ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಹಾಸ್ಟೆಲ್‌ಗಳಲ್ಲಿ ಪ್ರಧಾನವಾಗಿ ಸ್ವಚ್ಛತೆ ಕಾಪಾಡಬೇಕು. ಅಕ್ಕಿ, ಎಣ್ಣೆ ಹಾಗೂ ತರಕಾರಿಗಳ ಗುಣಮಟ್ಟ ಪರಿಶೀಲಿಸಿ ಅಡುಗೆಗೆ ಬಳಸುವುದರಿಂದ ಉತ್ತವಾದ ಆರೋಗ್ಯ ಕಾಪಾಡಬಹುದು ಎಂದು ಎಡಿಸಿ ಮಂಗಳಾ ಹೇಳಿದರು.ನಗರದ ಜಿಲ್ಲಾಧಿಕಾರಿ ಕಛೇರಿಯ ಆಡಿಟೋರಿಯಂನಲ್ಲಿ ವಸತಿ ನಿಲಯ ಮತ್ತು ವಸತಿ ಶಾಲೆಗಳ ಅಧಿಕಾರಿ ಮತ್ತು ಸಿಬ್ಬಂದಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಹಾಗೂ ತಂಬಾಕು ನಿಯಂತ್ರಣ ಕಾಯ್ದೆಯ ಬಗ್ಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಸಿಬ್ಬಂದಿ ಸ್ವಚ್ಛ ಉಡುಗೆ ಧರಿಸಿ
ಹಾಸ್ಟೆಲ್‌ಗಳಲ್ಲಿನ ಅಡುಗೆ ಕೋಣೆಗಳ ಸ್ವಚ್ಛತೆ, ಪಾತ್ರಗಳ ಸ್ವಚ್ಛತೆ ಕಡೆಗೆ ಗಮನಹರಿಸಬೇಕು, ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಅಡುಗೆಗೆ ಬಳಸಬೇಕು, ಅಡುಗೆ ಸಾಮಾಗ್ರಿಗಳನ್ನು ಸೂಕ್ತ ಸ್ಥಳಗಳಲ್ಲಿ ಶೇಖರಣೆ ಮಾಡಬೇಕು. ಸಲಕರಣೆಗಳನ್ನು ನಿರ್ದಿಷ್ಟ ಸಮಯಕ್ಕೆ ಸದುಪಯೋಗ ಪಡಿಸಿಕೊಂಡು ಅವುಗಳನ್ನು ಬಳಸಬೇಕು. ಅಡುಗೆ ಸಿಬ್ಬಂದಿಯವರು ಸ್ವಚ್ಛ ಉಡುಗೆ ತೊಡುಗೆ ಧರಿಸಿಕೊಂಡು ಅಡುಗೆ ಮಾಡಬೇಕು ಎಂದರು. ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ಕೊಠಡಿಗಳನ್ನು ಮೀಸಲಿಡಬೇಕು, ಯಾವುದೇ ಕಾರಣಕ್ಕೂ ಮಕ್ಕಳನ್ನು ಅಡುಗೆ ಮಾಡುವ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಾರದು. ಶೌಚಾಲಯಗಳನ್ನು ಹಾಗೂ ಹಾಸ್ಟೆಲ್‌ಗಳ ಸುತ್ತ-ಮುತ್ತಲಿನ ವಾತಾವರಣ ಸ್ವಚ್ಛವಾಗಿ ಇಟ್ಟಿಕೊಳ್ಳಬೇಕು. ಈ ತರಬೇತಿ ಕಾರ್ಯಾಗಾರದಲ್ಲಿ ನಿಯಮಗಳು ಹಾಗೂ ಕಾಯ್ದೆಗಳ ಬಗ್ಗೆ ಸರಿಯಾಗಿ ಅರಿತುಕೊಂಡು ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.ಸಮಸ್ಯೆ ಬಗ್ಗೆ ಮಾಹಿತಿ ನೀಡಿಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸನ್ ಮಾತನಾಡಿ, ಕರ್ನಾಟಕದಲ್ಲಿಯೇ ಪ್ರಪ್ರಥಮವಾಗಿ ವಸತಿ ಶಾಲೆಗಳನ್ನು ಹೊಂದಿರುವ ಮೂರು ಇಲಾಖೆಗಳು ಜಂಟಿಯಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಹಾಸ್ಟೆಲ್‌ಗಳ ಯಾವುದೇ ಸಮಸ್ಯೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಿಳಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ತಮ್ಮ-ತಮ್ಮ ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದರು. ಹಾಸ್ಟೆಲ್‌ಗಳಲ್ಲಿ ಶೌಚಾಲಯಗಳ ಅಸ್ವಚ್ಛತೆ, ಮಕ್ಕಳು ತಂಬಾಕು ಸೇವೆನೆಯಂತಹ ಘಟನೆಗಳು ಮುರುಕಳಿಸದಂತೆ ಎಚ್ಚರ ವಹಿಸಬೇಕು. ಹಾಸ್ಟೆಲ್‌ಗಳಲ್ಲಿ ಮತ್ತು ವಸತಿ ಶಾಲೆಗಳಲ್ಲಿ ಹೆಚ್ಚಿನ ಅಂಕ ಪಡೆದವರಿಗೆ ಪ್ರೋತ್ಸಾಹಕವಾಗಿ ಬಹುಮಾನಗಳನ್ನು ನೀಡಲಾಗುತ್ತದೆ.
ಈ ವರ್ಷ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ವಸಂತ ಕುಮಾರ್ ಆರ್.ಸಿರಿಗೆ ೪೫ ಸಾವಿರ ರೂಗಳ ನಗದು ಹಾಗೂ ಮೀತನ್‌ಗೆ ೫ ಸಾವಿರ ರು.ಗಳ ಬಹುಮಾನ ನೀಡಲಾಗಿದೆ. ಉತ್ತಮವಾದ ಸಾಧನೆಗಳನ್ನು ಮುಂದೆ ಮಾಡುವುದರಿಂದ ತಂದೆ-ತಾಯಿಯರಿಗೆ, ಶಾಲಾ-ಕಾಲೇಜುಗಳಿಗೆ ಹಾಗೂ ಹಾಸ್ಟೆಲ್‌ಗಳಿಗೆ ಉತ್ತಮ ಹೆಸರು ಬರುತ್ತದೆ ಎಂದರು.ಅಲ್ಪಸಂಖ್ಯಾತರ ಜಿಲ್ಲಾ ಅಧಿಕಾರಿ ಮೈಲಾರಪ್ಪ, ಉಪನ್ಯಾಸಕ ಮಹಮ್ಮದ್, ಜಿಲ್ಲಾ ಸುರಕ್ಷತಾ ಅಧಿಕಾರಿ ರಾಕೇಶ್ ಕುಮಾರ್ ಇದ್ದರು.