ಸಾರಾಂಶ
ಅನುಕೂಲವಾಗುವ ಜೊತೆಗೆ ಆಡಳಿತ ಉತ್ತಮವಾಗಿ ನಡೆಯಲು ಸಾಧ್ಯವಾಗಲಿದೆ.
ಕಾರವಾರ: ರಾಜ್ಯದ ಆಡಳಿತದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಬಳಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಕನ್ನಡವನ್ನು ತಮ್ಮ ಹೃದಯಕ್ಕೆ ತೆಗೆದುಕೊಂಡು ಬಳಸುವ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಶೇ.100 ಕನ್ನಡ ಬಳಕೆಯಾಗುವಂತೆ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಆಡಳಿತ ವ್ಯವಸ್ಥೆಯಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಬಳಸಿದ್ದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಜೊತೆಗೆ ಆಡಳಿತ ಉತ್ತಮವಾಗಿ ನಡೆಯಲು ಸಾಧ್ಯವಾಗಲಿದೆ. ಇದರಿಂದ ಜನತೆ ಮತ್ತು ಪ್ರಭುತ್ವದ ನಡುವಿನ ಅಂತರ ಇದರಿಂದ ಕಡಿಮೆಯಾಗಲಿದೆ ಎಂದರು.
ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್, ಕನ್ನಡ ಅಭಿವೃದ್ದಿ ಪ್ರಾಧಿಕಾರವು ರಾಜ್ಯಾದ್ಯಂತ 19 ಜಿಲ್ಲೆಗಳು ಮತ್ತು 17 ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿದ್ದು, 2008ರ ನಂತರ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದೆ. ಕನ್ನಡ ಭಾಷೆ ಪರ ಕಾನೂನಾತ್ಮಕವಾಗಿ ಹೋರಾಟ ನಡೆಸಿದ ಕನ್ನಡ ಪರ ಹೋರಾಟ ಸಂಘಟನೆಗಳ ಸದಸ್ಯರ ಮೇಲೆ ಹಾಕಿರುವ ಪ್ರಕರಣಗಳನ್ನು ಸರ್ಕಾರ ವಾಪಸ್ ಪಡೆಯಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಬೇಕು ಎಂದರು.ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಲ್ಲೆಯ ಆಡಳಿತ ವ್ಯವಸ್ಥೆಯಲ್ಲಿ ಕನ್ನಡವನ್ನು ಶೇ.100ರಷ್ಟು ಬಳಸುತ್ತಿದ್ದು, ಕೇಂದ್ರ ಸರ್ಕಾರದ ಸಂಸ್ಥೆಗಳೊಂದಿಗೆ ಮಾತ್ರ ಇಂಗ್ಲೀಷ್ ಮೂಲಕ ಪತ್ರ ಸಂವಹನ ನಡೆಸುತ್ತಿದೆ. ಜಿಲ್ಲಾಡಳಿತದಿಂದ ಹೊರಡಿಸುವ ಸುತ್ತೋಲೆ ಟಿಪ್ಪಣಿಗಳು ಕನ್ನಡದಲ್ಲಿಯೇ ಇದ್ದು, ಸಾರ್ವಜನಿಕರ ಅರ್ಜಿಗಳಿಗೆ ಕನ್ನಡದಲ್ಲಿಯೇ ಉತ್ತರಿಸಲಾಗುತ್ತಿದೆ ಎಂದರು.
ಪ್ರಾಧಿಕಾರದ ಸದಸ್ಯ ಯಾಕೂಬ್ ಖಾದರ್ ಗುಲ್ವಾಡಿ, ಜಿಪಂ ಸಿಇಒ ಡಾ.ದಿಲೀಷ್ ಶಶಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಝುಪಿಶಾನ ಹಕ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಅಧ್ಯಕ್ಷರ ಅಪ್ತ ಕಾರ್ಯದರ್ಶಿ ಫಣಿ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಇದ್ದರು.