ಸ್ಪರ್ಧೆ ಪ್ರತಿಭೆ ಅನಾವರಣಕ್ಕೆ ಬಳಸಿ: ಡಾ. ಡಿ. ದೇವರಾಜ್

| Published : Apr 28 2025, 12:47 AM IST

ಸ್ಪರ್ಧೆ ಪ್ರತಿಭೆ ಅನಾವರಣಕ್ಕೆ ಬಳಸಿ: ಡಾ. ಡಿ. ದೇವರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಬಿ. ಟಿ. ಚನ್ಮಯ್ಯ ಗೌರಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಮತ್ತು ಕಲಾ ವಿಭಾಗಗಳ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಅಂತರ ಕಾಲೇಜು ಕಲ್ಚರಲ್‌ ಫೆಸ್ಟಿವಲ್‌ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಇಲ್ಲಿನ ಬಿ.ಟಿ. ಚನ್ನಯ್ಯ ಗೌರಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಮತ್ತು ಕಲಾ ವಿಭಾಗಗಳ ಸಹಯೋಗದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಅಂತರ ಕಾಲೇಜು ಕಲ್ಚರಲ್ ಫೆಸ್ಟ್ 2025 ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕರಾದ ಡಾ. ಡಿ. ದೇವರಾಜ್ ಅವರು ಉದ್ಘಾಟಿಸಿದರು. ನಂತರ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಪೂರಕವಾದ ಇಂತಹ ಕಾರ್ಯಕ್ರಮಗಳು ಶಾಲಾ ಕಾಲೇಜುಗಳಲ್ಲಿ ಹೆಚ್ಚಾಗಿ ಆಯೋಜನೆಗೊಂಡಲ್ಲಿ, ಸಾಕಷ್ಟು ಪ್ರತಿಭೆಗಳಿಗೆ ತಮ್ಮಲ್ಲಿನ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗುವುದು. ಇಂತಹ ವೇದಿಕೆಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕಿದೆ. ಸ್ಪರ್ಧೆಗಳಲ್ಲಿ ಯಾವುದೇ ಬಹುಮಾನ ಪಡೆಯಲು ಮಾತ್ರ ಬಳಸಿಕೊಳ್ಳದೆ, ತಮ್ಮ ಪ್ರತಿಭೆ ಅನಾವರಣಕ್ಕೆ ಬಳಸಿಕೊಳ್ಳಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ಬಿ.ಡಿ. ಹರ್ಷ ಮಾತನಾಡಿ, ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ ಸಿಗದ ಕಾರಣ, ಎಲೆ ಮರೆಯ ಕಾಯಿಯಂತೆ ಇರುತ್ತಾರೆ. ತಮ್ಮ ಪ್ರತಿಭೆ ಅನಾವರಣಕ್ಕೆ ಯಾವುದೇ ಅಂಜಿಕೆ ಇಲ್ಲದೆ, ಎಲ್ಲಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಕೆ.ಎ. ಯಾಕೂಬ್ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವ್ಯಸನಗಳ ಬಗೆಗೆ ಎಚ್ಚರದಿಂದ ಇರಬೇಕಾಗಿದೆ. ಇದರ ಬಲೆಗೆ ಬಿದ್ದರೆ, ತಮ್ಮನ್ನು ನಾಶ ಮಾಡುವುದರೊಂದಿಗೆ, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತದೆ ಎಂದು ಎಚ್ಚರಿಸಿದರು.

ಇದೇ ಸಂದರ್ಭ ನಿವೃತ್ತ ಪ್ರಾಂಶುಪಾಲರಾದ ಬಿ.ಎಮ್. ಪ್ರವೀಣ್ ಅವರನ್ನು ಸನ್ಮಾನಿಸಲಾಯಿತು. ಸಿಡಿಸಿ ಸದಸ್ಯರಾದ ರಜಾಕ್ ಮತ್ತು ಸುರೇಂದ್ರ, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಎಚ್. ಹುಚ್ಚೇಗೌಡ, ಸಂಯೋಜಕರಾದ ಎಂ.ಎಂ. ಸುನೀತ, ಸಹಾಯಕ ಪ್ರಾಧ್ಯಾಪಕರಾದ ಎಂ.ಎಸ್. ಶಿವಮೂರ್ತಿ, ವಿದ್ಯಾರ್ಥಿಗಳಾದ ನಾಸಿರ್, ಭವ್ಯ, ಐಶ್ವರ್ಯ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಸಾಮೂಹಿಕ ನೃತ್ಯ, ಟ್ರೆಸರ್ ಹಂಟರ್, ಫೇಸ್ ಪೇಂಟಿಂಗ್ ಮತ್ತು ವಿಡಿಯೋಗ್ರಫಿ ಎಂಬ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದು, ಹತ್ತು ಕಾಲೇಜುಗಳ 14 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅಂತಿಮವಾಗಿ ಮಡಿಕೇರಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಚಾಂಪಿಯನ್ ಮತ್ತು ವಿರಾಜಪೇಟೆಯ ಕಾಲೇಜು ರನ್ನರ್ ಅಪ್ ಆಗಿ ಹೊರಹೊಮ್ಮಿದವು.