ವೈಟ್‌ಕಾಲರ್‌ ಭಯೋತ್ಪಾದನೆ ಹೆಚ್ಚಾಗುತ್ತಿರುವ ಇವತ್ತಿನ ಸಂದರ್ಭದಲ್ಲಿ ಶಿಕ್ಷಣ ಯಾವ ದಿಕ್ಕಿನತ್ತ ಸಾಗುತ್ತಿದೆ ಎನ್ನುವ ಕುರಿತು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ವಿದ್ಯೆಯನ್ನು ದೇಶ ಕಟ್ಟುವ ಕೆಲಸಕ್ಕೆ ಬಳಸಿಕೊಳ್ಳಬೇಕೆ ಹೊರತು ಸಮಾಜ ಒಡೆಯಲು ಅಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಸಾಗರ: ವೈಟ್‌ಕಾಲರ್‌ ಭಯೋತ್ಪಾದನೆ ಹೆಚ್ಚಾಗುತ್ತಿರುವ ಇವತ್ತಿನ ಸಂದರ್ಭದಲ್ಲಿ ಶಿಕ್ಷಣ ಯಾವ ದಿಕ್ಕಿನತ್ತ ಸಾಗುತ್ತಿದೆ ಎನ್ನುವ ಕುರಿತು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ವಿದ್ಯೆಯನ್ನು ದೇಶ ಕಟ್ಟುವ ಕೆಲಸಕ್ಕೆ ಬಳಸಿಕೊಳ್ಳಬೇಕೆ ಹೊರತು ಸಮಾಜ ಒಡೆಯಲು ಅಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಸುವರ್ಣ ಸಾಗರ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯಗಳಲ್ಲಿ ಹೆಚ್ಚು ಶಿಕ್ಷಣ ಪಡೆದವರೆ ಇರುವುದು ಆತಂಕಕಾರಿ ಬೆಳವಣಿಗೆ. ನಾವು ಕಲಿತ ವಿದ್ಯೆಯನ್ನು ಸಮಾಜ ಒಡೆಯಲು ಬಳಸಿಕೊಳ್ಳದೆ ಸಮಾಜ ಕಟ್ಟುವ ಕೆಲಸಕ್ಕೆ ಬಳಸಿಕೊಂಡರೆ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.ಶಾಲೆ, ಕಾಲೇಜುಗಳು ಕೇವಲ ಶಿಕ್ಷಣ ಕೊಡುವ ಕೇಂದ್ರವಲ್ಲ. ಜೀವನಮೌಲ್ಯವನ್ನು ಕಲಿಸುವ, ವ್ಯಕ್ತಿತ್ವ ನಿರ್ಮಾಣ ಮಾಡುವ ಕೇಂದ್ರ. ಪ್ರತಿಯೊಬ್ಬ ವಿದ್ಯಾರ್ಥಿಗೂ ಪಿಯು ಹಂತ ಅಮೂಲ್ಯವಾದದ್ದು. ಈ ಹಂತದಲ್ಲಿ ವಿದ್ಯಾರ್ಥಿಗಳು ಹೆಚ್ಚು ಜಾಗೃತೆಯಿಂದಿದ್ದು, ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು. ಸಾಗರ ಪ್ರತಿಭಾನ್ವಿತರ ಊರಾಗಿದ್ದು, ಶಕ್ತಿ ನಿರ್ಮಾಣ ಕೇಂದ್ರವಾಗಿರುವ ಈ ಕಾಲೇಜು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಅಭಿಮಾನದ ಸಂಗತಿ ಎಂದರು.ಮಾಜಿ ಸಚಿವ ಎಚ್.ಹಾಲಪ್ಪ ಮಾತನಾಡಿ, ಹದಿಹರೆಯದ ವಯಸ್ಸು ಅಪಾಯಕಾರಿಯಾಗಿದ್ದು, ಈ ಹಂತದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಶ್ರದ್ಧೆಯಿಂದ ವಿದ್ಯೆಯನ್ನು ಕಲಿತು, ಸರಿಯಾದ ಮಾರ್ಗದರ್ಶನ ಪಡೆದು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.

ಚಲನಚಿತ್ರ ಕಲಾವಿದ ಅರುಣ್‌ಸಾಗರ್ ಮಾತನಾಡಿ, ಪ್ರತಿ ಶಿಕ್ಷಣ ಕೇಂದ್ರವೂ ಚೆನ್ನಾಗಿ ಬದುಕುವುದನ್ನು ಕಲಿಸುವ, ಮನುಷ್ಯತ್ವವನ್ನು ಹೇಳಿಕೊಡುವ ಸ್ಥಳ. ತರಗತಿಯ ಕೋಣೆ ನಾಲ್ಕು ಗೋಡೆಗಳ ಕಟ್ಟಡ ಅಲ್ಲ. ಆ ಗೋಡೆಗಳ ಮಧ್ಯೆ ಇರುವ ಜ್ಞಾನ ಎಂದರು.

ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಶಾಲಾ ಕಾಲೇಜು ದಿನಗಳ ಋಣಾತ್ಮಕ ಅಂಶಗಳನ್ನು ಭವಿಷ್ಯದಲ್ಲಿ ಧನಾತ್ಮಕವಾಗಿ ತೆಗೆದುಕೊಳ್ಳಬೇಕು. ವಿದ್ಯೆಗಿಂತ ಬುದ್ಧಿ ಮುಖ್ಯ. ಪ್ರತಿ ವಿದ್ಯಾರ್ಥಿಯೂ ವಿದ್ಯೆ ಕಲಿತು ಬುದ್ಧಿವಂತರಾಗುವತ್ತ ಗಮನ ಹರಿಸಬೇಕು ಎಂದರಲ್ಲದೆ, ಈ ಕಾಲೇಜಿಗೆ ಅವಶ್ಯಕತೆಯಿರುವ ಲ್ಯಾಬ್‌ಗೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ತಾವು ಮೊದಲ ಬಾರಿಗೆ ಕ್ಷೇತ್ರದ ಶಾಸಕನಾದಾಗ ಈ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡಿದ್ದೇನೆ. ಈಗ ಎರಡನೇ ಬಾರಿಗೆ ಶಾಸಕನಾದಾಗಲೂ ಕಾಲೇಜಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದೇನೆ. ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿರುವ ನಾನು ಯಾರೊಬ್ಬರೂ ಶಿಕ್ಷಣ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಕ್ಷೇತ್ರದ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಿರುವುದಾಗಿ ಹೇಳಿದರು.ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಪ್ಪ ಎಸ್.ಗುಂಡಪಲ್ಲಿ, ಸಂತೋಷಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಬಿ.ಎ.ಇಂದೂಧರ ಗೌಡ, ಸದಸ್ಯರಾದ ಉಮೇಶ್, ಭವ್ಯ ಕೃಷ್ಣಮೂರ್ತಿ, ಸಲೀಂ ಯೂಸೂಫ್, ಉಪನ್ಯಾಸಕ ಡಾ.ಸರ್ಫ್ರಾಜ್ ಚಂದ್ರಗುತ್ತಿ ಮತ್ತಿತರರು ಹಾಜರಿದ್ದರು.

ಉಪನ್ಯಾಸಕ ಜಿ.ಪರಶುರಾಮಪ್ಪ ಸ್ವಾಗತಿಸಿದರು. ಪ್ರಾಚಾರ್ಯ ಕೆ.ಸಿ.ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಗಾರಪ್ಪ ವಂದಿಸಿದರು. ಎಲ್.ಎಂ.ಹೆಗಡೆ ನಿರೂಪಿಸಿದರು.