ಸಾರಾಂಶ
ವಾಡಿಕೆಯಂತೆ ಪಟಾಕಿ ಹಚ್ಚುವುದಾದರೇ ರಾಸಾಯನಿಕ ಪಟಾಕಿ ಕೈಬಿಡಿ, ಪರಿಸರ ಸ್ನೇಹಿ ಹಸಿರು ಪಟಾಕಿ ಬಳಸಬೇಕು
ಹೊಸಪೇಟೆ: ದೀಪಾವಳಿಯನ್ನು ಸಾಂಪ್ರದಾಯಿಕವಾಗಿ ದೀಪಗಳನ್ನು ಬೆಳಗುವ ಮೂಲಕ ಸಂಭ್ರಮದಿಂದ ಆಚರಿಸಿ, ವಾಡಿಕೆಯಂತೆ ಪಟಾಕಿ ಹಚ್ಚುವುದಾದರೇ ರಾಸಾಯನಿಕ ಪಟಾಕಿ ಕೈಬಿಡಿ, ಪರಿಸರ ಸ್ನೇಹಿ ಹಸಿರು ಪಟಾಕಿ ಬಳಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸಲಹೆ ನೀಡಿದರು.
2018ರ ರಾಷ್ಟ್ರೀಯ ಹಸಿರು ಪ್ರಾಧಿಕಾರದ ಆದೇಶದಂತೆ ಸಿಎಸ್‌ಐಆರ್ ಮತ್ತು ಎನ್‌ಇಇಆರ್‌ಐ ಅವರ ಶಿಫಾರಸು ಮಾಡಿದ ಹಾಗೂ ಸರ್ವೋಚ್ಚ ನ್ಯಾಯಾಲಯ ಮಾಗದರ್ಶನದಂತೆ ಕಡ್ಡಾಯವಾಗಿ ಪರಿಸರ ಸ್ನೇಹಿ ಪಟಾಕಿಗಳನ್ನು ಬಳಸಬೇಕು. ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಇರುತ್ತದೆ. ಕ್ಯೂಆರ್ ಕೋಡ್ ಇರುತ್ತದೆ. ಚಿಹ್ನೆ ಇಲ್ಲದ ಪಟಾಕಿ ಹಸಿರು ಪಟಾಕಿಯೆನಿಸುವುದಿಲ್ಲ ಮತ್ತು ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಪ್ರಮುಖವಾಗಿ ಹಸಿರು ಪಟಾಕಿ ತಯಾರಕರಿಗೆ ಹಾಗೂ ಮಾರಾಟಗಾರರಿಗೆ ಮಾತ್ರ ಅನುಮತಿ ನೀಡಲಾಗಿದೆ. ಪಟಾಕಿಗಳನ್ನು ಬಳಸುವಾಗ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗದಂತೆ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸಮಯ ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಹಚ್ಚಲು ಅವಕಾಶ ನೀಡಲಾಗಿದೆ. ಯಾವುದೇ ಸ್ಥಳೀಯ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಹಾಗೂ ನಿಷೇಧಿತ ಪ್ರದೇಶದಲ್ಲಿ ಪಟಾಕಿಗಳನ್ನು ಹಚ್ಚುವಂತಿಲ್ಲ. ಈ ನಿಯಮವನ್ನು ಕಡ್ಡಾಯವಾಗಿ ಸಾರ್ವಜನಿಕರು ಪಾಲಿಸಬೇಕು. ಹೊರ ರಾಜ್ಯಗಳಿಂದ ಅನಧಿಕೃತವಾಗಿ ಯಾವುದೇ ರೀತಿಯ ನಿಷೇಧಿತ ಪಟಾಕಿಗಳು ಹಾಗೂ ಸಂಬಂಧಿತ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದೂ ತಿಳಿಸಿದ್ದಾರೆ.