ದತ್ತಪೀಠದಲ್ಲಿ ಉರುಸ್‌: ಮುಸ್ಲಿಂ ಸಮುದಾಯದಿಂದ ಬಹಿಷ್ಕಾರ

| Published : Mar 27 2024, 01:03 AM IST

ದತ್ತಪೀಠದಲ್ಲಿ ಉರುಸ್‌: ಮುಸ್ಲಿಂ ಸಮುದಾಯದಿಂದ ಬಹಿಷ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಡಳಿತದ ಆಶ್ರಯದಲ್ಲಿ ದತ್ತಪೀಠದಲ್ಲಿ ಮಂಗಳವಾರ ಆರಂಭಗೊಂಡ ಮೂರು ದಿನಗಳ ಉರುಸ್‌ನ್ನು ಮುಸ್ಲಿಂ ಸಮುದಾಯದವರು ಬಹಿಷ್ಕರಿಸಿದರು.

ಶಾಖಾದ್ರಿ ನೇತೃತ್ವದಲ್ಲಿ ದತ್ತಪೀಠದ ಪ್ರವೇಶ ದ್ವಾರದ ಬಳಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲಾಡಳಿತದ ಆಶ್ರಯದಲ್ಲಿ ದತ್ತಪೀಠದಲ್ಲಿ ಮಂಗಳವಾರ ಆರಂಭಗೊಂಡ ಮೂರು ದಿನಗಳ ಉರುಸ್‌ನ್ನು ಮುಸ್ಲಿಂ ಸಮುದಾಯದವರು ಬಹಿಷ್ಕರಿಸಿದರು.ಶಾಖಾದ್ರಿ ನೇತೃತ್ವದಲ್ಲಿ ದತ್ತಪೀಠದ ಪ್ರವೇಶ ದ್ವಾರದ ಎದುರು ಮುಸ್ಲಿಂ ಸಮುದಾಯದ ಮುಖಂಡರು, ಫಕೀರರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ನೇತೃತ್ವದಲ್ಲಿ ನಡೆಯುತ್ತಿರುವ ಉರುಸ್‌ನಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ವಾಪಸ್‌ ತೆರಳಿದರು.ವಾರ್ಷಿಕ ಉರುಸ್‌ ಶಾಖಾದ್ರಿಗಳ ನೇತೃತ್ವದಲ್ಲಿ ನೂರಾರು ವರ್ಷಗಳ ಸಂಪ್ರದಾಯದಂತೆ ನಡೆಯಬೇಕು ಎಂಬುದು ಮುಸ್ಲಿಂ ಸಮುದಾಯದ ವಾದ, ಕಳೆದ ವರ್ಷದಂತೆ ಈ ಬಾರಿಯೂ ಮಂಗಳವಾರದಂದು ಸಂಜೆ ವೇಳೆಗೆ ಶಾಖಾದ್ರಿ ಹಾಗೂ ಸಮುದಾಯದವರು ದತ್ತಪೀಠಕ್ಕೆ ಸಂದಲ್‌ ಜತೆಗೆ ತೆರಳಿದರು. ಗೋರಿಗಳಿಗೆ ಸಂದಲ್ ಹಚ್ಚಿ ಹೂವುಗಳನ್ನು ಹಾಕಲು ಅನುಮತಿ ನೀಡಬೇಕೆಂದು ಆಗ್ರಹಿಸಿದರು. ಆ ರೀತಿ ಆಚರಣೆಗೆ ಅವಕಾಶ ಇಲ್ಲ, ಗುಹೆಯ ಹೊರ ವಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಮನವರಿಕೆ ಮಾಡಿದರು.ಇದಕ್ಕೆ ಒಪ್ಪದ ಮುಸ್ಲಿಂ ಸಮುದಾಯದವರು, ಹಳೆ ಸಂಪ್ರದಾಯವನ್ನು ಮುರಿಯುತ್ತಿದ್ದೀರಾ, ಜಿಲ್ಲಾಡಳಿತ ನೇತೃತ್ವದಲ್ಲಿ ನಡೆಯುತ್ತಿರುವ ಉರುಸ್‌ ಆಚರಣೆಗೆ ತಮ್ಮ ಸಮ್ಮತಿ ಇಲ್ಲ, ಶಾಖಾದ್ರಿಯವರ ನೇತೃತ್ವದಲ್ಲಿಯೇ ಆಚರಣೆ ಆಗಬೇಕೆಂದು ಪಟ್ಟು ಹಿಡಿದು ಸ್ಥಳದಲ್ಲಿಯೇ ಕುಳಿತರು.

ಶಾಖಾದ್ರಿ, ವಕ್ಫ್‌ ಬೋರ್ಡ್‌ ಚೇರ್ಮನ್ ಮಹಮದ್‌ ಶಹಿದ್‌ ರಿಜ್ವಾನ್‌, ಟಿಪ್ಪು ಸುಲ್ತಾನ್ ಸಂಘದ ಜಿಲ್ಲಾಧ್ಯಕ್ಷ ಜಂಶೀದ್‌ ಖಾನ್‌, ಸರ್ವ ಧರ್ಮ ಪೀಠದ ಸಂಗಮನಂದ ಸ್ವಾಮೀಜಿ, ಕೆ. ಮಹಮದ್‌, ಗೌಸ್‌ ಮುನೀರ್‌ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಜಿಲ್ಲಾಡಳಿತದಿಂದ ಅಭಿಪ್ರಾಯ ತಿಳಿಯುತ್ತಿದ್ದಂತೆ ಸ್ಥಳದಿಂದ ನಿರ್ಗಮಿಸಿದರು.

ಸ್ಥಳದಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಚಿಕ್ಕಮಗಳೂರು ತಹಸೀಲ್ದಾರ್‌ ಡಾ. ಸುಮಂತ್‌, ಜಿಲ್ಲಾ ರಕ್ಷಣಾಧಿ ಕಾರಿ ಡಾ. ವಿಕ್ರಂ ಅಮಟೆ, ಚಿಕ್ಕಮಗಳೂರು ಡಿವೈಎಸ್‌ಪಿ ಶೈಲೇಂದ್ರ, ಉಪ ವಿಭಾಗಾಧಿಕಾರಿ ದಲ್ಜಿತ್‌ಕುಮಾರ್‌ ಇದ್ದರು. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. 26 ಕೆಸಿಕೆಎಂ 8ದತ್ತಪೀಠದಲ್ಲಿ ಶಾಖಾದ್ರಿ ಅವರ ನೇತೃತ್ವದಲ್ಲಿ ಉರುಸ್ ಆಚರಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ದತ್ತಪೀಠದ ಪ್ರವೇಶ ದ್ವಾರದ ಎದುರು ಮುಸ್ಲಿಂ ಸಮುದಾಯದವರು, ಫಕೀರರು ಮಂಗಳವಾರ ಪ್ರತಿಭಟನೆ ನಡೆಸಿದರು.