರಶೈವ ಲಿಂಗಾಯತರು. ಎರಡನೇ ಸ್ಥಾನದಲ್ಲಿ ಒಕ್ಕಲಿಗರಿದ್ದಾರೆ. ನಮ್ಮದೇ ಮೇಲುಗೈ. ನಾವಿಬ್ಬರೂ ಸೇರಿ ಏನು ನಿರ್ಣಯ ಮಾಡುತ್ತೇವೆಯೋ ಅದನ್ನು ಸರ್ಕಾರಕ್ಕೆ ತಿಳಿಸೋಣ ಎಂಬುದಾಗಿ ನೀಡಿದ ಸಲಹೆಗೆ ಒಕ್ಕಲಿಗರ ಸಂಘದ ಮುಖಂಡರು ಒಪ್ಪಿದ್ದಾರೆ. ನಿನ್ನೆ ತಮ್ಮ ನಿವಾಸಕ್ಕೆ ರಂಭಾಪುರಿ ಶ್ರೀಗಳು ಬಂದಾಗ ಆಶೀರ್ವಾದ ಮಾಡಿದರು. ನಿಮ್ಮ ಆಶೀರ್ವಾದ ಯಾರಿಗೆ ಬೇಕು, ಮೊದಲು ಸಮಾಜದ ಜನರನ್ನು ಒಗ್ಗೂಡಿಸಲು ಮುಂದಾಗಿ. ಜಂಗಮರನ್ನೆಲ್ಲಾ ಸೇರಿಸೋಣ ಎಂದು ಸಲಹೆ ನೀಡಿರುವುದಾಗಿಯೂ ಹೇಳಿದರು.

- - -

(ಬಾಕ್ಸ್‌-1) * ದೊಡ್ಡ, ಸಣ್ಣ ಸ್ವಾಮಿಗಳು ಅಂತೇನಿಲ್ಲ: ಶಾಸಕ ಜನಗಣತಿಗೆ ಗಣತಿದಾರರು ನಿಮ್ಮ ಮನೆ ಬಾಗಿಲಿಗೆ ಬಂದಾಗ ಏನು ಬರೆಸಬೇಕೆಂಬುದನ್ನು ತೀರ್ಮಾನಿಸಿದರೆ ಒಳ್ಳೆಯದು. ಪಂಚಪೀಠಗಳ ಮಠಾಧೀಶರು ಒಂದೇ ವೇದಿಕೆಗೆ ಬರಲು ನಮ್ಮ ಒಪ್ಪಿಗೆ ಇದೆ. ಉಳಿದವರನ್ನೂ ಸಂಪರ್ಕಿಸಲಾಗುವುದು. ಎಲ್ಲರೂ ಒಗ್ಗೂಡಿದಾಗ ಜಗಳ ಮಾಡುತ್ತಾರೋ, ಇಲ್ಲವೋ ಗೊತ್ತಿಲ್ಲ. ಎಲ್ಲರೂ ಒಟ್ಟಿಗೆ ಸೇರಿದಾಗ ಯಾರು ಏನು ಚರ್ಚೆ ಮಾಡುತ್ತಾರೆಂಬುದು ಗೊತ್ತಾಗುತ್ತದೆ ಎಂದು ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಿವಶಂಕರಪ್ಪ ಹೇಳಿದರು.

ಮೊದಲು ಮುಖ್ಯ ಸ್ವಾಮಿಗಳನ್ನು ಕರೆಸಿ, ಚರ್ಚೆ ಮಾಡಲಾಗಿದೆ. ಮುಂದೆ ಯಾವ ಸ್ವಾಮಿಗಳನ್ನೂ ಬಿಡುವುದಿಲ್ಲ. ಸಣ್ಣ ಸ್ವಾಮಿ, ದೊಡ್ಡ ಸ್ವಾಮಿ ಹೀಗೆ ಯಾರನ್ನೂ ಬಿಡುವುದಿಲ್ಲ. ಎಲ್ಲರನ್ನೂ ಒಂದೇ ವೇದಿಕೆಗೆ ತರುವ ಕೆಲಸ ಮಹಾಸಭಾ ಮಾಡಲಿದೆ. ರಾಜ್ಯ ಸರ್ಕಾರದ ಜಾತಿಗಣತಿ ವರದಿ ನಮ್ಮ ಸಮಾಜಕ್ಕೆ ಎಂದಿದ್ದರೂ ತೊಂದರೆಯೇ ಎಂಬುದನ್ನು ನಾವು ಮರೆಯಬಾರದು. ಹಾಗಾಗಿ, ಸಮಾಜದ ಎಲ್ಲ ಸ್ವಾಮಿಗಳೂ ಒಂದೆಡೆ ಸೇರಿ, ಚರ್ಚಿಸಿ ಜನಗಣತಿ ವೇಳೆ ಏನು ಬರೆಸಬೇಕೆಂಬ ಕುರಿತು ಮುಂದಿನ ತೀರ್ಮಾನಿಸಲಾಗುವುದು ಎಂದರು.

ಲಿಂಗಾಯತ ಸಮಾಜದಲ್ಲೇ ವಿರೋಧಿಗಳು ಬಹಳ ಜನರಿದ್ದಾರೆ. ಅದರಲ್ಲೂ ಜಾಮ್‌ದಾರ್ ಮತ್ತಿತರೆ ನಾಲ್ಕೈದು ಜನರಿದ್ದಾರೆ. ಇಂತಹವರ ಮಾತನ್ನು ಕೆಲವರು ನಂಬುತ್ತಾರೆ. ಕೆಲವರು ನಂಬೊಲ್ಲ. ಒಟ್ಟಿನಲ್ಲಿ ನಮ್ಮ ಜವಾಬ್ದಾರಿ ಎಲ್ಲ ಒಳಪಂಗಡಗಳನ್ನು ಒಗ್ಗೂಡಿಸುವುದಾಗಿದೆ. ನಾನು ಅಧ್ಯಕ್ಷನಾದ ಮೇಲೆ ಒಳ್ಳೆಯ ಕೆಲಸ ಮಾಡಿದ ಪರಿಣಾಮ ಇದೀಗ ಮೂರನೇ ಬಾರಿಗೆ ನನ್ನನ್ನೇ ಮುಂದುವರಿಸಿದ್ದಾರೆ. ಇದಕ್ಕಾಗಿ ಸಮಾಜ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ ಎಂದು ಶಿವಶಂಕರಪ್ಪ ತಿಳಿಸಿದರು.

- - -

(ಬಾಕ್ಸ್‌-2) * ವೀರಶೈವ ಲಿಂಗಾಯತ ಜನಸಂಖ್ಯೆ ಕಡಿಮೆ ಆತಂಕಕಾರಿ ವಿಚಾರ: ವೀರಣ್ಣದಾವಣಗೆರೆ: ಜಾತಿಗಣತಿಯಲ್ಲಿ ನಮ್ಮ ಜನಸಂಖ್ಯೆ ತುಂಬಾ ಕಡಿಮೆ ತೋರಿಸಿರುವುದು ಆತಂಕದ ವಿಚಾರ. ಶಾಮನೂರು ಶಿವಶಂಕರಪ್ಪ, ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಇಂತಹದ್ದಕ್ಕೆಲ್ಲಾ ನಾವು ಪರಿಹಾರ ಕಂಡು ಹಿಡಿಯಬೇಕಿದೆ. ಈ ವಿಚಾರ ಮಹಾಸಭಾ ಮುಖಾಂತರ ಎಲ್ಲ ಜಿಲ್ಲೆ ಅಧ್ಯಕ್ಷರ ಮೂಲಕ ಬರುವ ಜಾತಿಗಣತಿ ವೇಳೆ ಯಾವ ರೀತಿ ಬರೆಸಬೇಕೆಂದು ತೀರ್ಮಾನ ಕೈಗೊಳ್ಳಬೇಕು ಎಂದು ಅ‍ಭಾವೀಮ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ಎಸ್.ವೀರಣ್ಣ ಹೇಳಿದರು.

ರಂಭಾಪುರಿ ಶ್ರೀಗಳು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಯಾವ ನಿರ್ಣಯ ಕೈಗೊಳ್ಳುತ್ತೀರೋ ಅದಕ್ಕೆ ಬದ್ಧವಿರುವುದಾಗಿ ಒಪ್ಪಿದ್ದಾರೆ. ನಿಮ್ಮ ಮನೆಯಲ್ಲೇ ಪಂಚಪೀಠಾಧೀಶರು ಸೇರಿಕೊಂಡು ಒಂದು ನಿರ್ಣಯ ತೆಗೆದುಕೊಂಡು ಮಹಾಸಭಾಕ್ಕೆ ತಿಳಿಸುವುದಾಗಿ ಹೇಳಿದ್ದಾರೆ. ಅದೇ ರೀತಿ ಮೊಬೈಲ್ ಆ್ಯಪ್ ಸಿದ್ಧಪಡಿಸಿ ಎಲ್ಲರಿಗೂ ತಿಳಿಸುವ ಕೆಲಸ ಮಾಡಬೇಕಿದೆ. ಕೆಲವರು ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುತ್ತಾರೆ. ಧರ್ಮ ಯಾವುದು, ಒಳಪಂಗಡ ಯಾವುದು ಎನ್ನುವುದನ್ನು ಆ್ಯಪ್ ಮೂಲಕ ತಿಳಿಯುವ ಪ್ರಯತ್ನ ಮಾಡಬೇಕಿದೆ. ಎಲ್ಲ ಮಠಾಧೀಶರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೊದಲ ಆದ್ಯತೆ ಮೇರೆಗೆ ಈ ಕೆಲಸ ಮಾಡಬೇಕಿದೆ ಎಂದು ವೀರಣ್ಣ ಮನವಿ ಮಾಡಿದರು.

- - -

(ಬಾಕ್ಸ್‌-3) * ಸಮಾಜ ಮುಖ್ಯವೆಂದ ಎಸ್ಸೆಸ್

ಕೆಲವರು ವೀರಶೈವ ಮತ್ತು ಲಿಂಗಾಯತ ಬೇರೆ ಎಂದು ವಾದಿಸಿದಾಗ, ನನಗೆ ರಾಜಕೀಯಕ್ಕಿಂತಲೂ ಸಮಾಜವೇ ಮುಖ್ಯ ಎಂದು, ಎರಡೂ ಒಂದೇ ಎಂಬ ದಿಟ್ಟತನದಿಂದ ನಿಂತವರು ಶಾಮನೂರು ಶಿವಶಂಕರಪ್ಪ ಎಂದು ಅಭಾವಿಮ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ ಹೇಳಿದರು.

ಬಿಳಿ ಬಟ್ಟೆ ತೊಟ್ಟ ಸ್ವಾಮೀಜಿಯಂತೆ ಶಾಮನೂರು ಶಿವಶಂಕರಪ್ಪ ಅವರು ಸಹ ಪೂಜ್ಯರು. ಸಾಕಷ್ಟು ಜನರು ಶಾಮನೂರು ಪಾದಗಳಿಗೆ ನಮಸ್ಕರಿಸುತ್ತಾರೆ. ಬರುವ ಜನಗಣತಿ ಮತ್ತು ಜಾತಿಗಣತಿಯಲ್ಲಿ ನಮ್ಮನ್ನು ಸ್ಪಷ್ಟವಾಗಿ ನಾವು ಗುರುತಿಸಿಕೊಳ್ಳಬೇಕು. ತಪ್ಪಿದಲ್ಲಿ ಸಮಾಜವು ಶೋಚನೀಯ ಸ್ಥಿತಿ ತಲುಪುತ್ತದೆ. ಈ ಬಗ್ಗೆ ಸಮಾಜ ಬಾಂಧವರಿಗೆ ಅರಿವು ಇರಬೇಕು ಎಂದರು.

- - -

(ಫೋಟೋ: ಶಾಮನೂರು ಶಿವಶಂಕರಪ್ಪ)