ಸ್ವಸಹಾಯ ಸಂಘಗಳಿಗೆ ಬ್ಯಾಂಕ್ ಗಳು ನೇರ ಸಾಲ ನೀಡುತ್ತಿವೆ. ಸಂಘಗಳ ಉಳಿತಾಯದ ನಾಲ್ಕು ಪಟ್ಟು ಹಾಗು ಅದಕ್ಕಿಂತ ಹೆಚ್ಚು ಮೊತ್ತದ ಸಾಲವನ್ನು ಜಾಮೀನು ರಹಿತವಾಗಿ ನೀಡಲಾಗುತ್ತಿದೆ. ಇದು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿದೆ. ಗ್ರಾಮೀಣ ಮಹಿಳೆಯರಿಗೆ ಆರ್‌ಬಿಐನಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಬ್ಯಾಂಕ್‌ಗಳು ನೀಡುವ ಸಾಲವನ್ನು ಆದಾಯೋತ್ಪನ್ನ ಚಟುವಟಿಕೆಗಳಿಗೆ ಬಳಸಿ ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳಬೇಕು ಎಂದು ಆರ್‌ಬಿಐನ ಸಹಾಯಕ ಮಹಾ ಪ್ರಬಂಧಕರಾದ ನಿಶಾ ಠಾಕೂರ್ ಮಹಿಳೆಯರು ಸಲಹೆ ನೀಡಿದರು.ತಾಲೂಕಿನ ಮಂಗಲ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಸಹಯೋಗದಲ್ಲಿ ನಡೆದ ಸ್ವ ಸಹಾಯ ಸಂಘದ ಮಹಿಳೆಯರಿಗೆ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸ್ವಸಹಾಯ ಸಂಘಗಳಿಗೆ ಬ್ಯಾಂಕ್ ಗಳು ನೇರ ಸಾಲ ನೀಡುತ್ತಿವೆ. ಸಂಘಗಳ ಉಳಿತಾಯದ ನಾಲ್ಕು ಪಟ್ಟು ಹಾಗು ಅದಕ್ಕಿಂತ ಹೆಚ್ಚು ಮೊತ್ತದ ಸಾಲವನ್ನು ಜಾಮೀನು ರಹಿತವಾಗಿ ನೀಡಲಾಗುತ್ತಿದೆ. ಇದು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿದೆ. ಗ್ರಾಮೀಣ ಮಹಿಳೆಯರಿಗೆ ಆರ್‌ಬಿಐನಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಅರುಣ್ ಕುಮಾರ್ ಮಾತನಾಡಿ, ಸ್ವಸಹಾಯ ಸಂಘಗಳು ಪಂಚತಂತ್ರ ಸೂತ್ರಗಳ ಮೂಲಕ ನಿರಂತರ ಉಳಿತಾಯ ಸಭೆ, ಆಂತರಿಕ ಸಾಲ ಪಾವತಿ ಹಾಗೂ ದಾಖಲಾತಿಗಳ ನಿರ್ವಹಣೆ ಕಡೆ ಹೆಚ್ಚು ಗಮನ ಕೊಟ್ಟು ಉತ್ತಮ ಸಂಘವಾಗಿ ಆರ್ಥಿಕ ಶಿಸ್ತು ಅಳವಡಿಸಿಕೊಳ್ಳಬೇಕು ಎಂದರು.ಮಹಿಳೆಯರು ಕುಟುಂಬದ ಆರ್ಥಿಕ ಚಟುವಟಿಕೆಗಳಲ್ಲಿರುವ ಕಾರಣ ಅವರಿಗೂ ವಿಮೆ ಅನಿವಾರ್ಯ. ಸಾಮಾಜಿಕ ಭದ್ರತೆಗಾಗಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಭೀಮ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆಯಲ್ಲಿ ನೋಂದಾಯಿಸಬೇಕು ಎಂದರು.
ಆರ್ಥಿಕ ಸಾಕ್ಷರತಾ ಸಮಾಲೋಚಕಿ ಕೆ.ಪಿ.ಅರುಣ ಕುಮಾರಿ ಮಾತನಾಡಿ, ಕಳೆದ 22 ವರ್ಷಗಳಲ್ಲಿ ಬಂದ ಸ್ವಸಹಾಯ ಸಂಘಗಳಿಂದ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಿ ಜೀವನ ನಡೆಸುತ್ತಿದ್ದಾರೆ. ಅವರ ಜೀವನ ಮಟ್ಟ ಸುಧಾರಣೆಗೆ ಸ್ವ ಸಹಾಯ ಸಂಘಗಳು ಸಹಕಾರಿ ಎಂದರು.ಮಹಿಳೆಯರಲ್ಲಿ ಆರ್ಥಿಕ ಶಿಸ್ತು ಉತ್ತಮ. ಕಡಿಮೆ ಬಡ್ಡಿ ದರದಲ್ಲಿ ಜಾಮೀನು ರಹಿತ ಸಾಲ ಪಡೆಯುವ ಮೂಲಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆದಾಯ ಚಟುವಟಿಕೆಗಳನ್ನು ಕೈಗೊಳ್ಳಲು ಬ್ಯಾಂಕ್ ನೇರ ಸಾಲ ನೀಡಲಾಗುತ್ತಿದೆ. ಸಂಜೀವಿನಿ ಯೋಜನೆಯಲಿ ಸಂಘಗಳ ನೋಂದಣಿ, ಎಲ್ಲಾ ಮಹಿಳೆಯರು ಬ್ಯಾಂಕ್ ನಲ್ಲಿ ವ್ಯವಹಾರ, ಕೆವೈಸಿ, ಮೊಬೈಲ್ ನೊಂದಣಿ ಮತ್ತು ಆಧಾರ್ ಜೋಡಣೆ ಅವಶ್ಯಕತೆ ಹಾಗೂ ನಾಮಿನಿ ನೀಡುವ ಬಗ್ಗೆ ತಿಳಿಸಿದರು.
ಆರ್‌ಬಿಐ ನಮ್ಮ ಹಣ ನಮ್ಮ ಹಕ್ಕು ಘೋಷಣೆಯೊಂದಿಗೆ ಯಾವುದೇ ರೀತಿಯ ಡಿಪಾಸಿಟ್ ಹಣ ಬ್ಯಾಂಕಿನಲ್ಲೇ ಉಳಿದಿದ್ದರೆ ಅದನ್ನು ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ಸೈಬರ್ ವಂಚನೆಯಿಂದ ಮಹಿಳೆಯರು ಜಾಗೃತರಾಗಬೇಕು ಎಂಬ ಮಾಹಿತಿ ನೀಡಿದರು.ಬ್ಯಾಂಕ್ ಆಫ್ ಬರೋಡಾ ಸ್ವ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಪ್ರಸನ್ನ ಕುಮಾರ್ ಉಚಿತ ಕೌಶಲ್ಯ ಮತ್ತು ಉದ್ಯಮಶೀಲತ ತರಬೇತಿ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಸೊಸೈಟಿ ಅಧ್ಯಕ್ಷೆ ಸುಜಾತ, ಪಿಡಿಒ ಕೃಷ್ಣೇಗೌಡ ಹಾಗೂ ಪರಿಸರ ಸಂಸ್ಥೆ ಅಧ್ಯಕ್ಷ ಯೋಗೀಶ್ ಉಪಸ್ಥಿತರಿದ್ದರು. ಇದೇ ವೇಳೆ ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಂಗಲ ಗ್ರಾಪಂ ವ್ಯಾಪ್ತಿಯ ಅಂಗನವಾಡಿ, ಆಶಾ ಹಾಗೂ ಸಂಜೀವಿನಿ ಒಕ್ಕೂಟದ ಕಾರ್ಯಕರ್ತರು ಮತ್ತು ಗ್ರಾಪಂ ಮಹಿಳಾ ಸಿಬ್ಬಂದಿ ವರ್ಗ ಸೇರಿ ಸಮುದಾಯ ಕಾರ್ಯಕರ್ತರಿಗೆ ಸಸ್ಯ ಸನ್ಮಾನ ಮಾಡಲಾಯಿತು.