ಕನ್ನಡಪ್ರಭ ವಾರ್ತೆ ಅರಸೀಕೆರೆ

ಐತಿಹಾಸಿಕ ಅರಸಿಯ ಕೆರೆಯ ಏರಿ ಭಾಗದಲ್ಲಿ ನಿಯಂತ್ರಣವಿಲ್ಲದೆ ಬೆಳೆದಿರುವ ಗಿಡಗಂಟೆ ಹಾಗೂ ಪೊದೆಗಳು ಸಾರ್ವಜನಿಕರ ಸುರಕ್ಷತೆಗೆ ಮಾರಕವಾಗಿದ್ದು, ತಕ್ಷಣವೇ ಅವುಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ರೈತ ಸಂಘ ಹಾಗೂ ರೈತ ಶಕ್ತಿ ಬಣದ ಪದಾಧಿಕಾರಿಗಳು ಆಗ್ರಹಿಸಿದರು.

ಈ ಸಂಬಂಧ ಮಂಗಳವಾರ ತಹಸೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ ಸಂಘದ ಮುಖಂಡರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅರಸೀಕೆರೆ ನಗರದ ಕಂತೇನಹಳ್ಳಿ ಬಡಾವಣೆ ಸಮೀಪದ ಅರಸಿಯ ಕೆರೆ ಏರಿ ಮೇಲೆಯೇ ರಾಷ್ಟ್ರೀಯ ಹೆದ್ದಾರಿ 206 ಹಾದುಹೋಗಿದ್ದು, ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಆದರೆ ರಸ್ತೆಯ ತಿರುವುಗಳಲ್ಲಿ ಬೆಳೆದಿರುವ ದಟ್ಟವಾದ ಪೊದೆಗಳಿಂದ ಎದುರಿನಿಂದ ಬರುವ ವಾಹನಗಳು ಸ್ಪಷ್ಟವಾಗಿ ಕಾಣದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ದೂರಿದರು.ಸೋಮವಾರ ಸಂಜೆ ಅರವಿಂದ ಗಾರ್ಮೆಂಟ್ಸ್ ಕಾರ್ಖಾನೆಯಿಂದ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮಹಿಳಾ ಕಾರ್ಮಿಕರನ್ನು ಸಾಗಿಸುತ್ತಿದ್ದ ಆಟೋರಿಕ್ಷಾ ಅಪಘಾತಕ್ಕೀಡಾದ ಘಟನೆಯನ್ನು ಉಲ್ಲೇಖಿಸಿದ ಅವರು, ರಸ್ತೆಯ ಬದಿಯಲ್ಲಿನ ಜಂಗಲ್ ದೃಷ್ಟಿಗೆ ಅಡ್ಡಿಯಾಗಿರುವುದೇ ಈ ದುರ್ಘಟನೆಗೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದರು. ಘಟನೆಯಲ್ಲಿ ಹಲವು ಮಹಿಳಾ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಇಂತಹ ಘಟನೆಗಳು ಆಗಾಗ್ಗೆ ಸಂಭವಿಸುತ್ತಿವೆ ಎಂದು ತಿಳಿಸಿದರು.

ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ನಗರಸಭೆ ಹಾಗೂ ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಹೀಗಾಗಿ ತಹಸೀಲ್ದಾರ್‌ ಅವರ ಮಧ್ಯಸ್ಥಿಕೆಯಲ್ಲಿ ತುರ್ತು ಕ್ರಮ ಜರುಗಿಸಿ ಜಂಗಲ್ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ದಯಾನಂದ್ ನಾಗೇನಹಳ್ಳಿ ಮಾತನಾಡಿ, ಮಹಿಳಾ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜೀವಭಯದಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆ ಪರಿಹಾರವಾಗದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.


ಮನವಿ ಸ್ವೀಕರಿಸಿದ ತಹಸೀಲ್ದಾರ್ ಸಂತೋಷ್ ಕುಮಾರ್, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಂಟಿ ಕಾರ್ಯದರ್ಶಿ ಲೋಕೇಶ್, ತಾಲೂಕು ಅಧ್ಯಕ್ಷ ಕೃಷ್ಣಮೂರ್ತಿ ಪನ್ನಸಮುದ್ರ, ಉಪಾಧ್ಯಕ್ಷ ಶಾಂತಕುಮಾರ್, ಅರಕೆರೆ ರಾಜಶೇಖರ್, ಖುಶಾ, ರಘು, ಸಿದ್ದಯ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು, ಖಾಸಗಿ ವಾಹನ ಚಾಲಕರು ಹಾಗೂ ಮಾಲೀಕರ ಸಂಘದ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.