ಕನ್ನಡಪ್ರಭ ವಾರ್ತೆ ನಾಪೋಕ್ಲು

ಲಯನ್ಸ್ ಕ್ಲಬ್‌ ಸದಸ್ಯರು ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈ ಹೇಳಿದರು.

ಸ್ಥಳಿಯ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಆಶ್ರಯದಲ್ಲಿ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ರಾಜ್ಯಪಾಲರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಳಿಕೆಯ ಒಂದಂಶವನ್ನುಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು. ಸಮಾಜ ಸೇವೆ ಲಯನ್ಸ್ ಕ್ಲಬ್ ಸದಸ್ಯರ ಧ್ಯೇಯೋದ್ದೇಶವಾಗಬೇಕು ಎಂದರು.

ದಕ್ಷಿಣ ಕನ್ನಡದ ಮುಡಿಪುವಿನಲ್ಲಿ 1.5 ಕೋಟಿ ರು. ಅನುದಾನದಲ್ಲಿ ಕ್ಯಾನ್ಸರ್ ತಪಾಸಣಾ ಕೇಂದ್ರವನ್ನು ತಪಸ್ಯ ಫೌಂಡೇಶನ್ ವತಿಯಿಂದ ಸ್ಥಾಪಿಸಲಾಗಿದ್ದು ನಿರ್ವಹಿಸಲಾಗುತ್ತಿದೆ. ವಿವಿಧ ಶಾಲೆಗಳಿಗೆ ಆಹಾರ ಪೂರೈಕೆ ಮಾಡುವ ಉದ್ದೇಶದಿಂದ ಆಹಾರ ಸಾಗಾಟ ವಾಹನವನ್ನು ಒಂದು ಕೋಟಿ ರು. ವೆಚ್ಚದಲ್ಲಿ ಒದಗಿಸಲಾಗಿದೆ. ಕೊಡಗು ಜಿಲ್ಲೆಯ ಗೋಣಿಕೊಪ್ಪಲುವಿನಲ್ಲಿ ಶಾಲಾ ಆಟದ ಮೈದಾನ ನಿರ್ಮಾಣಕ್ಕೆ ಒಂದು ಕೋಟಿ ರು.ಅನುದಾನವನ್ನು ಒದಗಿಸಲಾಗಿದೆ ಎಂದರು.

ಅವರು ಲಿಯೋ ಕ್ಲಬ್‌ಗೆ ಸೇರ್ಪಡೆಯಾದ ಸ್ಥಳಿಯ ಅಂಕುರ್ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ಪಾರಾಣೆ ಪ್ರೌಢಶಾಲೆಗೆ ಮೂರು ಗ್ರೀನ್ ಬೋರ್ಡ್ ಗಳಿಗೆ ಧನ ಸಹಾಯ ವಿತರಿಸಲಾಯಿತು ಮತ್ತು ಕ್ಲಬ್‌ನ ಹಿರಿಯ ಸದಸ್ಯರಿಗೆ ಅರ್ಹತಾ ಪತ್ರವನ್ನು ವಿತರಿಸಲಾಯಿತು.


ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಮಾದೆಯಂಡ ಬಿ. ಕುಟ್ಟಪ್ಪ ಅಧ್ಯಕ್ಷತೆವಹಿಸಿದ್ದರು. ಶೈಲಾ ಭೀಮಯ್ಯ ಪ್ರಾರ್ಥನೆ ಹಾಡಿದರು. ಬಿದ್ದಾಟoಡ ಮೇರಿ ಚಿಟ್ಟಿಯಪ್ಪ ಧ್ವಜವಂದನೆ ನೆರವೇರಿಸಿದರು. ಕೇಟೋಳಿರ ರತ್ನ ಚರ್ಮನ ಅತಿಥಿಗಳ ಪರಿಚಯ ಮಾಡಿದರು.

ಲಯನ್ಸ್‌ ಪ್ರಾಂತ್ಯ ಅಧ್ಯಕ್ಷ ಕೋಟೆರ ಡಾ. ಪಂಚಂ ತಿಮ್ಮಯ್ಯ, ಲಯನ್ಸ್ ವಲಯ ಅಧ್ಯಕ್ಷರಾದ ಬಿಂದು ಗಣಪತಿ, ಚೆಟ್ಟಿ ಮಾಡ ಟಿ. ಅಪ್ಪಣ್ಣ, ಪಿರಿಯಾಪಟ್ಟಣ ಲೈನ್ಸ್ ಅಧ್ಯಕ್ಷ ಜೆ. ಗಿರೀಶ್ ಸಹ ಕಾರ್ಯದರ್ಶಿ ಸುಮನ್ ಬಾಲಚಂದ್ರ, ನಾಪೋಕ್ಲು ಲಯನ್ಸ್ ಕ್ಲಬ್ ಕಾರ್ಯದರ್ಶಿ ಅಪ್ಪಚೆಟ್ಟೋಳoಡ ಬನ್ಸಿ ಭೀಮಯ್ಯ, ಖಜಾಂಚಿ ಅಪ್ಪಚೆಟ್ಟೋಳoಡ ವಸಂತ ಮುತ್ತಪ್ಪ, ಎಸ್. ಆನಂದ್, ಲಿಯೋ ಕ್ಲಬ್‌ ಅಧ್ಯಕ್ಷೆ ಕನ್ನಿಕಾ ಮತ್ತಿತರರಿದ್ದರು.