ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಮತ್ತಷ್ಟು ಬಲಗೊಳಿಸಲು ಒತ್ತಾಯ

| Published : Feb 07 2024, 01:51 AM IST

ಸಾರಾಂಶ

ಎಸ್‌ಸಿ ಎಸ್‌ಪಿ/ ಟಿಎಸ್ಪಿ ಕಾಯಿದೆಯಂತೆ ದಲಿತ ಸಮುದಾಯದ ಜನಸಂಖ್ಯೆಗೆ‌ ಅನುಗುಣವಾಗಿ, ಬಜೆಟ್‌ನಲ್ಲಿ ಹಣ ಹಂಚಿಕೆ ‌ಮಾಡಬೇಕು.

ಹೊಸಪೇಟೆ: ನಗರದ ಶ್ರೀ ಸಾಯಿಲೀಲಾ ರಂಗಮಂದಿರದಲ್ಲಿ ದಲಿತ ಹಕ್ಕುಗಳ ಸಮಿತಿಯ (ಡಿಎಚ್ಎಸ್) ಕರ್ನಾಟಕ ರಾಜ್ಯದ 3ನೇ ಸಮಾವೇಶದಲ್ಲಿ ನಾಲ್ಕು ಪ್ರಮುಖ ಹೋರಾಟದ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆಯನ್ನು ಮತ್ತಷ್ಟು ಬಲಗೊಳಿಸುವಂತೆ, ಆ ಮೂಲಕ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು, ತಾಲೂಕು, ಜಿಲ್ಲಾ ‌ಮಟ್ಟದಲ್ಲಿ, ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಸಂವಿಧಾನ ಸಂರಕ್ಷಣೆಗಾಗಿ ಜಾಗೃತಿ ‌ಮೂಡಿಸುವ ಸಲುವಾಗಿ ಮುಂಬರುವ ಏಪ್ರಿಲ್ ತಿಂಗಳಲ್ಲಿ, ರಾಜ್ಯವ್ಯಾಪಿ ವ್ಯಾಪಕವಾಗಿ ಜನಾಂದೋಲನ ನಡೆಸಲು ತೀರ್ಮಾನಿಸಲಾಯಿತು.

ಎಸ್‌ಸಿ ಎಸ್‌ಪಿ/ ಟಿಎಸ್ಪಿ ಕಾಯಿದೆಯಂತೆ ದಲಿತ ಸಮುದಾಯದ ಜನಸಂಖ್ಯೆಗೆ‌ ಅನುಗುಣವಾಗಿ, ಬಜೆಟ್‌ನಲ್ಲಿ ಹಣ ಹಂಚಿಕೆ ‌ಮಾಡಬೇಕು. ಹಂಚಿಕೆಯಾದ ಹಣವನ್ನು ದಲಿತರ ಅಭಿವೃದ್ಧಿಗಾಗಿ ಮಾತ್ರವೇ, ಅಂದರೆ, ಅವರ ಶಿಕ್ಷಣ, ಉದ್ಯೋಗ, ಮತ್ತು ಭೂರಹಿತ ದಲಿತರಿಗೆ, ಭೂಮಿ‌ ಹಂಚಿಕೆ, ವಸತಿ, ನಿವೇಶನರಹಿತ ದಲಿತರಿಗೆ ವಸತಿ, ನಿವೇಶನ‌ ನೀಡಬೇಕು. ಅವರು ವಾಸ ಮಾಡುವ ಪ್ರದೇಶದಲ್ಲಿ, ಮೂಲ ಸೌಕರ್ಯಗಳನ್ನು ಒದಗಿಸಬೇಕು‌. ದಲಿತರ ಆರೋಗ್ಯ ಸಂರಕ್ಷಣೆಗೆ ಸೂಕ್ತ ಪರಿಹಾರ ಒದಗಿಸಲು ಈ ಹಣವನ್ನು ಸಮಗ್ರವಾಗಿ ‌ಬಳಸಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು.

ಖಾಸಗಿ ‌ಕ್ಷೇತ್ರದಲ್ಲಿಯೂ ಕಡ್ಡಾಯವಾಗಿ, ಮೀಸಲಾತಿ ಒದಗಿಸಬೇಕು.‌ ಇದಕ್ಕಾಗಿ ಕಾನೂನು ರೂಪಿಸಲು, ಸಂವಿಧಾನಾತ್ಮಕವಾಗಿ ಸೂಕ್ತ ತಿದ್ದುಪಡಿ ತರಬೇಕೆಂಬ ‌ನಿರ್ಣಯವನ್ನು ಅನುಮೋದಿಸಲಾಯಿತು. ಕರ್ನಾಟಕದಲ್ಲಿ ಜಾತಿಗಣತಿ‌ ಮಾಡಿರುವ ಕಾಂತರಾಜ್‌ ಆಯೋಗದ ಶಿಫಾರಸುಗಳನ್ನು ಸ್ವೀಕರಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

ರಾಜ್ಯ‌ ಸಮಾವೇಶವನ್ನು‌ ಕೇರಳದ ಸಮಾಜ ‌ಕಲ್ಯಾಣ ಮತ್ತು ‌ಮುಜರಾಯಿ ಸಚಿವ ಕೆ. ರಾಧಾಕೃಷ್ಣನ್ ಉದ್ಘಾಟಿಸಿ ಮಾತನಾಡಿ, ಬ್ರಾಹ್ಮಣಶಾಹಿ ಚಿಂತನೆ ಇಂದು ಬಹುಸಂಖ್ಯಾತರನ್ನು ಆಳುತ್ತಿದೆ. ಇದರ ವಿರುದ್ಧ ಪ್ರಬಲ ಹೋರಾಟ ರೂಪುಗೊಳ್ಳಬೇಕು. ಸ್ವಾತಂತ್ರ್ಯ ‌ಬಂದು 77 ವರ್ಷಗಳಾದರೂ ದಲಿತರ ಮೇಲೆ ಅಸ್ಪೃಶ್ಯತಾ ದಾಳಿಗಳು, ದೌರ್ಜನ್ಯಗಳು‌ ನಿಂತಿಲ್ಲ. ಇದಕ್ಕೆ ‌ಮೂಲ ಕಾರಣ ಬ್ರಾಹ್ಮಣ್ಯಶಾಹಿ‌‌‌ ಪ್ರೇರಿತ, ಮನುವಾದ ಮತ್ತು ಚಾತುರ್ವಣದ ಜಾತಿ ವ್ಯವಸ್ಥೆ. ಇದನ್ನು ‌ನಿರ್ಮೂಲನೆ‌ ಮಾಡುವುದೇ ನಮ್ಮ ‌ಮೂಲ‌ಗುರಿ ಎಂದರು.

ಇದುವರೆಗೂ ಅಧಿಕಾರಕ್ಕೆ ಬಂದವರು ದಲಿತರ ಬದುಕನ್ನು ಉತ್ತಮಪಡಿಸಲು ಬೇಕಾದ ಯೋಜನೆಗಳನ್ನು ಜಾರಿಗೆ ತರಲಿಲ್ಲ. ಹಾಗಾಗಿ ದಲಿತರು ತಮ್ಮ ಹಕ್ಕುಗಳಿಗಾಗಿ ಸಂಘಟನೆಗಳನ್ನು ಕಟ್ಟಿಕೊಳ್ಳಬೇಕಿದೆ ಆ ಮೂಲಕ ಹೋರಾಡ ಬೇಕಾದ ಅನಿವಾರ್ಯತೆ ಇದೆ ಎಂದರು.

ಕೇಂದ್ರದಲ್ಲಿ ಹಿಂದುತ್ವದ ಪರವಾದ ಸರ್ಕಾರ ಅಧಿಕಾರದಲ್ಲಿದೆ. ಆರ್‌ಎಸ್‌ಎಸ್‌ ನೇತೃತ್ವದಲ್ಲಿ ನಡೆಯುತ್ತಿರುವ ಈ ಸರ್ಕಾರದ ಅವಧಿಯಲ್ಲಿ ಬಡತನ ಹೆಚ್ಚಾಗಿದೆ. ಇದರಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಂಘ ಪರಿವಾರ ಜನರನ್ನು ಜಾತಿ, ಧರ್ಮಗಳ ಆಧಾರದಲ್ಲಿ ವಿಭಜನೆ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರೀಯ ನಾಟಕ ಅಕಾಡೆಮಿಯ ಮಾಜಿ ನಿರ್ದೇಶಕ ಸಿ‌. ಬಸವಲಿಂಗಯ್ಯ ಮಾತನಾಡಿ, ಪ್ರಸ್ತುತ ಕೇಂದ್ರದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸಂವಿಧಾನದ ಆಶಯಗಳು ಮತ್ತು ಅದರ ಜೀವಾಳವಾದ ಪ್ರಜಾಪ್ರಭುತ್ವ ಮೌಲ್ಯಗಳು, ಸಾಮಾಜಿಕ ನ್ಯಾಯದ ಪರಿಕಲ್ಪನೆಗಳು ಅಪಾಯದಲ್ಲಿ ಸಿಲುಕಿವೆ. ಮೋದಿ ಸರ್ಕಾರವು ಅದಾನಿ, ಅಂಬಾನಿಗಳ ಕೈಗೊಂಬೆಯಾಗಿದೆ ಎಂದು ಆರೋಪಿಸಿದರು.

ಸಮಾವೇಶದ ಕೊನೆಯಲ್ಲಿ ಡಿಎಚ್‌ಎಸ್‌ ಸಂಘಟನೆಗೆ ಹೊಸ ಪದಾಧಿಕಾರಿಗಳನ್ನು ಆಯ್ಜೆ ಮಾಡಲಾಯಿತು. ಅಧ್ಯಕ್ಷರಾಗಿ ಗೋಪಾಲಕೃಷ್ಣ ಹರಳಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ, ಎನ್. ರಾಜಣ್ಣ ಒಮ್ಮತದಿಂದ ಆಯ್ಕೆಯಾದರು. ಮುಖಂಡರಾದ ಯು. ಬಸವರಾಜ, ಆರ್‌.ಎಸ್. ಬಸವರಾಜ, ಜಂಬಯ್ಯ ನಾಯಕ, ತಾಯಪ್ಪ ನಾಯಕ, ಬಿ. ಮಾಳಮ್ಮ, ನಾಗರತ್ನಮ್ಮ ಮತ್ತಿತರರಿದ್ದರು.