ಸಾರಾಂಶ
ನಾವು ಸೇವಿಸುವ ಆಹಾರ ಗುಣಮಟ್ಟದ್ದಾಗಿಲ್ಲ. ಹಿಂದಿನ ಸಾಂಪ್ರದಾಯಿಕ ಆಹಾರ ಬಳಸುವ ಅವಶ್ಯಕತೆ ಇದೆ. ಸಿರಿಧಾನ್ಯ ಆಹಾರ ಸಾಂಪ್ರದಾಯಿಕ ಆಹಾರ ಆಗಿದ್ದು ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಗದಗ: ಸಿರಿಧಾನ್ಯಗಳು ಭವಿಷ್ಯದ ಆಹಾರವಾದಲ್ಲಿ ಮಾತ್ರ ಸದೃಢ ದೇಶ ಕಟ್ಟಲು ಸಾಧ್ಯ ಎಂದು ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ಸಾಯಿ ನಗರದಲ್ಲಿ ಶ್ರೀ ಧರ್ಮಸ್ಥಳ ಸಿರಿ ಮಿಲೆಟ್ ಹೌಸ್ ಉದ್ಘಾಟಿಸಿ ಮಾತನಾಡಿದರು.ಡಾ. ವೀರೇಂದ್ರ ಹೆಗ್ಗಡೆ ಅವರು ಯೋಜನೆಯ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಿ, ಸಿರಿಧಾನ್ಯಗಳನ್ನು ಬೆಳೆಸಿ ಆಹಾರವಾಗಿ ನೀಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ನಾವು ಸೇವಿಸುವ ಆಹಾರ ಗುಣಮಟ್ಟದ್ದಾಗಿಲ್ಲ. ಹಿಂದಿನ ಸಾಂಪ್ರದಾಯಿಕ ಆಹಾರ ಬಳಸುವ ಅವಶ್ಯಕತೆ ಇದೆ. ಸಿರಿಧಾನ್ಯ ಆಹಾರ ಸಾಂಪ್ರದಾಯಿಕ ಆಹಾರ ಆಗಿದ್ದು ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಧರ್ಮಸ್ಥಳ ಯೋಜನೆಯ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಜೆ. ಮಾತನಾಡಿ, ಅಕ್ಕಿ ತಿಂದವರು ಹಕ್ಕಿಯಂತೆ ಹಾರಬಲ್ಲರು, ರಾಗಿ ತಿಂದವರು ನಿರೋಗಿ ಆಗುವವರು ಎಂಬ ಮಾತಿದೆ. ಮಕ್ಕಳಿಗೆ ಸಿರಿಧಾನ್ಯ ಉತ್ಪನ್ನ ಬಳಕೆ ಮಾಡಿ ಮಕ್ಕಳ ಭವಿಷ್ಯ ರೂಪಿಸಿ, ಪಂಚ ರತ್ನ ಸಿರಿಧಾನ್ಯ ಬಳಕೆಯಿಂದ ಕುಟುಂಬದ ಆರೋಗ್ಯ ರಕ್ಷಣೆ ಮಾಡಬಹುದು. ಸಿರಿಧಾನ್ಯ ಉತ್ಪನ್ನಗಳನ್ನು ನಿಮ್ಮ ಮನೆ ಬಾಗಿಲಿಗೆ ಮುಟ್ಟಿಸುವ ಕಾರ್ಯ ಸಿರಿಮನೆಯಿಂದ ಆಗುತ್ತದೆ ಎಂದು ತಿಳಿಸಿದರು.ಸಿರಿ ಮಿಲೆಟ್ ನಿರ್ದೇಶಕ ದಿನೇಶ್ ಎಂ. ಮಾತನಾಡಿ, ಡಾ. ಹೆಗ್ಗಡೆ ಅವರು, ಮಾತೃಶ್ರೀ ಅಮ್ಮನವರ ಆಶಯ ಪೌಷ್ಟಿಕಾಂಶಭರಿತ ಸಿರಿಧಾನ್ಯಗಳನ್ನು ಬೆಳೆಸುವಂತೆ ರೈತರಿಗೆ ಪ್ರೋತ್ಸಾಹ ನೀಡುವುದು. ರೈತರಿಗೆ ಯೋಗ್ಯ ಬೆಲೆ ನೀಡುವುದು, ಸಮಾಜಕ್ಕೆ ಪೌಷ್ಟಿಕಯುತ ಆಹಾರ ಒದಗಿಸುವುದು, ಈ ಮೂಲಕ ಆರೋಗ್ಯ ಭದ್ರತೆ ಒದಗಿಸುವುದಾಗಿದೆ ಎಂದರು.
ರೋಟರಿ ಸೋಶಿಯಲ್ ಮತ್ತು ಕಲ್ಚರ್ ಅಧ್ಯಕ್ಷ ವಿ.ಕೆ. ಗುರುಮಠ, ಜಿಲ್ಲಾ ನಿರ್ದೇಶಕ ಯೋಗೀಶ್ ಎ., ಯೋಜನಾಧಿಕಾರಿ ಸುರೇಂದ್ರ ನಾಯ್ಕ, ಮಾಲತೇಶ, ಸಿದ್ದರಾಮಪ್ಪ ಮಡಿವಾಳರ, ಶರಣಪ್ಪ, ಮಂಜುಳಾ, ಶಿಲ್ಪಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.