ಸಾರಾಂಶ
ರಾಣಿಬೆನ್ನೂರು: ರೈತರು ಹೀರೆಕಾಯಿ ಬೆಳೆಯಲ್ಲಿ ಬರುವ ಕಾಯಿಕೊರಕದ ನಿರ್ವಹಣೆಗೆ ಮೋಹಕ ಬಲೆಗಳನ್ನು ಬಳಸುವುದರಿಂದ ಕೀಟನಾಶಕಗಳ ಬಳಕೆಯ ಪ್ರಮಾಣವನ್ನು ಕಡಿಮೆಗೊಳಿಸಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಎ.ಎಚ್. ಬಿರಾದಾರ ತಿಳಿಸಿದರು.ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಂದ ಶಿಗ್ಗಾಂವಿ ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ಶಿವಪ್ಪ ಸೊರಟೂರ ಇವರ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಹೀರೆಕಾಯಿ ಬೆಳೆಯ ಸಮಗ್ರ ನಿರ್ವಹಣೆ ಕುರಿತು ಕ್ಷೇತ್ರೋತ್ಸವದಲ್ಲಿ ಮಾತನಾಡಿದರು. ಸೈಯಾಜಿಪೈಯರ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ 1.8 ಮಿಲೀ ಬೆರೆಸಿ ಸಿಂಪಡಿಸುವುದರಿಂದ ಕಾಯಿಕೊರಕದ ಬಾಧೆಯನ್ನು ನಿರ್ವಹಣೆ ಮಾಡಬಹುದು ಎಂದರು. ತೋಟಗಾರಿಕೆ ವಿಜ್ಞಾನಿ ಡಾ. ಸಂತೋಷ ಎಚ್.ಎಂ. ಮಾತನಾಡಿ, ಅರ್ಕಾ ವಿಕ್ರಮ ಹೀರೆಕಾಯಿ ಸಂಕರಣ ತಳಿಯ ಕಾಯಿಗಳು ಹಸಿರು ಬಣ್ಣವನ್ನು ಹೊಂದಿದ್ದು, 30ರಿಂದ 45 ಸೆಂಮೀ ಉದ್ದದ ಕಾಯಿಗಳನ್ನು ನೀಡುತ್ತವೆ. ಪ್ರತಿ ಎಕರೆಗೆ 13ರಿಂದ 14 ಟನ್ ಇಳುವರಿಯನ್ನು 120ರಿಂದ 135 ದಿನಗಳಲ್ಲಿ ಪಡೆಯಬಹುದು. ಈ ಬೆಳೆಯ ಸಮಗ್ರ ನಿರ್ವಹಣೆಗೆ ಮಣ್ಣು ಪರೀಕ್ಷೆಯ ಮೂಲಕ ಪೋಷಕಾಂಶಗಳ ನಿರ್ವಹಣೆ ಅತ್ಯಗತ್ಯ. ಕೊಟ್ಟಿಗೆ ಗೊಬ್ಬರ ಪ್ರತಿ ಎಕರೆಗೆ 10 ಟನ್ ಬಳಸಿ, ಬಳ್ಳಿಗೆ ಕುಡಿ ಚಾಚುವ ಸಮಯದಲ್ಲಿ ಆಧಾರ ಒದಗಿಸುವುದರಿಂದ ಉತ್ತಮ ಇಳುವರಿ ಪಡೆಯಬಹುದು.
ಈ ಬೆಳೆಯಲ್ಲಿ ಪ್ರಮುಖವಾಗಿ ಬೂಜು ತುಪ್ಪಟ ರೋಗ ಕಾಣಿಸಿಕೊಳ್ಳುವುದರಿಂದ ಸೈಮೋಕ್ಸಾನಿಲ್(ಶೇ. 8) ಮತ್ತು ಮ್ಯಾಂಕೋಜೆಬ್(ಶೇ. 64) ಡಬ್ಲ್ಯುಪಿಯನ್ನು ಪ್ರತಿ ಲೀಟರ್ ನೀರಿಗೆ 2.0 ಗ್ರಾಂನಂತೆ ಬೆರೆಸಿ ರೋಗದ ಆರಂಭಿಕ ಹಂತದಲ್ಲಿ ಸಿಂಪಡಿಸಬೇಕು ಎಂದರು. ಬೈಪ್ ಸಂಸ್ಥೆ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಜಿ.ಎಸ್. ಹೆಗ್ಡೆ ಮಾತನಾಡಿ, ಇತ್ತೀಚೆಗೆ ಸಾಕಷ್ಟು ರೈತರು ಹೀರೆಕಾಯಿ ಬೆಳೆಯನ್ನು ಈ ಭಾಗದಲ್ಲಿ ಬೆಳೆಯುತ್ತಿದ್ದು, ಅದಕ್ಕೆ ರಾಸಾಯನಿಕ ಔಷಧಿಗಳ ಸಿಂಪರಣೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಇದರ ಪರ್ಯಾಯವಾಗಿ ಬೇವಿನ ಎಣ್ಣೆ ಮತ್ತು ಇತರೆ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ರೈತ ಶಿವಪ್ಪ ಸೊರಟೂರ ಮಾತನಾಡಿ, ಅಧಿಕವಾದ ಮಳೆಯಿಂದ ಬೂಜು ತುಪ್ಪಟ ರೋಗದ ಬಾಧೆ ಅಧಿಕವಾಗಿ ಕಂಡುಬಂದಿದೆ. ಸ್ಥಳೀಯ ತಳಿಗೆ ಹೊಲಿಸಿದರೆ ಅರ್ಕಾ ವಿಕ್ರಮ ಸಂಕರಣ ಹೀರೆಕಾಯಿ ತಳಿಯು ಅಲ್ಪಾವಧಿಯಲ್ಲಿ ಅಧಿಕ ಕಾಯಿಗಳನ್ನು ಕಚ್ಚುತ್ತದೆ ಎಂದು ಪ್ರಾತ್ಯಕ್ಷಿಕೆಯ ಅನುಭವವನ್ನು ಹಂಚಿಕೊಂಡರು. ನಬಾರ್ಡ್ ಅನುದಾನಿತ ಶ್ರೀ ಬಸವೇಶ್ವರ ಜಲಾನಯನ ಅಭಿವೃದ್ಧಿ ಸಂಘದ ಅಧ್ಯಕ್ಷ ಶಿವಪ್ಪ ಬಿಸ್ಟಣ್ಣನವರ, ಪಶು ವಿಜ್ಞಾನಿ ಡಾ. ಮಹೇಶ ಕಡಗಿ ಮಾತನಾಡಿದರು. ಕ್ಷೇತ್ರೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸುಮಾರು 45 ರೈತರು ಭಾಗವಹಿಸಿದ್ದರು.