ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಪ್ರಯತ್ನ ದೇಶದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಆದ್ದರಿಂದ ಸಂವಿಧಾನ ಉಳಿಸುವ ಕೆಲವನ್ನು ದೇಶದ ಜನರೇ ಮಾಡಬೇಕು. ದೇಶದಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಮಾಜವನ್ನು ಒಡೆಯುವ ಕಾರ್ಯವನ್ನು ಕೂಡ ಮಾಡುತ್ತಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಐದು ವರ್ಷಗಳಿಗೊಮ್ಮೆ ಜನರಿಗೆ ದೊರೆಯುವ ತಪ್ಪು ಸರಿಪಡಿಸಿಕೊಳ್ಳುವ ಅವಕಾಶವಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಬಿಜೆಪಿ ಸರ್ಕಾರವನ್ನು ಮತದಾರರು ಬದಲಿಸಬೇಕು ಎಂದು ಶಾಸಕ ತನ್ವೀರ್‌ಸೇಠ್ ಕರೆ ನೀಡಿದರು.ನಗರ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಭಾರತ ಸಂವಿಧಾನ ಬಚಾವೋ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಪ್ರತಿಯೊಂದಕ್ಕೂ ಆಧಾರ್ ಜೋಡಣೆ ಮಾಡಲು ಆಸಕ್ತಿ ತೋರಿದಂತೆ ಮತದಾರರ ಗುರುತಿನ ಚೀಟಿಯೊಂದಿಗೆ ಮತದಾರರ ಗುರುತಿನ ಚೀಟಿ ಜೋಡಿಸುವ ಕೆಲಸ ಏಕೆ ಮಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ದೇಶದ ವಿವಿಧೆಡೆ ನಡೆದ ಚುನಾವಣೆಯಲ್ಲಿ ಸಾಕಷ್ಟು ಲೋಪವಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಅನರ್ಹರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಆಗಿದ್ದಾರೆ. ಅಂತೆಯೇ ಅರ್ಹರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಸಂವಿಧಾನ ಆಶಯವನ್ನು ಬುಡಮೇಲು ಮಾಡುವವರು ಈಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದು, ಜನರು ಮಾಡಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ಐದು ವರ್ಷಕ್ಕೊಮ್ಮೆ ಎದುರಾಗುವ ಚುನಾವಣೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಪ್ರಯತ್ನ ದೇಶದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಆದ್ದರಿಂದ ಸಂವಿಧಾನ ಉಳಿಸುವ ಕೆಲವನ್ನು ದೇಶದ ಜನರೇ ಮಾಡಬೇಕು. ದೇಶದಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಮಾಜವನ್ನು ಒಡೆಯುವ ಕಾರ್ಯವನ್ನು ಕೂಡ ಮಾಡುತ್ತಿದೆ ಎಂದರು.
ನಗರದ ವಿಶ್ವಮೈತ್ರಿ ಬುದ್ಧವಿಹಾರದ ಕಲ್ಯಾಣಸಿರಿ ಬಂತೇಜಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶವನ್ನು 562 ಸಂಸ್ಥಾನಗಳು ಆಳ್ವಿಕೆ ನಡೆಸುತ್ತಿದ್ದವು. ಆ ಸಂದರ್ಭದಲ್ಲಿ ಮೇಲು, ಕೀಳು, ಜಾತಿ ವ್ಯವಸ್ಥೆ ತೀವ್ರವಾಗಿತ್ತು. ಜನರ ಸ್ಥಿತಿ ಚಿಂತಾಜನಕವಾಗಿತ್ತು. ಆದರೆ, ಸಂವಿಧಾನ ರಚನೆಯ ನಂತರ ಎಲ್ಲರಿಗೂ ಸಮಾನ ಅವಕಾಶ ದೊರೆಯಲು ಪ್ರಾರಂಭವಾಗಿದ್ದಾಗಿ ಅವರು ಹೇಳಿದರು.ಚಿಂತಕ ಪ್ರೊ. ಜಯಪ್ರಕಾಶ್ ಗೌಡ ಮಾತನಾಡಿ, ಸಂವಿಧಾನ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳಬೇಕು. ಜಗತ್ತಿನ ಎಲ್ಲಾ ದಾರ್ಶನಿಕರ ಚಿಂತನೆಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ. ಇಂತಹ ಸಂವಿಧಾನವನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಅವರು ತಿಳಿಸಿದರು.
ರಾಮ ಹಾಗೂ ಹನುಮಂತನ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ಸಂವಿಧಾನ ಎಲ್ಲರನ್ನೂ ಒಗ್ಗೂಡಿಸುತ್ತಿದೆ. ಒಂದು ದೇಶ, ಒಂದು ಧರ್ಮ ಹಾಗೂ ಒಂದು ಸಂಸ್ಕೃತಿ ಹೆಸರಿನಲ್ಲಿ ದೇಶದ ಬಹುತ್ವವನ್ನು ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ಇದನ್ನು ಪ್ರಶ್ನಿಸುವ ಮನಸ್ಸು ಬೆಳೆಸಿಕೊಳ್ಳಬೇಕು ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ ಕುಮಾರ್ ಮಾತನಾಡಿ, ದೇಶದಲ್ಲಿ ಸಂವಿಧಾನ ಆಶಯ ಹಾಗೂ ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಇದನ್ನು ಜನರಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಅರ್. ಮೂರ್ತಿ, ಮಾಜಿ ಮೇಯರ್ ಗಳಾದ ಟಿ.ಬಿ. ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಬಿ.ಎಲ್. ಭೈರಪ್ಪ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಮೊದಲಾದವರು ಇದ್ದರು.