ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದ ಕೃಷಿ ಮತ್ತು ಜಲಸಂಪನ್ಮೂಲಗಳ ಮೇಲೆ ಒತ್ತಡ ಉಂಟಾಗಿದೆ. ಮುಂಬರುವ ಅವಧಿಯಲ್ಲಿ ಎಲ್ನಿನೋ ಪರಿಣಾಮದಿಂದ ಉಷ್ಣಾಂಶ ಹೆಚ್ಚಳ, ಆವಿಯಾಗುವಿಕೆ ಪ್ರಮಾಣದಲ್ಲಿ ಏರಿಕೆ ಹಾಗೂ ಮಳೆಯ ಅನಿಶ್ಚಿತತೆ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಲಭ್ಯವಿರುವ ನೀರನ್ನು ಅತ್ಯಂತ ವಿವೇಚನೆಯಿಂದ ಬಳಸುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅವರು ರೈತರು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆಬಾಗಲಕೋಟೆಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದ ಕೃಷಿ ಮತ್ತು ಜಲಸಂಪನ್ಮೂಲಗಳ ಮೇಲೆ ಒತ್ತಡ ಉಂಟಾಗಿದೆ. ಮುಂಬರುವ ಅವಧಿಯಲ್ಲಿ ಎಲ್ನಿನೋ ಪರಿಣಾಮದಿಂದ ಉಷ್ಣಾಂಶ ಹೆಚ್ಚಳ, ಆವಿಯಾಗುವಿಕೆ ಪ್ರಮಾಣದಲ್ಲಿ ಏರಿಕೆ ಹಾಗೂ ಮಳೆಯ ಅನಿಶ್ಚಿತತೆ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಲಭ್ಯವಿರುವ ನೀರನ್ನು ಅತ್ಯಂತ ವಿವೇಚನೆಯಿಂದ ಬಳಸುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅವರು ರೈತರು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದರು.ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಮತ್ತು ಪ್ರಮುಖ ಜಲಾಶಯಗಳಿದ್ದರೂ, ಮುಂದಿನ ಬೇಸಿಗೆಯ ಕುಡಿಯುವ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಲಭ್ಯವಿರುವ ನೀರನ್ನು ಮಿತವಾಗಿ ಬಳಸುವುದು ಅಗತ್ಯವಾಗಿದೆ. ಈಗಾಗಲೇ ಬೆಳೆದಿರುವ ಬೆಳೆಗಳಿಗೆ ಲಭ್ಯವಿರುವ ನೀರನ್ನು ಮಿತವಾಗಿ ಹಾಗೂ ಸಮರ್ಪಕವಾಗಿ ಬಳಸಬೇಕು. ಹನಿ ನೀರಾವರಿ, ತುಂತುರು ನೀರಾವರಿ ಸೇರಿದಂತೆ ನೀರು ಉಳಿಸುವ ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ಜಿಲ್ಲೆಯಲ್ಲಿ ಅಂದಾಜು 16 ಲಕ್ಷ ಜಾನುವಾರುಗಳಿದ್ದು, ಅವು ರೈತರ ಜೀವನೋಪಾಯದ ಪ್ರಮುಖ ಆಧಾರವಾಗಿವೆ. ಹಸು, ಎಮ್ಮೆ, ಎತ್ತು, ಕುರಿ ಹಾಗೂ ಮೇಕೆ ಸೇರಿದಂತೆ ಜಾನುವಾರುಗಳಿಗೆ ಅಗತ್ಯ ಪ್ರಮಾಣದ ಕುಡಿಯುವ ನೀರು ದೊರೆಯುವಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ನೀರಿನ ಅಭಾವದಿಂದ ಜಾನುವಾರುಗಳು ತೊಂದರೆ ಅನುಭವಿಸದಂತೆ ಜಲಮೂಲಗಳನ್ನು ಸಂರಕ್ಷಿಸಬೇಕಾಗಿದೆ. ಕುಡಿಯುವ ನೀರನ್ನು ವಾಹನ ತೊಳೆಯಲು, ಮನೆಗಳ ಅಂಗಳ ಹಾಗೂ ರಸ್ತೆಗಳನ್ನು ಸ್ವಚ್ಛಗೊಳಿಸಲು ಬಳಸಬಾರದು. ಕಟ್ಟಡ ನಿರ್ಮಾಣ ಸೇರಿದಂತೆ ಅನಗತ್ಯ ಉದ್ದೇಶಗಳಿಗೆ ಕುಡಿಯುವ ನೀರು ಬಳಸುವುದನ್ನು ತಪ್ಪಿಸಬೇಕು. ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಗಳಿಗೆ ಸಾಧ್ಯವಾದಷ್ಟು ಪರ್ಯಾಯ ನೀರಿನ ಮೂಲಗಳನ್ನು ಬಳಸಬೇಕು. ಮನೆಗಳ ನಲ್ಲಿಗಳನ್ನು ಅನಗತ್ಯವಾಗಿ ತೆರೆದಿಡದಂತೆ ಹಾಗೂ ನೀರಿನ ಟ್ಯಾಂಕ್ಗಳನ್ನು ತುಂಬಿ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕ ನಲ್ಲಿಗಳು ಮತ್ತು ಪೈಪ್ಲೈನ್ಗಳಲ್ಲಿ ನೀರು ಸೋರಿಕೆಯಾಗುತ್ತಿರುವುದು ಕಂಡುಬಂದಲ್ಲಿ ತಕ್ಷಣ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಗಮನಕ್ಕೆ ತರಲು ತಿಳಿಸಿದರು. ಜಿಲ್ಲಾಡಳಿತವು ಕುಡಿಯುವ ನೀರಿನ ಲಭ್ಯತೆ ಹಾಗೂ ಪೂರೈಕೆಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದು, ಗ್ರಾಮವಾರು ಹಾಗೂ ವಾರ್ಡ್ವಾರು ಕ್ರಿಯಾ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿನ್ ಅಹಿರೇ, ಕೃಷಿ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ತೋಟಗಾರಿಕೆ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ.ಎಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುವರ್ಣ ಕುಲಕರ್ಣಿ, ಪಶು ಇಲಾಖೆಯ ಉಪ ನಿರ್ದೇಶಕ ಎಸ್.ಎಚ್.ಕರಡಿಗುಡ್ಡ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.------ಕೋಟ್ವಾರದ ಎರಡು ದಿನ ಬುಧವಾರ ಮತ್ತು ರವಿವಾರ ನದಿ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು, ಸಾರ್ವಜನಿಕರು, ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು ಹಾಗೂ ಸಂಘ-ಸಂಸ್ಥೆಗಳು ನೀರಿನ ಸಂರಕ್ಷಣಾ ಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು. ಪ್ರಸ್ತುತ ನೀರಿನ ಲಭ್ಯತೆ ಹಾಗೂ ಮುಂದಿನ ದಿನಗಳ ಕುಡಿಯುವ ನೀರಿನ ಅಗತ್ಯವನ್ನು ಪರಿಗಣಿಸಿ, ರೈತರು ಹೊಸದಾಗಿ ಕಬ್ಬು, ಭತ್ತ ಸೇರಿದಂತೆ ಹೆಚ್ಚಿನ ಪ್ರಮಾಣದ ನೀರು ಬೇಡುವ ಬೆಳೆಗಳನ್ನು ನಾಟಿ ಮಾಡಬಾರದು.ಸಂಗಪ್ಪ, ಜಿಲ್ಲಾಧಿಕಾರಿಗಳು.